ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕಾರ್ಯಾರಂಭವಾಗದ ಸರ್ಕಾರಿ ಕಚೇರಿ; ಜನರಿಗೆ ತಪ್ಪದ ಕಿರಿಕಿರಿ

ನಾಮಫಲಕಗಳಿಗೆ ಸೀಮಿತವಾದ ಇಲಾಖೆ ಕಟ್ಟಡಗಳು: ಕೆಲಸಕ್ಕಾಗಿ ಇಂದಿಗೂ ಹಿರೇಕೆರೂರು ಮೇಲೆ ಅವಲಂಬನೆ
Last Updated 26 ಜನವರಿ 2020, 19:30 IST
ಅಕ್ಷರ ಗಾತ್ರ

ಹಿರೇಕೆರೂರು ತಾಲ್ಲೂಕಿನಿಂದ ವಿಭಜನೆಗೊಂಡು ನೂತನ ರಟ್ಟೀಹಳ್ಳಿ ತಾಲ್ಲೂಕು ಅಸ್ತಿತ್ವಕ್ಕೆ ಬಂದು ಎರಡು ವರ್ಷ ಕಳೆಯುತ್ತಿದೆ.ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳು ಕಾರ್ಯಾರಂಭವಾಗಿಲ್ಲ. ಜತೆಗೆ ಸಿಬ್ಬಂದಿಗಳಿಲ್ಲದೆ ಕಚೇರಿಗಳು ಭಣಗುಡುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆಗಳ ಕುರಿತು ಈ ವಾರದ ‘ನಮ್ಮ ನಗರ ನಮ್ಮ ಧ್ವನಿ’ ಬೆಳಕು ಚೆಲ್ಲಿದೆ.

ಪ್ರತಿಕ್ರಿಯಿಸಿ: 94484 70141

ರಟ್ಟೀಹಳ್ಳಿ:ಕುಮದ್ವತಿ ನದಿ ತೀರದ ಪಟ್ಟಣ ರಟ್ಟೀಹಳ್ಳಿ ಸುತ್ತಮುತ್ತಲಿನ 63 ಹಳ್ಳಿಗಳನ್ನು ಒಳಗೊಂಡು ನೂತನ ತಾಲ್ಲೂಕು ಆಗಿ 2018ರ ಫೆಬ್ರವರಿ24ರಂದು ಅಸ್ತಿತ್ವಕ್ಕೆ ಬಂದಿತು. ಆಗ ತಹಶೀಲ್ದಾರ್ ಕಚೇರಿ ಹಾಗೂ ಹೆಸ್ಕಾಂ ಕಚೇರಿ ಮಾತ್ರ ಕಾರ್ಯಾರಂಭ ಮಾಡಿದವು.ಸುಮಾರು 2 ಕಿ.ಮೀ. ದೂರದಲ್ಲಿ ಕವಳಿಕುಪ್ಪಿ ಸಮೀಪ ತುಂಗಾ ಮೇಲ್ದಂಡೆ ಯೋಜನೆ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ ಸೇರಿದಂತೆ ಪ್ರಮುಖ ಇಲಾಖೆಗಳ ಕಚೇರಿಗೆ ಅವಕಾಶ ಕಲ್ಪಿಸಲಾಯಿತು.

ನೂತನ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ತಹಶೀಲ್ದಾರ್ ಕಚೇರಿ ಹೊರತುಪಡಿಸಿ ಉಳಿದ ಇಲಾಖೆಗಳ ನಾಮಫಲಕಗಳು ಮಾತ್ರ ಇಲ್ಲಿ ಕಾಣುತ್ತಿವೆ. ಪಟ್ಟಣದಿಂದ ಜಾಸ್ತಿದೂರವಿರುವುದರಿಂದ ಜನತೆ ಇಲ್ಲಿಗೆ ತೆರಳಲು ಕೂಡ ಕಷ್ಟವಾಗುತ್ತಿದೆ. ಯಾವುದೇ ಕೆಲಸಗಳಿದ್ದರೆ ಹಿರೇಕೆರೂರು ತಾಲ್ಲೂಕಿಗೆ ಹೋಗಬೇಕಾದ ಅನಿವಾರ್ಯತೆ ಸಾರ್ವಜನಿಕರಿಗೆ ಇದೆ.

ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಸಮಾಜ ಕಲ್ಯಾಣ ಇಲಾಖೆ ಕಚೇರಿ, ಉಪ ನೋಂದಣಿ ಅಧಿಕಾರಿ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ... ಹೀಗೆ ಹಲವು ಇಲಾಖೆಗಳ ನಾಮಫಲಕಗಳನ್ನು ಹಳೆಯ ಕಟ್ಟಡಗಳಿಗೆ ಬರೆಸಲಾಗಿದೆ.ಈ ಕಚೇರಿಗಳು ಈಗಲೂ ಹಿರೇಕೆರೂರ ಕೇಂದ್ರಿತವಾಗಿಯೇ ಕರ್ತವ್ಯ ನಿರ್ವಹಿಸುತ್ತಿವೆ.

ತಹಶೀಲ್ದಾರ್ ಕಚೇರಿ ಇದ್ದರೂ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕಗೊಂಡಿಲ್ಲ. 23 ತಿಂಗಳಲ್ಲಿ 12 ತಹಶೀಲ್ದಾರ್‌ಗಳು ಇಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಒಬ್ಬ ಪ್ರಥಮ ದರ್ಜೆ ಸಹಾಯಕರ ಕಾಯಂ ಹುದ್ದೆ ಮಂಜೂರಾಗಿದೆ. ಉಳಿದ ಸಿಬ್ಬಂದಿಯನ್ನು ಹಿರೇಕೆರೂರಿನಿಂದ ನಿಯೋಜಿಸಲಾಗಿದೆ. ಇನ್ನೂ 4 ಪ್ರಥಮ ದರ್ಜೆ ಸಹಾಯಕರು ಹಾಗೂ 10 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಬೇಕಾಗಿವೆ. ವಿವಿಧ ಇಲಾಖೆಗಳ ಹೊಸ ಹುದ್ದೆಗಳ ಮಂಜೂರಾತಿಗೆ ಸರ್ಕಾರದ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ದೊರೆಯದೇ ಇರುವುದರಿಂದ ಕಚೇರಿಗಳ ಆರಂಭಕ್ಕೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಹೊಸ ತಾಲ್ಲೂಕಿನ ಕಚೇರಿಗಳಿಗೆ ನಾಮಫಲಕಗಳನ್ನು ಬರೆಯಿಸಿದ್ದಾರೆ. ಆದರೆ ಅಲ್ಲಿಗೆ ಹೋದರೆ ಯಾವ ಅಧಿಕಾರಿಯೂ ಸಿಗುವುದಿಲ್ಲ. ಕಟ್ಟಡಗಳಿಗೆ ಬಾಗಿಲುಗಳನ್ನು ಹಾಕಿರುತ್ತಾರೆ. ಜನರ ಓಡಾಟವಿಲ್ಲದೆ ಕಚೇರಿ ಸುತ್ತಲೂ ಗಿಡಗಂಟಿಗಳೂ ಬೆಳೆದಿವೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ

ರಟ್ಟೀಹಳ್ಳಿ ತಾಲ್ಲೂಕು ಪಂಚಾಯ್ತಿಸಹ ಇಲ್ಲಿವರೆಗೆ ವಿಭಜನೆಯಾಗಿಲ್ಲ. ಈಚೆಗೆ ಪಟ್ಟಣದ ಹೃದಯ ಭಾಗದಲ್ಲಿರುವ ಗ್ರಾಮ ಪಂಚಾಯ್ತಿಗೆ ಸೇರಿದ ಕಟ್ಟಡದ ಮೇಲೆ ‘ತಾಲ್ಲೂಕು ಪಂಚಾಯ್ತಿ ಕಾರ್ಯಾಲಯ’ ಎಂದು ಫಲಕ ಮಾತ್ರ ಬರೆಸಲಾಗಿದೆ. ಸರ್ಕಾರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ನೇಮಕ ಮಾಡಿದ್ದು, ಅವರು ಈಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ.

'ಈ ಭಾಗದ ಜನತೆ ದೂರದ ಹಿರೇಕೆರೂರಿಗೆ ಹೋಗಲು ತೊಂದರೆಯಾಗುತ್ತಿದೆ. ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಟ್ಟೀಹಳ್ಳಿ ತಾಲ್ಲೂಕು ಘೋಷಣೆ ಮಾಡಿದ್ದರು. ಈಚೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ರಟ್ಟೀಹಳ್ಳಿಯನ್ನು ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದ್ದಾರೆ. ಸಂಪೂರ್ಣ ತಾಲ್ಲೂಕು ಅಸ್ತಿತ್ವಕ್ಕೆ ಬಂದಿಲ್ಲ, ಇನ್ನು ಪಟ್ಟಣ ಪಂಚಾಯ್ತಿ ಚುನಾವಣೆ ನಡೆದು ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲು ಇನ್ನು ಎಷ್ಟು ಸಮಯ ಬೇಕಾಗುತ್ತದೆಯೋ?' ಎಂದು ರಟ್ಟೀಹಳ್ಳಿ ನಿವಾಸಿ, ಹಿರಿಯ ನಾಗರಿಕ ಎಂ.ಎಂ.ಚನ್ನಗೌಡ್ರ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT