ಶುಕ್ರವಾರ, ಅಕ್ಟೋಬರ್ 22, 2021
20 °C

ಉಪ ಚುನಾವಣೆ: ಜಾಹೀರಾತು, ಚುನಾವಣಾ ಸಾಮಗ್ರಿಗಳ ಮುದ್ರಣಕ್ಕೆ ಪೂರ್ವಾನುಮತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಜಾಹೀರಾತುಗಳು, ಸಾಮಾಜಿಕ ಜಾಲತಾಣ, ಎಸ್.ಎಂ.ಎಸ್ ಹಾಗೂ ಎಲ್ಲ ಬಗೆಯ ಮುದ್ರಣ ಸಾಮಗ್ರಿಗಳು, ವಿಡಿಯೊ, ಆಡಿಯೊ ಪ್ರಚಾರ ಸಾಮಗ್ರಿಗಳ ಪ್ರಸಾರ ಮುನ್ನ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯ (ಎಂ.ಸಿ.ಎಂ.ಸಿ) ಪೂರ್ವಾನುಮತಿ ಅಗತ್ಯ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಮುದ್ರಣ ಸಂಸ್ಥೆಗಳು (ಪ್ರಿಂಟಿಂಗ್ ಪ್ರೆಸ್) ಹಾಗೂ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರ ಸಭೆ ನಡೆಸಿದ ಅವರು, ಮುದ್ರಣ ಹಾಗೂ ಪ್ರಚಾರಕ್ಕೆ ಮುನ್ನ ನಿಗದಿತ ನಮೂನೆಗಳೊಂದಿಗೆ ಅರ್ಜಿ ಹಾಗೂ ಮುದ್ರಣ ಹಾಗೂ ಪ್ರಸಾರದ ವಿಷಯಗಳ ಮಾಹಿತಿಯನ್ನು ಜಿಲ್ಲಾ ಸಮಿತಿಗೆ ಸಲ್ಲಿಸಿ ಪ್ರಮಾಣೀಕರಿಸಿಕೊಳ್ಳಬೇಕು. ಮುದ್ರಣ ಸಾಮಗ್ರಿಗಳಾದ ಕರಪತ್ರ, ಪ್ಲೆಕ್ಸ್, ಬ್ಯಾನರ್, ಬಂಟ್ಸ್, ಧ್ವಜ ಸೇರಿದಂತೆ ಎಲ್ಲ ತರದ ಪ್ರಚಾರದ ಸಾಮಗ್ರಿಗಳ ಮೇಲೆ ಮುದ್ರಕರ ಹೆಸರು, ವಿಳಾಸ, ಪ್ರತಿಗಳ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದೆ ಎಂದರು.

ಜಾತಿ ಆಧಾರಿತ, ಧರ್ಮ ಆಧಾರಿತ, ಸಾಮಾಜಿಕ ಸಾಮರಸ್ಯ ಕದಡುವ ಸುದ್ದಿಗಳ ಪ್ರಸಾರ, ಕೋಮು ಹಾಗೂ ಸಾಮಾಜಿಕ ಸಾಮರಸ್ಯ ಕದಡುವ ವಿಷಯಗಳ ಕುರಿತಂತೆ ಪ್ರಸಾರ ಮಾಡಿದರೆ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಅಭ್ಯರ್ಥಿಯ ಪ್ರಚಾರದ ಲೈವ್ ಬಿತ್ತರಿಸಿವುದು, ಎಂ.ಸಿ.ಎಂ.ಸಿ. ಸಮಿತಿಯ ಅನುಮತಿ ಇಲ್ಲದೆ ಜಾಹೀರಾತು ಪ್ರಸಾರ ಮಾಡುವುದು ನಿಯಮ ಬಾಹಿರವಾಗಿದೆ ಎಂದರು.

ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ಅಥವಾ ಪಕ್ಷಕ್ಕೆ ಬೆಂಬಲಿಸುವ ಅಥವಾ ಉತ್ತೇಜಿಸುವ ರೀತಿಯಲ್ಲಿ ಲೇಖನ, ಸುದ್ದಿ, ರೂಪದಲ್ಲಿ ಯಾವುದೇ ಮಾಧ್ಯಮದಲ್ಲಿ ಪ್ರಕಟ ಅಥವಾ ಪ್ರಸಾರವಾದರೆ, ಉಮೇದುವಾರರು ಎದುರಾಳಿಗಳನ್ನು ದೂಷಿಸುವ ರೀತಿಯ ಸುದ್ದಿ, ವರದಿಗಳು ಏಕಪಕ್ಷೀಯವಾಗಿ ಪ್ರಸಾರ ಅಥವಾ ಮುದ್ರಣವಾದರೆ, ಯವುದೇ ಅಭ್ಯರ್ಥಿ ಅಥವಾ ಪಕ್ಷದ ಕುರಿತು ಮತದಾರರಿಗೆ ಗೊಂದಲ ಮೂಡಿಸುವ ರೀತಿಯಲ್ಲಿ ಸುದ್ದಿಗಳು ಬಿತ್ತರವಾದರೆ ಅವುಗಳನ್ನು ‘ಪೇಡ್ ನ್ಯೂಸ್’ (ಕಾಸಿಗಾಗಿ ಸುದ್ದಿ) ಎಂದು ಪರಿಗಣಿಸಲಾಗುವುದು ಎಂದರು.

ಪದೇ ಪದೇ ನಿರ್ದಿಷ್ಟ ಅಭ್ಯರ್ಥಿ ಅಥವಾ ಪಕ್ಷದ ಕಾರ್ಯಕ್ರಮ, ಚಟುವಟಿಕೆಗಳ ಸುದ್ದಿಗಳನ್ನು ಪುನರಾವರ್ತಿತವಾಗಿ ಮಾಧ್ಯಮಗಳಲ್ಲಿ ಪ್ರಚಾರವಾದಲ್ಲಿ, ಅಭ್ಯರ್ಥಿಯ ಚಟುವಟಿಕೆಗಳನ್ನು ಸಹ ಜಾಹೀರಾತಿನಂತೆ ಪರಿಗಣಿಸಲಾಗುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ ಹಾಗೂ ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು