ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರಿಗೆ ಸರ್ಕಾರಿ ಸವಲತ್ತು ನೀಡಿ: ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗ

Last Updated 20 ಜುಲೈ 2021, 13:46 IST
ಅಕ್ಷರ ಗಾತ್ರ

ಹಾವೇರಿ: ‘ಅಪಾಯಕಾರಿ ವೃತ್ತಿಯಲ್ಲಿ ತೊಡಗಿರುವ ಹಾಗೂ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಿ, ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಡಾ.ಪಿ.ಪಿ. ವಾವಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ನಗರ ಮತ್ತು ಪಟ್ಟಣಗಳ ಸೌಂದರ್ಯಕ್ಕೆ ಪೌರಕಾರ್ಮಿಕರ ಕೊಡುಗೆ ಅಪಾರವಾಗಿದೆ.ವೈಯಕ್ತಿಕ ಜೀವನ ಹಾಗೂ ಆರೋಗ್ಯ ಕಡೆಗಣಿಸಿ ಸಾಮಾಜದ ಒಳಿತಿಗಾಗಿ, ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ. ಇಂತಹವರಿಗೆ ಮೂಲಭೂತ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ‘ಆರೋಗ್ಯ ತಪಾಸಣಾ ಶಿಬಿರ’ಗಳನ್ನು ಏರ್ಪಡಿಸಬೇಕು ಎಂದು ಸಲಹೆ ನೀಡಿದರು.

ಮ್ಯಾನ್‌ಹೋಲ್‌ ಸ್ವಚ್ಛತೆಗೆ ಯಂತ್ರ ಬಳಸಿ
‘ಕೊಳಚೆ ಪ್ರದೇಶ, ಮ್ಯಾನ್‍ಹೋಲ್‍ಗಳನ್ನು ಸ್ವಚ್ಛಗೊಳಿಸಲು ಮಾನವ ಸಂಪನ್ಮೂಲ ಬಳಸದೆ ಕಡ್ಡಾಯವಾಗಿ ಯಂತ್ರಗಳನ್ನು ಬಳಸಬೇಕು. ಆಧುನಿಕ ತಂತ್ರಜ್ಞಾನ ಯಂತ್ರಗಳನ್ನು ಬಳಕೆ ಮಾಡಿ ಸ್ವಚ್ಛತಾ ಕಾರ್ಯಕ್ಕೆ ಜನರನ್ನು ಬಳಕೆ ಮಾಡುವುದನ್ನು ಕೈಬಿಡಿ. ಮ್ಯಾನ್‍ಹೋಲ್‍ಗಳ ಸ್ವಚ್ಛತೆಗೆ ಜನರನ್ನು ಬಳಸಿದ್ದು ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ದೂರು ದಾಖಲಿಸಿ ಕಾನೂನಾತ್ಮಕ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದರು.

ಮನೆಗಳ ನಿರ್ಮಾಣ, ಸ್ವ ಉದ್ಯೋಗ ಯೋಜನೆಯಡಿ ನೆರವು, ಶಿಕ್ಷಣದ ಜೊತೆಗೆ ಜೀವನ ಶೈಲಿ ಬದಲಾಯಿಸಿಕೊಳ್ಳಲು ಎಲ್ಲ ಅಗತ್ಯ ನೆರವು ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳಿಂದ ಉತ್ತಮವಾದ ರಕ್ಷಾ ಕವಚ, ಸಮವಸ್ತ್ರ, ಉದ್ದನೆಯ ಶೂ, ಹ್ಯಾಂಡ್ ಗ್ಲೌಸ್, ಬೆಳಗಿನ ಉಪಹಾರ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸೂಚನೆ ನೀಡಿದರು.

ಶಿಕ್ಷಣ, ತರಬೇತಿ ನೀಡಿ
ಶಾಸಕ ನೆಹರು ಓಲೇಕಾರ ಮಾತನಾಡಿ, ‘ಪೌರಕಾರ್ಮಿಕರು ಅನಕ್ಷರಸ್ಥರಾಗಿರುವುದರಿಂದ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಂಚಿತರಾಗಿರುತ್ತಿದ್ದಾರೆ. ಸರ್ಕಾರದ ಸಬ್ಸಿಡಿ ಸಾಲದ ಯೋಜನೆಗಳ ಬದಲಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು. ಪೌರಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಅವಕಾಶ ಕಲ್ಪಿಸಿ ಉತ್ತಮ ಶಿಕ್ಷಣ, ಕೌಶಲ ತರಬೇತಿಗಳನ್ನು ನೀಡಿದರೆ ತಮ್ಮ ವೃತ್ತಿಯನ್ನು ಬದಲಾಯಿಸಿಕೊಂಡು ಉತ್ತಮ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಪೌರಕಾರ್ಮಿಕರಿಗೆ ವಾಸಿಸಲು ಉತ್ತಮ ವಾತಾವರಣದಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಉತ್ತಮ ಸೌಲಭ್ಯವಿರುವ ಮನೆಗಳನ್ನು ನಿರ್ಮಿಸಿಕೊಡಬೇಕು. ಇತರರಂತೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕೆಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಸಮಾಜ ಕಲ್ಯಾಣಾಧಿಕಾರಿ ಜಗದೀಶ ಹೆಬ್ಬಳ್ಳಿ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಶಿವಕುಮಾರ, ಉಡಚಪ್ಪ ಮಾಳಗಿ, ಸುಭಾಸ್ ಬೆಂಗಳೂರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT