ಮಾಳನಾಯಕನಹಳ್ಳಿ (ತುಮ್ಮಿನಕಟ್ಟಿ): ರಾಣೆಬೆನ್ನೂರು ತಾಲ್ಲೂಕಿನ ಮಾಳನಾಯಕನಹಳ್ಳಿ ಗ್ರಾಮದ ಯುವ ರೈತ ಪ್ರವೀಣ್ ಬಸಪ್ಪ ಹೊರಪೇಟೆ ತೈವಾನ್ ವೈಟ್ ಪಿಂಕ್ ತಳಿಯ ಪೇರಲ ಬೆಳೆದು ಉತ್ತಮ ಲಾಭ ಗಳಿಸಿದ್ದು, ಮಾದರಿ ರೈತ ಎನಿಸಿಕೊಂಡಿದ್ದಾರೆ.
ಬಟ್ಟೆ ವ್ಯಾಪಾರ: ಪ್ರವೀಣ್ ಅವರ ತಂದೆ ಹಳ್ಳಿ ಸುತ್ತಿ ಬಟ್ಟೆ ವ್ಯಾಪಾರ ಮಾಡಿ ಜೀವನ ನಡೆಸುತ್ತ ಕೂಡಿಟ್ಟ ಉಳಿತಾಯದ ಹಣದಿಂದ ಹತ್ತು ವರ್ಷಗಳ ಹಿಂದೆ 1 ಎಕರೆ, 23 ಗುಂಟೆ ಜಮೀನು ಖರೀದಿಸಿದ್ದರು. ಕೃಷಿ ಬಗ್ಗೆ ಅಷ್ಟು ತಿಳಿವಳಿಕೆ ಇರದಿದ್ದರೂ, ಆಪ್ತ ಸ್ನೇಹಿತರಾದ ಸಿದ್ದಣ್ಣ, ತುಕಾರಾಮ ಅವರ ಸಲಹೆ ಪಡೆದರು. ಗಿಡ ಒಂದಕ್ಕೆ ₹ 85 ರಂತೆ 1,300 ತೈವಾನ್ ವೈಟ್ ಪಿಂಕ್ ತಳಿಯ ಪೇರಲ ಗಿಡಗಳನ್ನು ತಂದರು. ವೈಜ್ಞಾನಿಕ ಪದ್ಧತಿ ಅನುಸರಿಸಿ ಗಿಡದಿಂದ ಗಿಡಕ್ಕೆ 8 ಅಡಿ, ಸಾಲಿನಿಂದ ಸಾಲಿಗೆ 10 ಅಡಿ ಅಂತರದಲ್ಲಿ ಮೂರು ವರ್ಷಗಳ ಹಿಂದೆ ತೆಂಗಿನ ಗಿಡಗಳ ಮಧ್ಯ ಬಾಳೆ ಬದಲು (ಅಂತರ) ಉಪಬೆಳೆಯಾಗಿ ಪೇರಲ ಬೆಳೆದರು. ಈಗ ಮುಖ್ಯ ಬೆಳೆಗಿಂತ ಪೇರಲವೇ ಹೆಚ್ಚಿನ ಲಾಭ ತಂದು ಕೊಡುತ್ತಿದೆ.
ದೊಡ್ಡ ಗಾತ್ರ:ದೊಡ್ಡ ಗಾತ್ರದ ಹಣ್ಣು, ಹೆಚ್ಚು ಇಳುವರಿ ಪಡೆಯಲು ವರ್ಷದಲ್ಲಿ ಎರಡು ಬಾರಿ ಗಿಡಗಳನ್ನು ಕಟಿಂಗ್ ಮಾಡಬೇಕಾಗುತ್ತದೆ. ವರ್ಷಕ್ಕೆ ಎರಡು ಬಾರಿ ಹಣ್ಣು ಕೊಯ್ಲಿಗೆ ಬರುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ವರ್ಷಕ್ಕೊಂದು ಬಾರಿ ದನ-ಕುರಿ ಮತ್ತು ಕೊಟ್ಟಿಗೆ ಗೊಬ್ಬರ ಹಾಕುತ್ತೇವೆ. ಒಂದು ಹಣ್ಣಿನ ಸರಾಸರಿ ತೂಕ 350 ರಿಂದ 500 ಗ್ರಾಂ ಬರುತ್ತಿದ್ದು, ಗುಣಮಟ್ಟ, ಗಾತ್ರದ ಜೊತೆಗೆ ತುಂಬಾ ರುಚಿಯಾಗಿದೆ. ಹೀಗಾಗಿ ಹಣ್ಣುಗಳಿಗೆ ತುಂಬಾ ಬೇಡಿಕೆ ಇದೆ. ವ್ಯಾಪಾರಸ್ಥರೇ ತೋಟಕ್ಕೆ ಬಂದು ಖರೀದಿಸುತ್ತಾರೆ. ಒಂದು ಗಿಡ ವರ್ಷಕ್ಕೆ ಸುಮಾರು 30 ಕೆ.ಜಿ ಹಣ್ಣು ಕೊಡುತ್ತದೆ. ಕಳೆದ ಬಾರಿ ಖರ್ಚು ತೆಗೆದು ₹ 6 ಲಕ್ಷ ಲಾಭವಾಗಿದೆ ಎಂದು ಪ್ರವೀಣ್ ತಿಳಿಸಿದರು.
ಸೋಲಾರ್ ಬೇಲಿ: ಚಿಕ್ಕ ಮಕ್ಕಳಂತೆ ಸಸಿಗಳ ಪೋಷಣೆ ಮಾಡಿದ್ದಾರೆ. ಬೆಳೆ ಸಂರಕ್ಷಣೆಗಾಗಿ ಜಮೀನಿನ ಸುತ್ತ ಸೋಲಾರ್ ಬೇಲಿ ಅಳವಡಿಸಿದ್ದು, ಸಿಸಿಟಿವಿ ಕ್ಯಾಮೆರಾ ಸಹ ಇದೆ. ಇದರಿಂದ ಕಾಡು ಪ್ರಾಣಿಗಳ ಹಾವಳಿ, ಕಳ್ಳರ ಕಾಟ ತಪ್ಪಿದಂತಾಗಿದೆ. ತೋಟಕ್ಕೆ ಯಾರಾದರೂ ಪ್ರವೇಶ ಮಾಡಿದರೆ, ಮೊಬೈಲ್‌ಗೆ ತಕ್ಷಣ ಸಂದೇಶ ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದು ಹೆಚ್ಚು ಉಪಯುಕ್ತವಾಗಿದೆ.
ಸಹನೆ ಬೇಕು: ‘ಬಹುವಾರ್ಷಿಕ ಬೆಳೆ ತೆಂಗಿನ ಗಿಡಗಳ ಮಧ್ಯೆ ಉಪ (ಅಂತರ) ಬೆಳೆ ಪೇರಲ ಬೆಳೆದು ಆರಂಭದಲ್ಲೇ ಹೆಚ್ಚಿನ ಲಾಭ ನಿರೀಕ್ಷಿಸುವುದು ಸರಿಯಲ್ಲ. ರೈತರಿಗೆ ಭೂಮಿ ತಾಯಿಯಷ್ಟೇ ತಾಳ್ಮೆ ಇರಬೇಕು. ಅಂದಾಗ ಮಾತ್ರ ನಿರೀಕ್ಷೆಗೂ ಮೀರಿದ ಬೆಳೆ ಬೆಳೆಯಬಹುದು. ತಾಳ್ಮೆ ಬಹಳ ಮುಖ್ಯ’ ಎನ್ನುತ್ತಾರೆ ಪ್ರವೀಣ್
ರೈತರು ನರೇಗಾ ಯೋಜನೆಯ ಅಡಿ ತೋಟಗಾರಿಕೆ ಇಲಾಖೆಯ ಸಹಾಯಧನ ಪಡೆದು ಇಂತಹ ಬೆಳೆ ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಹೆಚ್ಚು ಇಳುವರಿ ಕೊಡುವ ಪೇರಲ:
ವೈಟ್ ಪಿಂಕ್ ತಳಿ ಹೆಚ್ಚು ಇಳುವರಿ ಕೊಡುವ ಬೆಳೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಅಡಿ ತೋಟಗಾರಿಕೆ ಇಲಾಖೆಯಿಂದ ಪ್ರವೀಣ್ ಸಹಾಯಧನ ಪಡೆದಿದ್ದಾರೆ. ಬೆಳೆ ಸಂರಕ್ಷಣೆ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಅವರು ಜಮೀನಿನ ಸುತ್ತಲೂ ಸೋಲಾರ್ ಬೇಲಿ ಅಳವಡಿಸಿದ್ದು ಚೆನ್ನಾಗಿ ಗಿಡಗಳ ಪೋಷಣೆ ಮಾಡಿದ್ದಾರೆ. ಹಣ್ಣಿನ ಗಾತ್ರ ದೊಡ್ಡದಿದ್ದು ಉತ್ತಮ ಇಳುವರಿ ಬಂದಿದೆ - ಜಗದೀಶ ಹುಲಗೂರ ಸಹಾಯಕ ಕೃಷಿ ಅಧಿಕಾರಿ ರಾಣೆಬೆನ್ನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.