ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಜತೆ ಪ್ರವಾಸೋದ್ಯಮಕ್ಕೆ ಒತ್ತು

ತಿ.ನರಸೀಪುರ ಕ್ಷೇತ್ರದ ಶಾಸಕ ಅಶ್ವಿನ್‌ ಕುಮಾರ್‌ ಮನದ ಮಾತು
Last Updated 18 ಜೂನ್ 2018, 5:47 IST
ಅಕ್ಷರ ಗಾತ್ರ

ಮೈಸೂರು: ತಿ.ನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದಿರುವ ಎಂ.ಅಶ್ವಿನ್‌ ಕುಮಾರ್‌ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಜತೆಗೆ ತಾಲ್ಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಕಲ್ಪಿಸುವ ಗುರಿ ಇಟ್ಟುಕೊಂಡಿದ್ದಾರೆ. ಸತತ 15 ವರ್ಷಗಳಿಂದ ಏಕವ್ಯಕ್ತಿಯ ಹಿಡಿತದಲ್ಲಿದ್ದ ತಿ.ನರಸೀಪುರದಲ್ಲಿ ಬದಲಾವಣೆ ತರಲು ಮುಂದಾಗಿರುವ ಅವರೊಂದಿಗಿನ ಸಂದರ್ಶನದ ವಿವರ ಇಲ್ಲಿದೆ.

ಹೊಸ ಜವಾಬ್ದಾರಿ ಹೇಗೆ ನಿಭಾಯಿಸುವಿರಿ?

ಆಯಾ ಸಂದರ್ಭ, ಪರಿಸ್ಥಿತಿಗೆ ತಕ್ಕಂತೆ ಕೆಲಸ ಮಾಡಬೇಕಿದೆ. ನಾನು ಈಗಾಗಲೇ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಎರಡೂವರೆ ವರ್ಷ ಕೆಲಸ ಮಾಡಿರುವುದರಿಂದ ಹೊಸ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ನನ್ನಲ್ಲಿದೆ. ಅಧಿಕಾರಿಗಳ ಜತೆ ಸೇರಿಕೊಂಡು ಕೆಲಸ ಮಾಡಲು ಬದ್ಧನಾಗಿದ್ದೇನೆ.

ಗೆಲುವಿಗೆ ಕಾರಣವಾದ ಅಂಶಗಳು...

ಜನರ ಜತೆ ಒಡನಾಟ ಇಟ್ಟುಕೊಂಡಿದ್ದೆ. ಅವರ ನಡುವೆಯೇ ಇದ್ದುಕೊಂಡು ಕೆಲಸ ಮಾಡಿದ್ದರಿಂದ ಗೆಲುವು ಸಾಧ್ಯವಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದುಕೊಂಡು ಮಾಡಿರುವ ಕೆಲಸವನ್ನು ಜನರು ಗುರುತಿಸಿದ್ದಾರೆ.

ಸಚಿವರನ್ನೇ ಸೋಲಿಸಿರುವ ನಿಮ್ಮ ಮೇಲೆ ನಿರೀಕ್ಷೆಯೂ ಹೆಚ್ಚಿದೆ...

ಜನರ ನಡುವೆ ಇದ್ದು ಕೆಲಸ ಮಾಡಬೇಕು ಎಂಬುದು ತಿ.ನರಸೀಪುರ ಕ್ಷೇತ್ರದ ಜನರ ಬಯಕೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ನಾವು ಜನರ ಮಧ್ಯೆ ಇದ್ದುಕೊಂಡೇ ಕೆಲಸ ಮಾಡಬೇಕಿದೆ. ಜನರು ನನ್ನ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವುದು ನಿಜ. ಆ ನಿರೀಕ್ಷೆಗಳನ್ನು ಈಡೇರಿಸುವ ವಿಶ್ವಾಸವಿದೆ. ಅದರಲ್ಲಿ ಯಾವುದೇ ಸಂದೇಹ ಬೇಡ.

ಕ್ಷೇತ್ರದಲ್ಲಿ ಬದಲಾವಣೆ ಕಾಣಲು ಎಷ್ಟು ಸಮಯ ಬೇಕು?

ಸಾಧ್ಯವಾದಷ್ಟು ಬೇಗ ಬದಲಾವಣೆ ಕಾಣಬಹುದು. ವಿಧಾನ ಪರಿಷತ್‌ ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ಇದುವರೆಗೆ ಅಧಿಕಾರಿಗಳ ಸಭೆಯನ್ನು ನಡೆಸಲು ಆಗಿಲ್ಲ. ಮುಂದಿನ ದಿನಗಳಲ್ಲಿ ಸಭೆ ನಡೆಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವೆ.

ಜನಸ್ನೇಹಿ ಆಡಳಿತ ನೀಡಬೇಕಾದರೆ ಎಲ್ಲರ ಜತೆ ಕುಳಿತು ಚರ್ಚಿಸಬೇಕು. ಜಿ.ಪಂ. ಸದಸ್ಯನಾಗಿದ್ದರಿಂದ ಕ್ಷೇತ್ರದ ಆಗುಹೋಗುಗಳ ಅರಿವಿದೆ. ಬದಲಾವಣೆ ಯಾವ ರೀತಿ ಇರಬೇಕು ಎಂಬುದನ್ನು ಪರಿಶೀಲಿಸಿ ಆ ಹಾದಿಯಲ್ಲಿ ಹೆಜ್ಜೆಯಿಡುತ್ತೇನೆ.

ತಲಕಾಡು ಅಭಿವೃದ್ಧಿಗೆ ಒತ್ತು ನೀಡುವಿರಾ?

ತಲಕಾಡು ಮಾತ್ರವಲ್ಲ, ಇಡೀ ತಿ.ನರಸೀಪುರ ತಾಲ್ಲೂಕನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ದೊಡ್ಡ ಮಟ್ಟಿನ ಯೋಜನೆ ಹಾಕಿಕೊಂಡಿದ್ದೇನೆ. ಕ್ಷೇತ್ರದ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು, ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವ ಕೆಲಸ ಮಾಡುತ್ತೇನೆ. ಸೋಮನಾಥಪುರ ದೇವಾಲಯ ವಿಶ್ವದಲ್ಲೇ ಖ್ಯಾತಿ ಪಡೆದಿರುವ ತಾಣ. ಅಲ್ಲಿ ಪ್ರವಾಸಿಗರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ಕ್ರಮ ವಹಿಸಬೇಕಿದೆ.

ಮರಳು ಕೂಲಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಏನು ಕ್ರಮ ಕೈಗೊಳ್ಳುವಿರಿ?

ಮರಳು ಗಣಿಗಾರಿಕೆಯ ಅಕ್ರಮ–ಸಕ್ರಮದ ಬಗ್ಗೆ ಗೊಂದಲವಿದ್ದು, ಅದನ್ನು ಮೊದಲು ಬಗೆಹರಿಸಬೇಕಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಚರ್ಚಿಸಿ ಎಲ್ಲ ಕೂಲಿಕಾರ್ಮಿಕರಿಗೆ ಏನಾದರೂ ಒಳ್ಳೆಯದಾಗುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲು ಪ್ರಯತ್ನಿಸುತ್ತೇನೆ.

ಮೊದಲ ಯತ್ನದಲ್ಲೇ ಜಯ

ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಕಣಕ್ಕಿಳಿದಿದ್ದ ಎಂ.ಅಶ್ವಿನ್‌ ಕುಮಾರ್‌ ಅವರು ಅನುಭವಿ ಹಾಗೂ ಹಿರಿಯ ರಾಜಕಾರಣಿ ಡಾ.ಎಚ್‌.ಸಿ.ಮಹದೇವಪ್ಪ ಅವರಿಗೆ ಆಘಾತ ನೀಡಿ ಜಯ ಗಳಿಸಿದರು.

ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಅವರು, ಜೆಡಿಎಸ್‌ನಿಂದ ಸ್ಪರ್ಧಿಸಿ 28,478 ಮತಗಳಿಂದ ಗೆಲುವು ಪಡೆದರು. 36ರ ಹರೆಯದ ಅವರು ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾಲಯದಿಂದ ಎಂ.ಟೆಕ್‌ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT