ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗವೂರು, ಚಂಗಾಪೂರ ಈಗ ಸಂಗೂರು

ಗಾಂಧೀಜಿ ಅವರ ಚಿತಾಭಸ್ಮವನ್ನು ಸಂಗೂರಿಗೆ ತಂದು ಗಾಂಧಿ ಕಟ್ಟೆ ನಿರ್ಮಾಣ
Last Updated 8 ಜೂನ್ 2019, 16:33 IST
ಅಕ್ಷರ ಗಾತ್ರ

ಹಾವೇರಿ: ಸಂಗವೂರು, ಚಂಗಾಪೂರವಾಗಿದ್ದ ಊರು ಈಗ ‘ಸಂಗೂರ’ ಎಂದು ಬದಲಾಗಿದೆ. ಇದು ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪ ಅವರ ಊರು.

‘ಚಂಗೂರು’ ಎಂದು 9 ನೇ ಶತಮಾನದ ಶಾಸನದಲ್ಲಿ ಉಲ್ಲೇಖವಾಗಿದೆ. ಅಲ್ಲದೇ ಇಲ್ಲಿ 1 ನೇ ಶತಮಾನದಲ್ಲಿ ಜನವಸತಿ ಇತ್ತು ಎಂಬುದನ್ನು ಪುರಾತತ್ವ ಶಾಸ್ತ್ರಜ್ಞರು ಸಂಶೋಧಿಸಿದ್ದಾರೆ ಎಂದು ಭೋಜರಾಜ ಪಾಟೀಲರ ಗ್ರಾಮ ಚರಿತ್ರ ಕೋಶ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

‘ಹಿಂದೆ ಇಲ್ಲಿ ಸಂಗಮ ದೊರೆ ಆಳುತ್ತಿದ್ದರು. ಅದಕ್ಕಾಗಿ ಸಂಗೂರ ಎಂದು ಹೆಸರು ಬಂದಿದೆ. ಇದಕ್ಕೆ ಚಂಗೂರು ಎಂತಲೂ ಕರೆಯುತ್ತಿದ್ದರು’ ಎಂದು ಗ್ರಾಮದ ನಾಗಪ್ಪ ಸಜ್ಜನರ ತಿಳಿಸಿದರು.

ಸ್ವಾತಂತ್ರ ಹೋರಾಟಗಾರ ಸಂಗೂರ ಕರಿಯಪ್ಪ ಅವರು ಇದೇ ಊರಿನವರಾಗಿದ್ದಾರೆ. ಗಾಂಧೀಜಿ ಕರ್ನಾಟಕಕ್ಕೆ ಬಂದಾಗ ಅವರನ್ನು ಸಬರಮತಿ ಆಶ್ರಮಕ್ಕೆ ಕರೆದುಕೊಂಡು ಹೋದರು. ಅಲ್ಲಿ ವೀರಮ್ಮಳನ್ನು ಕರಿಯಪ್ಪ ಅವರು ವಿವಾಹವಾದರು. ಇವರ ಪ್ರತಿಮೆಯನ್ನು ಸ್ವಗ್ರಾಮದಲ್ಲಿ ಸ್ಥಾಪಿಸಲಾಗಿದೆ.

ಗಾಂಧೀಜಿ ಅವರ ಚಿತಾಭಸ್ಮವನ್ನು ಸಂಗೂರಿಗೆ ತಂದು ಗಾಂಧಿ ಕಟ್ಟೆಯನ್ನು ನಿರ್ಮಿಸಲಾಯಿತು. ಅಂತೆಯೇ, ಸಂಗೂರ ಕರಿಯಪ್ಪ ಅವರ ಚಿತಾಭಸ್ಮವನ್ನೂ ತಂದು ಈಗಿನ ಗ್ರಾಮ ಪಂಚಾಯ್ತಿಯ ಪಕ್ಕದಲ್ಲಿಯೇ ಇಟ್ಟು ಕಟ್ಟೆಯೊಂದನ್ನು ನಿರ್ವಿುಸಲಾಗಿದೆ. ಇಲ್ಲಿ ಸಂಗೂರ ಕರಿಯಪ್ಪ ಅವರ ಪ್ರತಿಮೆಯು ಇದೆ.

ಈ ಗ್ರಾಮದಲ್ಲಿ ಒಟ್ಟು ಎಂಟು ಶಾಸನಗಳು ಲಭ್ಯವಿವೆ. ಇವುಗಳಲ್ಲಿ ರಾಷ್ಟ್ರಕೂಟರ ಜಗತ್ತುಂಗನ ಕಾಲಕ್ಕೆ ಸೇರಿದ ಶಾಸನ ಅತೀ ಪ್ರಾಚೀನವಾದುದು. ಇದೊಂದು ವೀರಗಲ್ಲು, ಸಂಗೂರಿನ ರಕ್ಷಣೆಗಾಗಿ ರೇಚಗಾವುಂಡನ ವೀರ ಮರಣವನ್ನು ಇದು ದಾಖಲಿಸಿದೆ. ಈ ಶಾಸನದಲ್ಲಿ ‘ಸಂಗವೂರು’ಎಂದು ದಾಖಲಿಸಿದೆ. ರಾಮಲಿಂಗನ ಗುಡಿಯ ಬಳಿ ಗೋಸಾಸ ಕಲ್ಲುಗಳಿವೆ. ಕಲಚೂರಿ ಬಿಜ್ಜಳನ ಕಾಲದ(ಕ್ರಿ.ಶ. 1168) ಶಾಸನವೊಂದು ತೃಟಿತವಾಗಿ ದ್ದರೂ ಹೆಗ್ಗಡೆ ಬಮ್ಮರಸನು ಬ್ರಹ್ಮೇಶ್ವರದೇವರಿಗೆ ಭೂದಾನ ಮಾಡಿದ ಕುರಿತು ತಿಳಿಸುತ್ತದೆ.

ಯಾದವ ಅರಸ ಮಹಾದೇವನ ಎರಡು ಶಾಸನಗಳು ಇಲ್ಲಿವೆ. ಮಹಾಪ್ರಧಾನ ದೇವರಾಜನು ಸೊನ್ನಲಿಗೆ ಕಪಿಲಸಿದ್ದ ಮಲ್ಲಿಕಾರ್ಜುನ ದೇವಾಲಯಕ್ಕೆ ಚಂಗೂರನ್ನು ದಾನ ಮಾಡಿದ್ದಾಗಿ ತಿಳಿಸಿದೆ. ಜೈನ ಶಾಸನ, ವಿಜಯನಗರದ 1 ನೇ ದೇವರಾಯ ಕಾಲಕ್ಕೆ ಸೇರಿದ್ದ ಕ್ರಿ.ಶ. 1408ರ ಶಾಸನವೊಂದು ವಿಜಯನಗರ ಅಧಿಕಾರಿ ಮಾದರಸನು ಕುಮಾರ ರಾಮನಾಥ ದೇವರ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಮಹತ್ವ ಉಲ್ಲೇಖಿಸಿದೆ. ಕರ್ನಾಟಕದಲ್ಲಿ ಕುಮಾರ ರಾಮನ ಬಗ್ಗೆ ದೊರೆಯುವ ಲಿಖಿತ ಶಾಸನವಿರುವ ವಿಗ್ರಹಗಳಲ್ಲಿ ಇದು ಮೊದಲನೆಯದಾಗಿದೆ.

ಇಲ್ಲಿನ ರಾಮಲಿಂಗ ದೇವಾಲ ಯವು ಕ್ರಿ.ಶ. 9–10 ನೇ ಶತಮಾನಕ್ಕೆ ಸೇರಿದ್ದು, ರಾಷ್ಟ್ರಕೂಟ ಶೈಲಿಯಲ್ಲಿದೆ. ಈ ಗುಡಿ ಮುಂದಿರುವ ಸಿಂಹ ಬೇಟೆ ವೀರಗಲ್ಲು ಗಮನಾರ್ಹವಾಗಿದೆ. ವೀರಭದ್ರ ದೇವಾಲಯ, ಪರಮೇಶ್ವರ ದೇವಾಲಯ, ಬೀರಲಿಂಗೇಶ್ವರ, ಹನುಮಂತ, ಮಾತಂಗೆವ್ವ, ದ್ಯಾಮವ್ವ, ದುರ್ಗಾದೇವಿ ದೇವಾಲಯಗಳಿವೆ. ಅಲ್ಲದೇ, ಇಲ್ಲಿ ಸಕ್ಕರೆ ಕಾರ್ಖಾನೆ ಇದ್ದು 1981ರಿಂದ ಉತ್ಪಾದನೆಯಲ್ಲಿ ತೋಡಗಿದೆ. ಈ ಭಾಗದ ರೈತರಿಗೆ ಆರ್ಥಿಕ ಕೊಡುಗೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT