ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ | ಹಾವೇರಿ ಜಿಲ್ಲೆಯಲ್ಲಿ ಜನಸಂಚಾರ ಸಂಪೂರ್ಣ ಸ್ತಬ್ಧ

ಅಂಗಡಿ ಮಳಿಗೆಗಳು ಬಂದ್‌: ರಸ್ತೆಗಿಳಿಯದ ಬಸ್‌, ಆಟೊ, ಟ್ಯಾಕ್ಸಿಗಳು 
Last Updated 24 ಮೇ 2020, 7:54 IST
ಅಕ್ಷರ ಗಾತ್ರ

ಹಾವೇರಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹೊಸ ಲಾಕ್‍ಡೌನ್ ಆದೇಶದನ್ವಯ ಭಾನುವಾರ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಸಂಪೂರ್ಣ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹೀಗಾಗಿ ನಗರದಲ್ಲಿ ಜನಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.

ಲಾಕ್‌ಡೌನ್‌ ಸಡಿಲಿಕೆ ಕೊಟ್ಟ ನಂತರ ಕೊರೊನಾ ಸೋಂಕನ್ನೂ ಮರೆತವರಂತೆ ಜನರು ರಸ್ತೆಗಿಳಿದು ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ವಾಹನ ದಟ್ಟಣೆಯೂ ಕೂಡ ಅಧಿಕವಾಗಿರುತ್ತಿತ್ತು. ಆದರೆ, ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿತ್ರಮಂದಿರ, ಬಾರ್‌, ರೆಸ್ಟೋರೆಂಟ್‌, ಕ್ಲಬ್‌, ಕ್ಷೌರಿಕ ಅಂಗಡಿ, ಪ್ಲಾಸ್ಟಿಕ್‌, ಬಟ್ಟೆ, ಕಬ್ಬಿಣ, ಕಿರಾಣಿ, ಜ್ಯೂಸ್‌, ಬೇಕರಿ ಮಳಿಗೆಗಳು ಸಂಪೂರ್ಣ ಮುಚ್ಚಿದ್ದವು. ಸಾರಿಗೆ ಬಸ್‌ಗಳ ಸೇವೆಯನ್ನು ಕೂಡ ಸ್ಥಗಿತಗೊಳಿಸಲಾಗಿತ್ತು. ಆಟೊ, ಟ್ಯಾಕ್ಸಿಗಳು ಕೂಡ ರಸ್ತೆಗಿಳಿಯಲಿಲ್ಲ. ನಗರದ ಸಿದ್ದಪ್ಪ ಸರ್ಕಲ್‌, ಜಿ.ಎಚ್‌.ಪಟೇಲ್‌ ಸರ್ಕಲ್‌, ಎಂ.ಜಿ.ರಸ್ತೆ, ಹಳೇ ಪಿ.ಬಿ.ರಸ್ತೆ, ಹಾನಗಲ್‌ ರಸ್ತೆ, ಗುತ್ತಲ ರಸ್ತೆ, ಕಾಗಿನೆಲೆ ರಸ್ತೆ, ಲಾಲ್‌ಬಹದ್ದೂರ್‌ ಶಾಸ್ತ್ರಿ‌ ಮಾರುಕಟ್ಟೆ, ಅಕ್ಕಿಪೇಟೆ, ಮೇಲಿನಪೇಟೆ ಜನರಿಲ್ಲದೆ ಬಿಕೋ ಎನಿಸುತ್ತಿದ್ದವು. ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ವಾಹನಗಳು ಮಾತ್ರ ಸಂಚರಿಸಿದವು. ಪೊಲೀಸ್‌ ಸಿಬ್ಬಂದಿ ಬಿಗಿ ಬಂದೋಬಸ್ತ್‌ ಒದಗಿಸಿದ್ದರು.

ಕೆಲವು ಹೋಟೆಲ್‌, ಖಾನಾವಳಿಗಳನ್ನು ತೆರೆದ ಮಾಲೀಕರು ಪಾರ್ಸಲ್‌ ಕೊಟ್ಟರು. ಹಾಲು, ತರಕಾರಿ, ಔಷಧ ಅಂಗಡಿ, ಆಸ್ಪತ್ರೆಗಳನ್ನು ತೆರೆಯಲಾಗಿತ್ತು. ತುರ್ತು ಕಾರಣ ಮತ್ತು ವೈದ್ಯಕೀಯ ಕಾರಣಗಳಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಜನರು ಕೂಡ ಅನಗತ್ಯವಾಗಿ ಓಡಾಡದೆ ಮನೆಯಲ್ಲೇ ಉಳಿದರು. ಇದರಿಂದ ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.


‘ಈದ್’ ಮೇಲೆ ಕೊರಾನಾ ಕರಿನೆರಳು ‌
ಈದ್‌ ಉಲ್‌ ಫಿತ್ರ್‌ ಅಂಗವಾಗಿ ಮುಸ್ಲಿಮರು ಪ್ರತಿವರ್ಷ ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಮತ್ತು ಇಫ್ತಾರ್‌ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಈ ವರ್ಷ ಕೊರೊನಾ ಸೋಂಕಿನಿಂದ ಸಾಮೂಹಿಕ ಪ್ರಾರ್ಥನೆ ಮತ್ತು ಇಫ್ತಾರ್‌ ಕೂಟಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.

ಪ್ರತಿ ವರ್ಷ ಈದ್‌ ಅಂಗವಾಗಿ ಹೊಸ ಬಟ್ಟೆ ಖರೀದಿಸಲು ಮುಸ್ಲಿಮರು ನಗರದ ಎಂ.ಜಿ.ರಸ್ತೆಯ ಬಟ್ಟೆ ಅಂಗಡಿಗಳಿಗೆ ಮುಗಿಬೀಳುತ್ತಿದ್ದರು. ಟೋಪಿ, ಸುರ್ಮಾ, ಸುಗಂಧ ದ್ರವ್ಯದ ಅಂಗಡಿಗಳು ತುಂಬಿ ತುಳುಕುತ್ತಿದ್ದವು. ಬಾದಾಮಿ, ಖರ್ಜೂರ, ಗೋಡಂಬಿ, ಒಣದ್ರಾಕ್ಷಿ, ಗಸಗಸೆ, ಶಾವಿಗೆ ಮುಂತಾದ ಸಾಮಗ್ರಿಗಳಿಗೆ ಇನ್ನಿಲ್ಲದ ಬೇಡಿಕೆ ಬರುತ್ತಿತ್ತು.

ಹಬ್ಬದ ಹಿಂದಿನ ದಿನ ಎಂ.ಜಿ.ರಸ್ತೆಗೆ ಕಾಲಿಡಲು ಪ್ರತಿವರ್ಷ ಜಾಗವಿರುತ್ತಿರಲಿಲ್ಲ. ಈ ಬಾರಿ ಎಲ್ಲ ಅಂಗಡಿಗಳು ಮುಚ್ಚಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ. ಹಬ್ಬದ ಸಂಭ್ರಮವೇ ಕಾಣುತ್ತಿಲ್ಲ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸರಳವಾಗಿ ಮನೆಯಲ್ಲೇ ಹಬ್ಬ ಆಚರಿಸುತ್ತಿದ್ದೇವೆ ಎಂದು ಶಂಶಾದ್‌ ಬೇಗಂ ಮುಜಾವರ್‌, ಅಫ್ರೋಜಾ ಬಾನು ಹುಲಗೂರು ತಿಳಿಸಿದರು.

ರಂಜಾನ್‌ ಪ್ರಯುಕ್ತ ಚಿಕನ್‌ ಮತ್ತು ಮಟನ್‌ ಮಾರುಕಟ್ಟೆಯನ್ನು ತೆರೆಯಲು ಭಾನುವಾರ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಹೀಗಾಗಿ ಫಿಶ್‌, ಚಿಕನ್‌, ಮಟನ್‌ ಭರ್ಜರಿ ವ್ಯಾಪಾರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT