ಲಾಠಿ ಹಿಡಿವ ಕೈ ಕುಂಚ ಹಿಡಿದಾಗ..

7

ಲಾಠಿ ಹಿಡಿವ ಕೈ ಕುಂಚ ಹಿಡಿದಾಗ..

Published:
Updated:
Deccan Herald

ಸಮಾಜದ ಸಂರಕ್ಷಣೆಗಾಗಿ ಸದಾ ಕಾಲ ಕೈಯಲ್ಲಿ ಲಾಠಿ, ಬಂದೂಕು ಹಿಡಿದು ಬಿಸಿಲು, ಮಳೆ ಎನ್ನದೆ ಕಾಯಕದಲ್ಲಿ ನಿಲ್ಲುವ ಪೊಲೀಸರಲ್ಲೂ ಅಪರೂಪದ ಪ್ರತಿಭಾನ್ವಿತ ಕಲಾವಿದರಿದ್ದಾರೆ. ಅದಕ್ಕೆ ಸಾಕ್ಷಿ ಶಿಗ್ಗಾವಿ ಸಮೀಪದ ಗಂಗೀಬಾವಿಯ ಕೆ.ಎಸ್‌.ಆರ್‌.ಪಿ 10ನೇ ತುಕಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹವಾಲ್ದಾರ್ ಶ್ರೀರಾಮುಲು.

ಮೂಲತಃ ಚಿತ್ರದುರ್ಗ ಜಿಲ್ಲೆ ಚಳಕೆರಿಯಲ್ಲಿ ಹುಟ್ಟಿಬೆಳೆದ ಶ್ರೀರಾಮುಲು 4ನೇ ತರಗತಿಯಲ್ಲಿ ಓದುತ್ತಿರುವಾಗಲೇ ಚಿತ್ರಕಲೆಯ ಗಿಳು ಬೆಳೆಸಿಕೊಂಡವರು. ಬಾಲ್ಯದಲ್ಲಿ ತಂದೆ, ತಾಯಿ ಖರ್ಚಿಗಾಗಿ ನೀಡುವ ಹಣವನ್ನು ಸಂಗ್ರಹಿಸಿ ಬಣ್ಣ, ಕುಂಚಗಳನ್ನು ತಂದು ಚಿತ್ರ ಬಿಡಿಸುವ ಹವ್ಯಾಸ ಬೆಳೆಸಿಕೊಂಡಿದ್ದರು. ಅವರಿಗೆ ತಾಯಿಯೇ ಗುರುವಾಗಿ ಚಿತ್ರಗಳಲ್ಲಿನ ಓರೆಕೋರೆಗಳನ್ನು ತಿದ್ದಿ, ಮಾರ್ಗದರ್ಶನ ನೀಡಿದ್ದಾರೆ. ಶ್ರೀರಾಮುಲು ಹಲವು ಉತ್ತಮ ಚಿತ್ರಗಳನ್ನು ಬಿಡಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

20 ವರ್ಷಗಳಿಂದ ಗಂಗೀಬಾವಿಯ ಕೆ.ಎಸ್‌.ಆರ್‌.ಪಿ ತುಕಡಿಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಕರ್ತವ್ಯದ ಒತ್ತಡದ ನಡುವೆ ಬಿಡುವಿನ ವೇಳೆಯಲ್ಲಿ ಚಿತ್ರಗಳನ್ನು ಬಿಡಿಸುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ವ್ಯಕ್ತಿ, ಪ್ರಾಣಿ,ಪಕ್ಷಿ ಹಾಗೂ ನಿಸರ್ಗ ಚಿತ್ರಣದಲ್ಲಿ ಇವರು ಸೈ ಎನಿಸಿಕೊಂಡಿದ್ದಾರೆ.

ಚಿತ್ರಕಲಾ ಪರಿಷತ್ ಜೂನ್ 28ರಂದು ಏರ್ಪಡಿಸಿದ್ದ ಪೊಲೀಸ್ ಸಿಬ್ಬಂದಿಯ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಪ್ರದರ್ಶನ ‘ಖಾಕಿ ಕ್ರಾನಿಕಲ್ಸ್’ದಲ್ಲಿ ಪಾಲ್ಗೊಂಡಿದ್ದ ಶ್ರೀರಾಮುಲು ಅವರು ಬಿಡಿಸಿದ ಚಿತ್ರ ಅಂತರರಾಷ್ಟೀಯ ಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಹಲವು ಕಲಾವಿದರ ನೆಲೆ

ಗಂಗೀಬಾವಿಯ ಕೆ.ಎಸ್‌.ಆರ್‌.ಪಿ ತುಕಡಿಯಲ್ಲಿ ಸಾಕಷ್ಟು ಸಿಬ್ಬಂದಿ ಪ್ರತಿಭಾನ್ವಿತರಾಗಿದ್ದು, ಉನ್ನತ ಪದವಿ ಪಡೆದಿದ್ದಾರೆ. ಈಜು, ಯೋಗ, ಕವಿತೆ, ಕಾವ್ಯಗಳ ರಚನೆ, ಚಿತ್ರಕಲೆ, ಭಾಷಣ, ಅಭಿನಯ, ಹಾಡು, ಸಂಗೀತ, ನೃತ್ಯ... ಹೀಗೆ ವಿವಿಧ ಕಲಾ ಪ್ರಕಾರಗಳಲ್ಲಿ ಪಳಗಿದ್ದಾರೆ. ಇಂಥ ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಕಮಾಂಡೆಂಟ್ ಬಿ.ಎಂ.ಪ್ರಸಾದ್ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !