ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವರದಿಗೆ ಸ್ಪಂದನೆ: ವಿಜ್ಞಾನ ಕೇಂದ್ರಕ್ಕೆ ಅನುದಾನ ಮಂಜೂರು

Last Updated 28 ಜುಲೈ 2022, 16:01 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ದೇವಗಿರಿ ಸಮೀಪದ ಜಿಲ್ಲಾಡಳಿತ ಭವನದ ಎದುರು ನಿರ್ಮಾಣಗೊಳ್ಳುತ್ತಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಬಾಕಿ ಕಾಮಗಾರಿಗೆ ರಾಜ್ಯ ಸರ್ಕಾರ ₹3.90 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.

2006ರಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯ ಮಂಡಳಿ (ಎನ್‌ಸಿಎಸ್‌ಎಂ) ಮೂಲಕ ರಾಜ್ಯದ 10 ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ನಿರ್ಮಿಸಲು ಅನುಮೋದನೆ ನೀಡಿತ್ತು. ಅನುದಾನದ ಕೊರತೆ ಮತ್ತು ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ಹಾವೇರಿಯಲ್ಲಿ 2015ರವರೆಗೂ ಕಾಮಗಾರಿಯೇ ಆರಂಭವಾಗಿರಲಿಲ್ಲ.

2016ರಲ್ಲಿ ಕಾಮಗಾರಿಗೆ ಚಾಲನೆ ದೊರೆತು, ಬಿಡುಗಡೆಯಾದ ₹3 ಕೋಟಿಯಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದವರು ₹2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದರೂ, ಕಾಮಗಾರಿ ಪೂರ್ಣಗೊಳ್ಳದೆ ಯೋಜನೆ ನನೆಗುದಿಗೆ ಬಿದ್ದಿತ್ತು.

ಈ ಬಗ್ಗೆ ಪ್ರಜಾವಾಣಿಯಲ್ಲಿ ‘ಹಾವೇರಿ ವಿಜ್ಞಾನ ಕೇಂದ್ರಕ್ಕೆ ಗ್ರಹಣ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಜಿಲ್ಲಾ ಪಂಚಾಯಿತಿಯ ಸಿಇಒ ಮೊಹಮ್ಮದ್‌ ರೋಶನ್‌ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಿ, ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೆ ಈ ಇಬ್ಬರೂ ಅಧಿಕಾರಿಗಳು ಶ್ರಮಿಸಿದರು. ಇದರ ಪರಿಣಾಮ ₹3.90 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಯಾಗಿದೆ.

‘ಒಟ್ಟು 3 ಗ್ಯಾಲರಿಗಳ ನಿರ್ಮಾಣಕ್ಕೆ ಕಾರ್ಯಾದೇಶ ಕೊಡಲಾಗಿದೆ. ₹50 ಲಕ್ಷ ವೆಚ್ಚದಲ್ಲಿ ಒಂದನೇ ಗ್ಯಾಲರಿ ಕಾರ್ಯ ಪೂರ್ಣಗೊಳಿಸಿ, ಸೆಪ್ಟೆಂಬರ್‌ ಮೊದಲನೇ ವಾರದೊಳಗೆ ಉದ್ಘಾಟನೆ ನೆರವೇರಲಿದೆ. ಎರಡು ಮತ್ತು ಮೂರನೇ ಗ್ಯಾಲರಿಗಳನ್ನು ಹಂತ–ಹಂತವಾಗಿ ನಿರ್ಮಿಸಲಿದ್ದೇವೆ. ಈ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT