ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕಸ ವಿಲೇವಾರಿ ಸಮಸ್ಯೆ; ರಟ್ಟೀಹಳ್ಳಿ ಜನರಿಗೆ ತಪ್ಪದ ಕಿರಿಕಿರಿ

ಹೂಳು ತುಂಬಿದ ಚರಂಡಿಗಳಿಂದ ದುರ್ವಾಸನೆ: ನಿವಾಸಿಗಳಿಗೆ ಸೊಳ್ಳೆ ಕಾಟ
Last Updated 26 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಪಟ್ಟಣದಲ್ಲಿ ವಿದ್ಯಾರ್ಥಿಗಳು ಓಡಾಡುವ ಕಾಲೇಜು ರಸ್ತೆ ಸಮರ್ಪಕೆ ನಿರ್ವಹಣೆಯಿಲ್ಲದೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಕುಮಾರೇಶ್ವರ ಕಾಲೇಜಿಗೆ ವಿದ್ಯಾರ್ಥಿಗಳು ಗಲೀಜು, ದುರ್ವಾಸನೆ ನಡುವೆ ಒಲ್ಲದ ಮನಸ್ಸಿನಿಂದ ಓಡಾಡುವಂತಾಗಿದೆ.

ಸುಮಾರು 200ಕ್ಕೂ ಅಧಿಕ ಮನೆಗಳಿದ್ದು, ಸಾರ್ವಜನಿಕರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಕಾಂಕ್ರೀಟ್‌ ಅಳವಡಿಸಿದ್ದರೂ ಕಸದ ತೊಟ್ಟಿ ಇಲ್ಲದೆ ಎಲ್ಲೆಂದರಲ್ಲಿ ಕಸವನ್ನು ತಂದು ಎಸೆಯುತ್ತಾರೆ. ಸ್ವಚ್ಛತೆ ಕಾಣದ ಗಟಾರಗಳ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ.

ಇನ್ನು ಸಂಜೆಯಾಗುತ್ತಲೇ ಮನೆಗಳಿಗೆ ದಾಳಿ ಇಡುವ ಸೊಳ್ಳೆಗಳ ಕಾಟವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಪಟ್ಟಣ ಪಂಚಾಯ್ತಿ ಚರಂಡಿ ಸ್ವಚ್ಛತೆಗೆ ಹಾಗೂ ಕಸದ ರಾಶಿಗಳನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ. ಜನರು ದುರ್ವಾಸನೆಯಿಂದ ಬೇಸತ್ತು ಹೋಗಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ

ಸಾರ್ವಜನಿಕರು ಕೂಡ ಸಂಕೋಚವಿಲ್ಲದೆ ಮಕ್ಕಳನ್ನು ಬಯಲಲ್ಲಿ ಬಹಿರ್ದೆಸೆಗೆ ಕೂರಿಸುತ್ತಾರೆ. ಚರಂಡಿಯಲ್ಲಿ ಕಸವನ್ನು ಎಸೆಯುವುದನ್ನು ನಿಲ್ಲಿಸಬೇಕು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಸಾರ್ವಜನಿಕರ ಸಹಕಾರ ಅತಿ ಮುಖ್ಯ. ಪಟ್ಟಣ ಪಂಚಾಯ್ತಿಯಿಂದ ಕಸದ ತೊಟ್ಟಿ ನಿರ್ಮಿಸಬೇಕು ಎಂದು ಇಲ್ಲಿನ ನಿವಾಸಿ ಜಾವೀದ್ ಗೋಡಿಹಾಳ ತಿಳಿಸಿದರು.

ಶ್ರೀ ಕುಮಾರೇಶ್ವರ ಕಾಲೇಜು ರಸ್ತೆ, ಹಾಗೂ ಕುಂಬಾರ ಓಣಿಗೆ ಹೊಂದಿಕೊಂಡಿರುವ ಈ ರಸ್ತೆಯ ತುಂಬಾ ಕಸದ ರಾಶಿ ಬಿದ್ದಿದ್ದು, ಕೆಟ್ಟ ವಾಸನೆ ಬೀರುತ್ತಿದೆ. ಪಟ್ಟಣ ಪಂಚಾಯ್ತಿ ಅವರು ಇಲ್ಲಿ ಸರಿಯಾಗಿ ಚರಂಡಿ ಸ್ವಚ್ಛಗೊಳಿಸುವುದಾಗಲೀ, ಕಸ ತೆಗೆದುಕೊಂಡು ಹೋಗುವುದಾಗಲಿ ಮಾಡುವುದಿಲ್ಲ. ರಾತ್ರಿ ವೇಳೆ ಇಲ್ಲಿ ಓಡಾವುದು ಕಷ್ಟವಾಗುತ್ತದೆ. ಸಾರ್ವಜನಿಕರು ಕಸದ ರಾಶಿಯಲ್ಲಿ ಅನುಪಯುಕ್ತ ಗಾಜಿನ ಬಾಟಲಿಗಳನ್ನು ಎಸೆಯುತ್ತಾರೆ. ಇದರಿಂದ ಮಕ್ಕಳು ಇಲ್ಲಿ ಓಡಾಡುವಾಗ ಅನೇಕ ಬಾರಿ ತೊಂದರೆಗೆ ಒಳಗಾಗಿದ್ದಾರೆ ಎನ್ನುತ್ತಾರೆ ಇಲ್ಲಿನ ನಿವಾಸಿ ಮುರಗೇಶ ಚಕ್ರಸಾಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT