ಶನಿವಾರ, ಮಾರ್ಚ್ 6, 2021
19 °C
ಹಾನಗಲ್‌ ರಾಜಕೀಯದಲ್ಲಿ ಹೊಸ ಅಲೆ

ಮತ್ತೆ ‘ಕೈ’ ಹಿಡಿದ ಮತಬ್ಯಾಂಕ್: ಉದಾಸಿ ಕೋಟೆಗೆ ಕಾಲಿಟ್ಟ ಮಾನೆ!

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

Deccan Herald

ಹಾವೇರಿ: ಸುಮಾರು ಮೂರೂವರೆ ದಶಕ ದಿಂದ ‘ಉದಾಸಿ–ತಹಸೀಲ್ದಾರ್’ ಪೈಪೋಟಿಗೆ ಹೆಸರಾಗಿದ್ದ ಹಾನಗಲ್‌ ರಾಜಕಾರಣದಲ್ಲಿ ಈ ಬಾರಿ ಹೊಸ ಅಲೆ ಬೀಸಿದೆ. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ‘ರಾಜಕೀಯ ಲೆಕ್ಕಾಚಾರ’ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಬುಡಮೇಲು ಮಾಡಿದ್ದರೆ, ಕಾಂಗ್ರೆಸ್‌ಗೆ ನೆಲೆ ನೀಡಿದೆ.

‘ನಗರ ಕೇಂದ್ರಿತ ಪಕ್ಷ’ ಎಂಬುದು ಬಿಜೆಪಿಗಿರುವ ಬಿರುದಾವಳಿ. ಇದಕ್ಕೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೆಲೆ ಕೊಡಿಸಿದವರು ಶಾಸಕ ಸಿ.ಎಂ. ಉದಾಸಿ ಮತ್ತು ಬಸವರಾಜ ಬೊಮ್ಮಾಯಿ. ಈಗ, ಇವರಿಬ್ಬರ ಕ್ಷೇತ್ರದ ಪುರಸಭೆಗಳಲ್ಲಿ (ನಗರ) ಬಿಜೆಪಿ ಹಿನ್ನಡೆ ಅನುಭವಿಸಿದೆ. ಹಾನಗಲ್‌ನಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ.

‘ಮತಬ್ಯಾಂಕ್‌’ ಆಧಾರದಲ್ಲಿ ಹಾನಗಲ್‌ ಪಟ್ಟಣವು ಬಿಜೆಪಿ ಭದ್ರಕೋಟೆ ಆಗಿರಲಿಲ್ಲ. ಆದರೆ, ಶಾಸಕ ಸಿ.ಎಂ. ಉದಾಸಿ ನೇತೃತ್ವವು ನೆಲೆ ಭದ್ರ ಮಾಡಿಕೊಂಡಿತ್ತು. ಹೀಗಾಗಿ, ಕಳೆದೆರಡೂ ಬಾರಿ ಉದಾಸಿ ನೇತೃತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ಮಾನೆ ಮೋಡಿ: ಈ ಬಾರಿಯ ವಿಧಾನ ಸಭಾ ಚುನಾವಣೆ ಮೂಲಕ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹಾನಗಲ್‌ಗೆ ಎಂಟ್ರಿ ನೀಡಿದ್ದರು. ಅಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದ ಅವರು, ‘ಹಾನಗಲ್ ಕ್ಷೇತ್ರದ ಮತದಾರರು ಜಾತ್ಯತೀತ ನಿಲುವು ಹೊಂದಿದ್ದರೆ, ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷ ನಿಷ್ಠೆಗೆಹೆಸರಾಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರ (ವಿಧಾನ ಪರಿಷತ್) ಚುನಾವಣೆಯಲ್ಲಿ ನನ್ನನ್ನು ಎರಡು ಬಾರಿ ಆಯ್ಕೆ ಮಾಡಿದ್ದಾರೆ’ ಎಂದಿದ್ದರು. ಅದೇ ಮಾದರಿಯಲ್ಲಿ ಮತ ಧ್ರುವೀಕರಣದಲ್ಲಿ ಯಶಸ್ವಿಆಗಿದ್ದಾರೆ.

ಮಾನೆ, ವಿಧಾನ ಸಭಾ ಚುನಾವಣೆಯಲ್ಲಿ ಸೋತರೂ ಅಕ್ಕಿ (ಭತ್ತದ ಕಣಜ) ನಂಟು ಬಿಟ್ಟಿಲ್ಲ. ಪಟ್ಟಣದ ವಾರ್ಡ್‌ಗಳಿಗೆ ಪ್ರತಿನಿತ್ಯ ಬೆಳಿಗ್ಗೆ ಭೇಟಿ ನೀಡುತ್ತಾರೆ. ಅಹವಾಲು ಆಲಿಸುತ್ತಾರೆ. ಎರಡನೇ ಹಂತದ ನಾಯಕರು ಕರೆ ಮಾಡಿದರೆ, ಸ್ಪಂದಿಸುತ್ತಾರೆ. ಮೊಬೈಲ್, ಮೇಲ್ ಮತ್ತಿತರ ತಂತ್ರಜ್ಞಾನವನ್ನೂ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಅವರೂ ನಮ್ಮ ಉದಾಸಿ ಸಾಹೇಬರಂತೆಯೇ 24x7 ಕೈಗೆಟಕುವ ರಾಜಕಾರಣಿ ಎಂದು ಹಾನಗಲ್ ನಿವಾಸಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ಸಚಿವ ಮನೋಹರ ತಹಸೀಲ್ದಾರ್‌ ಸೇರಿದಂತೆ ಎಲ್ಲ ಸ್ಥಳೀಯನಾಯಕರನ್ನು ಗೌರವದಿಂದ ನಡೆಸಿಕೊಳ್ಳುವ ಸಂಘಟನಾತ್ಮಕ ಶಕ್ತಿ ಇದೆ. ಆದರೆ, ಬಿಜೆಪಿಯಲ್ಲಿ ಎರಡನೇ ಹಂತದ ನಾಯಕರ ಪ್ರಬಲ ಕೊರತೆ ಇದೆ. ಸತತ ಹತ್ತು ವರ್ಷಗಳಿಂದ ಪುರಸಭೆಯ ಅದೇ ಸದಸ್ಯರನ್ನು ನೋಡುತ್ತಿದ್ದು, ಜನ ಬದಲಾವಣೆ ಬಯಸಿದ್ದರು ಎಂದೂ ಅವರು ವಿಶ್ಲೇಷಿಸಿದರು.

ಮತ ಧ್ರುವೀಕರಣ: ಯಾವುದೇ ಪಕ್ಷದಲ್ಲಿಇದ್ದರೂ, ಚಾಣಾಕ್ಷ ರಾಜಕಾರಣದ ಮೂಲಕವೇ ಸಿ.ಎಂ.ಉದಾಸಿ, ಪುರಸಭೆಯಲ್ಲಿ ಪಾರುಪತ್ಯ ಸಾಧಿಸುತ್ತಿದ್ದರು. ಈ ಬಾರಿ, ಮಾನೆ ಮತ ಕ್ರೋಡೀಕರಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತಿತರ ನಾಯಕರು ಸಾಥ್ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳ ಬಗ್ಗೆ ನೆನಪಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

‘ಈ ಚುನಾವಣೆಯಲ್ಲಿ ಎಲ್ಲ ಸಣ್ಣ ಸಮುದಾಯಗಳಿಗೂ ಕಾಂಗ್ರೆಸ್ ಆದ್ಯತೆ ನೀಡಿತ್ತು. ಜನಸಂಖ್ಯೆ ಆಧಾರದಲ್ಲಿ ಗಂಗಾ ಮತ ಮತ್ತಿತರ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿತು. ಯುವ ಹಾಗೂ ಎರಡನೇ ಹಂತದ ನಾಯಕರನ್ನೂ ವಿಶ್ವಾಸಕ್ಕೆ ಪಡೆದುಕೊಂಡಿತು. ಈ ಲೆಕ್ಕಾಚಾರಗಳಿಂದ ಕಾಂಗ್ರೆಸ್ ಮತಬ್ಯಾಂಕ್ ಭದ್ರಗೊಂಡಿರುವುದು ಮಾತ್ರವಲ್ಲ, ಬಿಜೆಪಿಗೆ ಮತ ಹಾಕುತ್ತಿದ್ದ ನಾಯಕರು– ಸಮುದಾಯಗಳನ್ನು ಸೆಳೆದುಕೊಂಡಿದೆ’ ಎಂದು ಪುರಸಭೆ ಸದಸ್ಯ ವಿಕಾಸ್ ನಿಂಗೋಜಿ ವಿಶ್ಲೇಷಿಸಿದರು. 

ಮುಸ್ಲಿಂ ಸಮುದಾಯಗಳ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ 8 ವಾರ್ಡ್‌ಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿತ್ತು. ಆದರೆ, ಕಾಂಗ್ರೆಸ್ ತನ್ನ ಮತಬ್ಯಾಂಕ್‌ ಭದ್ರಗೊಳಿಸಿದ ಪರಿಣಾಮ, ಜೆಡಿಎಸ್ ಐದು ಸ್ಥಾನಗಳಲ್ಲಿ ಕೇವಲ ‘ಒಂದಂಕಿ ಮತ’ ಪಡೆದಿದೆ. ಎಲ್ಲ ಆರು ಸ್ಥಾನಗಳಲ್ಲಿ ಜೆಡಿಎಸ್ ಪಡೆದ ಒಟ್ಟು ಮತಗಳ ಸಂಖ್ಯೆ 77. ವಾರ್ಡ್ –22ರ ಪಕ್ಷೇತರ ಅಭ್ಯರ್ಥಿ ನಸ್ರೀನಾ ಭಾನು ಕೇವಲ 2 ಮತ ಪಡೆದಿದ್ದಾರೆ. ಐದು ಪಕ್ಷೇತರ ಅಭ್ಯರ್ಥಿಗಳು ಒಟ್ಟು 174 ಮತ ಪಡೆಯುಲಷ್ಟೇ ಶಕ್ತರಾಗಿದ್ದಾರೆ.

ಇದು, ಕಾಂಗ್ರೆಸ್ ಹಾಗೂ ಉದಾಸಿ ಪೈಪೋಟಿ ಮತ್ತು ಮಾನೆ ಅವರು ಮತ ಕ್ರೋಡೀಕರಿಸಿರುವುದಕ್ಕೆ ಸಾಕ್ಷಿಯಂತಿವೆ.

ಮತ ವಿಂಗಡಣೆಯ ಪ್ರಮಾಣ

ಒಟ್ಟು ಚಲಾವಣೆಯಾದ ಮತ– 15,679

ಕಾಂಗ್ರೆಸ್ ಪಡೆದ ಮತ– ಶೇ 58.03

ಬಿಜೆಪಿ ಪಡೆದ ಮತ– ಶೇ 39.52

ಪಕ್ಷೇತರರು ಪಡೆದ ಮತ– ಶೇ 1.10

ಜೆಡಿಎಸ್ ಪಡೆದ ಮತ– ಶೇ 0.50

ನೋಟಾ– ಶೇ 0.85

ಫಲಿತಾಂಶದ ಶೇಕಡಾವಾರು ಪ್ರಮಾಣ

ಕಾಂಗ್ರೆಸ್– ಶೇ 82.6

ಬಿಜೆಪಿ– ಶೇ 17.4

ಜೆಡಿಎಸ್/ಪಕ್ಷೇತರ– ಶೇ 0

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು