ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ವರ್ಷದಲ್ಲಿ 70 ಸರಳ, 41 ಅಂತರಜಾತಿ ವಿವಾಹ!

ಸಮಾನತೆ ಸಮಾಜ ಕಟ್ಟುವ ಯೋಜನೆಗೆ ಜಿಲ್ಲೆಯಲ್ಲಿ ಸ್ಪಂದನೆ
Last Updated 7 ಜೂನ್ 2019, 20:00 IST
ಅಕ್ಷರ ಗಾತ್ರ

ಹಾವೇರಿ: ಸರಳ ಹಾಗೂ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುವ ಮೂಲಕಸಮಾನತೆಯ ಸಮಾಜ ಕಟ್ಟಬೇಕೆಂಬ ಸರ್ಕಾರದ ಚಿಂತನೆಗೆ ಶರಣರ ನಾಡು ಹಾವೇರಿಯಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು, ಕಳೆದೊಂದು ವರ್ಷದಲ್ಲಿ 111 ಜೋಡಿಗಳು ಈ ಸಿದ್ಧಾಂತದಡಿ ವಿವಾಹವಾಗಿವೆ!

ಸಮಾಜ ಕಲ್ಯಾಣ ಇಲಾಖೆಯ ಅಂಕಿ ಅಂಶದ ಪ್ರಕಾರ2018–19ರಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ/ಪಂಗಡದ41 ಜೋಡಿಗಳು ಅಂತರ್ಜಾತಿ ವಿವಾಹವಾಗಿದ್ದಾರೆ. ಇನ್ನೂ70 ಜೋಡಿಗಳು ‘ಆಡಂಬರದ ಮದುವೆ’ಯ ಆಸೆಯನ್ನು ಪಕ್ಕಕ್ಕಿಟ್ಟು, ದೇವಸ್ಥಾನಗಳಲ್ಲಿ ಅಥವಾ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಹಸೆಮಣೆ ಏರಿದ್ದಾರೆ.

₹ 3 ಲಕ್ಷ ಪ್ರೋತ್ಸಾಹ ಧನ: ಜಾತಿ ಆಧರಿತ ತಾರತಮ್ಯ ತೊಡೆದು ಹಾಕುವ ನಿಟ್ಟಿನಲ್ಲಿ ಸರ್ಕಾರ ಅಂತರ್ಜಾತಿ ವಿವಾಹವನ್ನು ಬೆಂಬಲಿಸುತ್ತಿದೆ.ಪರಿಶಿಷ್ಠ ಜಾತಿ/ಪಂಗಡದ ಹುಡುಗಿಯು, ಹಿಂದೂ ಧರ್ಮದ ಯಾವುದೇ ಜಾತಿಯ ಹುಡುಗನನ್ನು ವಿವಾಹವಾದರೂ ₹ 3 ಲಕ್ಷ ಪರಿಹಾರ ಧನ ನೀಡುತ್ತಿದೆ. ಅದೇ, ಮೇಲ್ಜಾತಿಯ ಹುಡುಗಿ ಪರಿಶಿಷ್ಟಜಾತಿ/ಪಂಗಡದ ಹುಡುಗನನ್ನು ಮದುವೆಯಾದರೆ, ₹ 2 ಲಕ್ಷ ನೀಡುತ್ತಿದೆ.‌ ಇದಕ್ಕಾಗಿಯೇ ಜಿಲ್ಲೆಗೆ ಪ್ರತಿವರ್ಷ ₹ 40 ಲಕ್ಷ ಮೀಸಲಿಡುತ್ತಿದೆ.

ಸರಳ ವಿವಾಹಕ್ಕೆ ₹ 50 ಸಾವಿರ: ಇನ್ನು ಸರಳ ವಿವಾಹವಾಗುವ ದಂಪತಿಗೆ ₹ 50 ಸಾವಿರ ಪ್ರೋತ್ಸಾಹಧನ ನಿಗದಿ ಮಾಡಿರುವ ಸರ್ಕಾರ, ಅದಕ್ಕಾಗಿ ಪ್ರತಿವರ್ಷ ಜಿಲ್ಲೆಗೆ ₹ 35 ಲಕ್ಷವನ್ನು ನೀಡುತ್ತಿದೆ.

ಸರಳ ವಿವಾಹವಾಗುವ ದಂಪತಿ ಪ್ರೋತ್ಸಾಹ ಧನ ಪಡೆಯಲು ಕೆಲವೊಂದು ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಇಬ್ಬರೂ ಪರಿಶಿಷ್ಟ ಜಾತಿ/ಪಂಗಡದವರಾಗಿರಬೇಕು. 21 ರಿಂದ 45 ವರ್ಷದ ಒಳಗಿನ ವಯಸ್ಸಿನವರಾಗಿರಬೇಕು. ಆದಾಯದ ಮಿತಿ ₹ 2 ಲಕ್ಷದ ಒಳಗಿರಬೇಕು. ಮದುವೆ ಮಾಡಿಸಿದ ಸಂಸ್ಥೆ ಅಥವಾ ದೇವಸ್ಥಾನದಿಂದ ಪ್ರಮಾಣ ಪತ್ರ ಪಡೆದಿರಬೇಕು. ದಂಪತಿ ವಿವಾಹವನ್ನು ನೋಂದಣಿ ಮಾಡಿಸಿರಬೇಕು. ಮದುವೆಯಾದ ಆರು ತಿಂಗಳ ಒಳಗಡೆ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಬೇಕು.‌

ಪ್ರೋತ್ಸಾಹಕ್ಕೆ ತಿರಸ್ಕಾರ: ವಿಧವೆಯರ ಮರು ಮದುವೆಗೂ ಸರ್ಕಾರ ₹ 3 ಲಕ್ಷ ನಿಗದಿ ಮಾಡಿದೆ. 2017–18ರ ಬಜೆಟ್‌ನಲ್ಲಿ ಇದಕ್ಕಾಗಿ ಜಿಲ್ಲೆಗೆ ₹ 40 ಲಕ್ಷ ಬಿಡುಗಡೆಯಾಗಿದೆ. ಆದರೆ,ವಿಧವೆಯರು ಮರು ಮದುವೆಯಾದ ಒಂದೇ ಒಂದು ಪ್ರಕರಣ ಜಿಲ್ಲೆಯಲ್ಲಿ ವರದಿಯಾಗಿಲ್ಲ. ಹೀಗಾಗಿ, ಇಲಾಖೆಯ ಅಧಿಕಾರಿಗಳೇ ಫಲಾನುಭವಾಗಳಿಗಾಗಿ ಅನ್ವೇಷಣೆ ನಡೆಸುತ್ತಿದ್ದಾರೆ.

*
ವಿಧವೆಯರಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಿದ್ದೇವೆ. ಆದರೆ, ಈವರೆಗೆ ಒಬ್ಬ ಫಲಾನುಭವಿಯೂ ಅರ್ಜಿ ಸಲ್ಲಿಸಿಲ್ಲ. ಈ ಕುರಿತಂತೆ ಸಾಕಷ್ಟು ಪ್ರಚಾರವನ್ನೂ ಮಾಡುತ್ತಿದ್ದೇವೆ.
-ಆಂಜನೇಯ ಉಲ್ಲಾಳ, ಅಧೀಕ್ಷಕ, ಸಮಾಜ ಕಲ್ಯಾಣ ಇಲಾಖೆ (ಹಾವೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT