ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: 7556 ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದು

ಹಾವೇರಿ ಜಿಲ್ಲೆಯ 422 ಸರ್ಕಾರಿ ನೌಕರರಿಂದ ₹17.85 ಲಕ್ಷ ದಂಡ ವಸೂಲಿ
Last Updated 16 ಜೂನ್ 2022, 4:19 IST
ಅಕ್ಷರ ಗಾತ್ರ

ಹಾವೇರಿ:ಬಡತನ ರೇಖೆಗಿಂತ ಕೆಳಗಿರುವ ಆದ್ಯತಾ ಕುಟುಂಬಗಳಿಗೆ ಸರ್ಕಾರ ನೀಡುವ ‘ಬಿಪಿಎಲ್‌’ ಕಾರ್ಡ್‌ಗಳನ್ನು ಸುಳ್ಳು ಮಾಹಿತಿ ನೀಡಿ ಕಬಳಿಸಿದ್ದ ಅನರ್ಹರನ್ನುಪತ್ತೆ ಹಚ್ಚಿದ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳು, ಜಿಲ್ಲೆಯಲ್ಲಿ 7556 ಪಡಿತರ ಚೀಟಿಗಳನ್ನು ರದ್ದುಗೊಳಿಸಿದ್ದಾರೆ.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ 2655, ಆದಾಯ ತೆರಿಗೆ ಪಾವತಿಸುವವರಿಂದ 1052, ವಾರ್ಷಿಕ ₹1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳಿಂದ 323, ಮೂರು ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿದ್ದ ಗ್ರಾಮೀಣ ಪ್ರದೇಶದ ಕುಟುಂಬಗಳಿಂದ 3526 ಅನರ್ಹ ಬಿಪಿಎಲ್‌ ಪಡಿತರ ಚೀಟಿಗಳನ್ನು ಹಿಂಪಡೆಯಲಾಗಿದೆ.

17 ಲಕ್ಷ ದಂಡ ವಸೂಲಿ:

ಜಿಲ್ಲೆಯಲ್ಲಿ 422 ಸರ್ಕಾರಿ ಮತ್ತುಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳ ಕಾಯಂ ನೌಕರರು ಬಿಪಿಎಲ್‌ ಕಾರ್ಡ್‌ಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದರು. ಇವರಲ್ಲಿ ಹೆಚ್ಚಿನ ಸಂಖ್ಯೆಯವರು ಶಿಕ್ಷಕರು ಎಂಬುದು ವಿಶೇಷ. ಪಡಿತರ ಚೀಟಿಗಳಿಗೆ ಜೋಡಣೆಯಾಗಿದ್ದ ಆಧಾರ್‌ ಸಂಖ್ಯೆಗಳ ಮೂಲಕ ಕುಟುಂಬದ ಆದಾಯದ ವಿವರವನ್ನು ಕಲೆ ಹಾಕಿದಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳು ಒಟ್ಟು ₹17.85 ಲಕ್ಷ ದಂಡವನ್ನು ವಸೂಲಿ ಮಾಡಿದ್ದಾರೆ.

‘ಇದುವರೆಗೆ ಶೇ 50ರಷ್ಟು ನೌಕರರು ಮಾತ್ರ ದಂಡ ಕಟ್ಟಿದ್ದಾರೆ. ಇನ್ನೂ ಶೇ 50ರಷ್ಟು ನೌಕರರಿಂದ ಸುಮಾರು ₹20 ಲಕ್ಷ ದಂಡ ವಸೂಲಿ ಮಾಡಬೇಕಿದೆ. ಕೆಲವರು ನಾವು ನೀಡಿದ ನೋಟಿಸ್‌ಗೂ ಉತ್ತರ ಕೊಡದೇ ನಿರ್ಲಕ್ಷ್ಯ ತೋರಿದ್ದಾರೆ. ಇಂಥವರ ವಿರುದ್ಧ ಅವರಿಗೆ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗೆ ಪತ್ರ ಬರೆದು ಕ್ರಮ ಜರುಗಿಸಲು ಕೋರಲಾಗಿದೆ’ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ಯಾರು ಅನರ್ಹರು?:

ಎಲ್ಲ ಕಾಯಂ ನೌಕರರು ಅಂದರೆ, ಸರ್ಕಾರದ ಮತ್ತು ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆ, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ.. ಒಳಗೊಂಡಂತೆ ಆದಾಯ ತೆರಿಗೆ/ ಸೇವಾ ತೆರಿಗೆ/ ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್‌ ಪಡೆಯುವಂತಿಲ್ಲ.

ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ವಾಣಿಜ್ಯ ವಾಹನಗಳನ್ನು ಹೊರತುಪಡಿಸಿ, ನಾಲ್ಕು ಚಕ್ರಗಳ ವಾಹನಗಳನ್ನು ಹೊಂದಿರುವ ಕುಟುಂಬಗಳು, ₹1.20 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ಗಿಂತ ಹೆಚ್ಚು ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣ ಪಕ್ಕಾ ಮನೆ ಹೊಂದಿರುವ ಕುಟುಂಬಗಳು ಮುಂತಾದವರು ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್ ಪಡೆಯಲು ಅನರ್ಹರು.

ಕಾಸು ಕೊಟ್ಟರೆ ಕಾರ್ಡ್‌!

‘ಅಧಿಕಾರಿಗಳು ಕಾಸು ಕೊಟ್ಟರೆ ಸಾಕು ಯಾರಿಗೆ ಬೇಕಾದರೂ ‘ಬಿಪಿಎಲ್‌ ಕಾರ್ಡ್‌’ ನೀಡುತ್ತಾರೆ. ಮಧ್ಯವರ್ತಿಗಳು ಕೂಡ ಅಧಿಕಾರಿಗಳಿಗೆ ಲಂಚದ ಆಮಿಷ ಒಡ್ಡಿ ತಮಗೆ ಬೇಕಾದವರಿಗೆ ಕಾರ್ಡ್‌ ಮಾಡಿಸಿಕೊಡುತ್ತಾರೆ. ಎಷ್ಟೋ ಕಡುಬಡವರು, ನಿರ್ಗತಿಕರು ಬಿಪಿಎಲ್‌ ಕಾರ್ಡ್‌ ಸಿಗದೆ ಪರದಾಡುತ್ತಿದ್ದಾರೆ. ಬಿಪಿಎಲ್‌ ಕಾರ್ಡ್‌ ಪಡೆಯುವುದರಿಂದ ಉಚಿತ ಪಡಿತರದ ಜೊತೆಗೆ ವೈದ್ಯಕೀಯ ಸೌಲಭ್ಯಗಳು ಉಚಿತವಾಗಿ ಸಿಗುವುದರಿಂದ ಈ ಕಾರ್ಡ್‌ ಪಡೆಯಲು ಬಹಳಷ್ಟು ಮಂದಿ ಲಾಬಿ ನಡೆಸುತ್ತಾರೆ’ ಎಂದು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ದೂರಿದರು.

***

ಸರ್ಕಾರಿ ನೌಕರರು ಹೊಂದಿದ್ದ ಅನರ್ಹ ಬಿಪಿಎಲ್‌ ಕಾರ್ಡ್‌ಗಳ ವಿವರ

ತಾಲ್ಲೂಕು;ಕಾರ್ಡುಗಳ ಸಂಖ್ಯೆ;ದಂಡದ ಮೊತ್ತ

ಹಾವೇರಿ;94;3,98,416

ರಾಣೆಬೆನ್ನೂರು;85;3,75,174

ಹಿರೇಕೆರೂರು;17;37,182

ರಟ್ಟೀಹಳ್ಳಿ;48;52,268

ಬ್ಯಾಡಗಿ;38;1,33,096

ಸವಣೂರು;33;2,43,912

ಶಿಗ್ಗಾವಿ;25;71,830

ಹಾನಗಲ್‌;82;4,73,234

ಒಟ್ಟು;422;17,85,112

(ಮಾಹಿತಿ:ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ)

***

ಪಡಿತರ ಚೀಟಿಗಳ ವಿವರ

ಅಂತ್ಯೋದಯ;47,231

ಬಿಪಿಎಲ್‌;3,42,362

ಎಪಿಎಲ್‌;55,021

ಒಟ್ಟು;4,44,614

***

ಜಿಲ್ಲೆಯಲ್ಲಿ 7556 ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದುಪಡಿಸಿದ್ದೇವೆ. ಇನ್ನೂ ಯಾರಾದರೂ ಅಕ್ರಮವಾಗಿ ಪಡೆದಿದ್ದರೆ ಕೂಡಲೇ ಹಿಂತಿರುಗಿಸಬೇಕು

– ವಿನೋದಕುಮಾರ್‌, ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT