ಬುಧವಾರ, ಸೆಪ್ಟೆಂಬರ್ 18, 2019
25 °C
ಗುತ್ತಿಗೆದಾರರಿಗೆ ಬೇಕಾಬಿಟ್ಟಿ ಹಣ ಕೊಟ್ಟ ಅಧಿಕಾರಿ * ಸೈಬರ್ ಕ್ರೈಂ ಪೊಲೀಸರಿಂದ ತನಿಖೆ

ಗುತ್ತಲ ಪಂಚಾಯ್ತಿಯಲ್ಲಿ ₹2.97 ಕೋಟಿ ಅವ್ಯವಹಾರ!

Published:
Updated:
Prajavani

ಹಾವೇರಿ: ಗುತ್ತಲ ಪಟ್ಟಣ ಪಂಚಾಯ್ತಿಯಲ್ಲಿ ₹2.97 ಕೋಟಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಪಂಚಾಯ್ತಿಯ ಹಿಂದಿನ ಮುಖ್ಯಾಧಿಕಾರಿ ಡಿ.ಎನ್.ಧರಣೇಂದ್ರ ಕುಮಾರ್ ಹಾಗೂ ಪ್ರಭಾರ ಲೆಕ್ಕಿಗ ಗುರಪ್ಪ ಟಿ.ಪೂಜಾರ ಅವರ ನೆತ್ತಿ ಮೇಲೆ ಶಿಸ್ತು ಕ್ರಮದ ಕತ್ತಿ ತೂಗುತ್ತಿದೆ.‌

ಈ ಸಂಬಂಧ ಗುತ್ತಲ ಪಂಚಾಯ್ತಿಯ ಈಗಿನ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಅವರು ಆ.27ರಂದು ಗುತ್ತಲ ಠಾಣೆಗೆ ದೂರು ಕೊಟ್ಟಿದ್ದಾರೆ. ನಂಬಿಕೆ ದ್ರೋಹ (ಐಪಿಸಿ 406, 409), ಸಹಿ ನಕಲು ಮಾಡುವುದು (465) ಹಾಗೂ ಖೊಟ್ಟಿ ದಾಖಲೆ ಸೃಷ್ಟಿ (468) ಆರೋಪಗಳಡಿ ಎಫ್‌ಐಆರ್ ದಾಖಲಾಗಿದೆ. ಸೆ.7ರಂದು ಪ್ರಕರಣ ಸಿಇಎನ್ ಠಾಣೆಗೆ ವರ್ಗವಾಗಿದ್ದು, ಸೈಬರ್ ಕ್ರೈಂ ಪೊಲೀಸರೂ ತನಿಖೆಗೆ ಧುಮುಕಿದ್ದಾರೆ.

ನಿಯಮಬಾಹಿರ ಗುತ್ತಿಗೆ

‘ಧರಣೇಂದ್ರ ಅವರು 2015ರಿಂದ 2018ರವರಗೆ ಗುತ್ತಲ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯಾಗಿದ್ದರು. ಈ ಅವಧಿಯಲ್ಲಿ ಅದೇ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಗುರಪ್ಪನಿಗೆ, ಲೆಕ್ಕಪರಿಶೋಧನೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು’ ಎಂದು ಮುಗಳಿ ದೂರಿನಲ್ಲಿ ಹೇಳಿದ್ದಾರೆ.

‘ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಈ ಆರೋಪಿಗಳು ನಿಯಮಬಾಹಿರವಾಗಿ ಗುತ್ತಿಗೆದಾರರಿಗೆ ನೀಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಆ ಎಲ್ಲ ದೂರು ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಆನಂತರ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ನಗರಸಭೆ ಲೆಕ್ಕಾಧಿಕಾರಿ ಹಾಗೂ ಯೋಜನಾ ನಿರ್ದೇಶಕರ ತಂಡವು ಆಂತರಿಕ ತನಿಖೆ ಕೈಗೆತ್ತಿಕೊಂಡಿತು. 2015ರಿಂದ 2018ರ ನಡುವಿನ ಎಲ್ಲ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂತು’ ಎಂದೂ ವಿವರಿಸಿದ್ದಾರೆ. 

‘ಈ ನಾಲ್ಕು ವರ್ಷಗಳಲ್ಲಿ ಸರ್ಕಾರದಿಂದ ಪಂಚಾಯ್ತಿಗೆ ₹7.03 ಕೋಟಿ ಅನುದಾನ ಬಂದಿತ್ತು. ಆರೋಪಿಗಳು ಸಕ್ಷಮ ಪ್ರಾಧಿಕಾರದಿಂದ ಮಂಜೂರಾತಿಯನ್ನೂ ಪಡೆಯದೇ ನೀರು ಸರಬರಾಜು ಸಾಮಗ್ರಿ ಖರೀದಿಗಾಗಿ ಗುತ್ತಿಗೆ (ಬಿಡ್) ಮೊತ್ತಕ್ಕಿಂತ ಹೆಚ್ಚುವರಿ ಹಣವನ್ನು ಗುತ್ತಿಗೆದಾರರಿಗೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆಯನ್ನೂ ಹಾಜರುಪಡಿಸಿರಲಿಲ್ಲ. ರಿಜಿಸ್ಟರ್‌ಗಳನ್ನೂ ನಿರ್ವಹಣೆ ಮಾಡಿರಲಿಲ್ಲ. ಸಿಬ್ಬಂದಿಗೆ ನೀಡಿರುವ ಮುಂಗಡ ಹಣದ ಲೆಕ್ಕದಲ್ಲೂ ಹೊಂದಾಣಿಕೆ ಕಂಡುಬರಲಿಲ್ಲ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

‘ಈ ಎಲ್ಲ ಅಂಶಗಳನ್ನು ಗುರುತಿಸಿದ ತನಿಖಾ ತಂಡ, ಧರಣೇಂದ್ರ ಹಾಗೂ ಗುರಪ್ಪ ಸ್ವಲಾಭಕ್ಕಾಗಿ ₹2.97 ಕೋಟಿಯನ್ನು ದುರುಪಯೋಗ ಮಾಡಿಕೊಂಡಿರುವುದಾಗಿ ಆಗಸ್ಟ್‌ನಲ್ಲಿ ಅಂತಿಮ ವರದಿ ಕೊಟ್ಟರು. ಆ ನಂತರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಠಾಣೆಗೆ ದೂರು ಸಲ್ಲಿಸಿದ್ದೇನೆ. ಹಣದಾಸೆಗೆ ಸರ್ಕಾರಕ್ಕೇ ವಂಚಿಸಿರುವ ಇವರಿಬ್ಬರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಮುಗಳಿ ಮನವಿ ಮಾಡಿದ್ದಾರೆ.

ಆರು ತಿಂಗಳು ಅಮಾನತು

‘ಅವ್ಯವಹಾರದ ಆರೋಪ ಕೇಳಿ ಬಂದ ನಂತರ ಇಬ್ಬರನ್ನೂ ಆರು ತಿಂಗಳು ಅಮಾನತಿನಲ್ಲಿ ಇಡಲಾಗಿತ್ತು. ಆಗಸ್ಟ್‌ನಿಂದ ಅವರು ಕರ್ತವ್ಯಕ್ಕೆ ಮರಳಿದ್ದರು. ಗುರಪ್ಪ ಈಗ ಹಾನಗಲ್‌ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಧರ್ಮೇಂದ್ರ ಮಲೆಬೆನ್ನೂರು ಪಂಚಾಯ್ತಿಯಲ್ಲಿ ಮುಖ್ಯಾಧಿಕಾರಿಯಾಗಿದ್ದಾರೆ’ ಎಂದೂ ಮುಗಳಿ ಮಾಹಿತಿ ನೀಡಿದರು. 

ಎಫ್‌ಐಆರ್ ಆದ ನಂತರ ಪರಾರಿ

‘ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಧರಣೇಂದ್ರ ಹಾಗೂ ಗುರಪ್ಪ ಕೆಲಸಕ್ಕೆ ಗೈರಾಗಿ ತಲೆಮರೆಸಿಕೊಂಡಿದ್ದಾರೆ. ಅವರ ಮೊಬೈಲ್‌ಗಳೂ ಸ್ವಿಚ್ಡ್‌ಆಫ್ ಆಗಿವೆ. ಜಿಲ್ಲಾಮಟ್ಟದಲ್ಲಿ ₹25 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಂಚನೆಯಾಗಿದ್ದರೆ ಅದನ್ನು ಸೈಬರ್ ಕ್ರೈಂ ಪೊಲೀಸರೇ ತನಿಖೆ ನಡೆಸಬೇಕು. ಹೀಗಾಗಿ, ಪ್ರಕರಣವನ್ನು ಸಿಇಎನ್‌ಗೆ ವರ್ಗಾವಣೆ ಮಾಡಿದ್ದೇವೆ’ ಎಂದು ಗುತ್ತಲ ‍ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು. 

Post Comments (+)