ಭಾನುವಾರ, ಸೆಪ್ಟೆಂಬರ್ 22, 2019
27 °C

ಹಾವೇರಿ: ಎಸಿಬಿ ಬಲೆಗೆ ನಿಗಮದ ವ್ಯವಸ್ಥಾಪಕ ಸಿದ್ದಬಸವ ನಂಜಯ್ಯ

Published:
Updated:

ಹಾವೇರಿ: ಸಬ್ಸಿಡಿ ಚೆಕ್‌ ವಿತರಣೆಗೆ ಫಲಾನುಭವಿಯಿಂದ ಲಂಚ ಪಡೆಯುತ್ತಿದ್ದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ದಬಸವ ನಂಜಯ್ಯ ಶನಿವಾರ ಮಧ್ಯಾಹ್ನ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರಿನ ಸಿದ್ದಬಸವ ನಂಜಯ್ಯ, ಎರಡು ವರ್ಷಗಳಿಂದ ಹಾವೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಶಿಗ್ಗಾವಿ ತಾಲ್ಲೂಕು ಶಿಶುವಿನಾಳದ ಕೂಲಿಕಾರ್ಮಿಕ ಮಂಜಪ್ಪ ಎಂ.ಮಾದರ ದೂರು ಕೊಟ್ಟಿದ್ದರು. ಡಿಎಸ್‌ಪಿ ಪ್ರಹ್ಲಾದ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಸುದರ್ಶನ್ ಹಾಗೂ ಬಸವರಾಜ್ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ.

ಕುರಿ ಸಾಕಾಣೆ ಮಾಡಲು ಮಂಜಪ್ಪ ಅವರಿಗೆ ನಿಗಮದಲ್ಲಿ ₹ 5 ಲಕ್ಷ ಸಾಲ ಮಂಜೂರಾಗಿತ್ತು. ಅದರಲ್ಲಿ ₹ 3.5 ಲಕ್ಷ ಸಬ್ಸಿಡಿ ಬಿಡುಗಡೆ ಮಾಡಲು ಸಿದ್ದಬಸವ ನಂಜಯ್ಯ ₹ 20 ಸಾವಿರ ಲಂಚ ಕೇಳಿದ್ದರು ಎಂದು ಹೇಳಲಾಗಿದೆ.

‘ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಸಾಲ ಮಾಡಿ ಹೇಗೋ ₹ 10 ಸಾವಿರ ಹೊಂದಿಸಿ ಶುಕ್ರವಾರ ಅವರಿಗೆ ತಲುಪಿಸಿದ್ದೆ. ಆದರೆ, ‘ಇನ್ನೂ ₹ 10 ಸಾವಿರ ಕೊಡದಿದ್ದರೆ ಚೆಕ್ ಕೊಡುವುದಿಲ್ಲ’ ಎಂದಿದ್ದರು. ಬೆಳಿಗ್ಗೆವರೆಗೂ ಪರದಾಡಿದರೂ ದುಡ್ಡು ಹೊಂದಿಸಲು ಆಗಲಿಲ್ಲ. ಆಗ ದಿಕ್ಕು ತೋಚದಂತಾಗಿ ಎಸಿಬಿ ಅಧಿಕಾರಿಗಳ ಮೊರೆ ಹೋದೆ’ ಎಂದು ಮಂಜಪ್ಪ ಹೇಳಿದರು.‌

‘ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಂಜಪ್ಪ ಬಾಕಿ ಹಣ ಕೊಡುವ ನೆಪದಲ್ಲಿ ಆರೋಪಿಯ ಕಚೇರಿಗೆ ತೆರಳಿದ್ದರು. ಈ ವೇಳೆ ಅವರಿಬ್ಬರ ನಡುವೆ ನಡೆದ ಸಂಭಾಷಣೆಯನ್ನು ಗೋಪ್ಯವಾಗಿ ರೆಕಾರ್ಡ್ ಮಾಡಿಕೊಂಡು, ಆ ನಂತರ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು’ ಎಂದು ಎಸಿಬಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)