ಶನಿವಾರ, ನವೆಂಬರ್ 23, 2019
17 °C
2009ರಿಂದ ಕಣ್ಮರೆಯಾಗಿದ್ದ ಪಕ್ಷಿಗಳು ಪ್ರತ್ಯಕ್ಷ * ಕೆರೆ ಅಭಿವೃದ್ಧಿಗೆ ಪಕ್ಷಿಪ್ರಿಯರ ಮನವಿ

ಅಗಸನಕಟ್ಟೆ ಕೆರೆ ಸುತ್ತ ಹಕ್ಕಿಗಳ ಚಿಲಿಪಿಲಿ

Published:
Updated:
Prajavani

ಹಂಸಭಾವಿ: ಬೆಳಗಾದರೆ ಹಕ್ಕಿಗಳ ಚಿಲಿಪಿಲಿ ಸದ್ದು, ಸೂರ್ಯಾಸ್ತದ ಹೊತ್ತಿಗೆ ಹಿಂಡು ಹಿಂಡಾಗಿ ಗೂಡಿಗೆ ಮರಳುವ ಬಾನಾಡಿಗಳು. ಅವುಗಳ ಕಲರವ ನೋಡಲು ಮುಗಿಬೀಳುತ್ತಿರುವ ಪ್ರವಾಸಿಗರು... ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿರುವುದು ದೂಪದಹಳ್ಳಿ ಗ್ರಾಮದ ಅಗಸನಕಟ್ಟೆ ಕೆರೆ.

ನಾಲ್ಕೈದು ವರ್ಷಗಳಿಂದ ಮಳೆ ಇಲ್ಲದೆ ಭಣಗುಡುತ್ತಿದ್ದ ಅಗಸನಕಟ್ಟೆ ಕೆರೆ, ಈ ವರ್ಷದ ಮಳೆಗೆ ಭರ್ತಿಯಾಗಿದೆ. 2009ರಿಂದ ಕಣ್ಮರೆಯಾಗಿದ್ದ ವಿವಿಧ ಜಾತಿಗಳ ಹಕ್ಕಿಗಳು, ದಶಕದ ನಂತರ ಮತ್ತೆ ಕೆರೆಯತ್ತ ಬರುತ್ತಿವೆ. ಅವುಗಳ ಕೂಗು ಕಿವಿಗೆ ಇಂಪು ನೀಡುವುದರ ಜತೆಗೆ, ಬಾನಿನಲ್ಲಿ ಅವು ಹಾರುವಾಗ ಮೂಡುವ ಚಿತ್ತಾರ ಕಣ್ಮನ ಸೆಳೆಯುತ್ತಿದೆ.  

15–20 ವರ್ಷಗಳ ಹಿಂದೆ ಮೊದಲ ಬಾರಿಗೆ ಈ ಕೆರೆಗೆ ಬಂದಿದ್ದ ವಿಶೇಷ ತಳಿಯ ಹಕ್ಕಿಗಳು, ಕೆರೆಯಲ್ಲಿನ ನಡುಗಡ್ಡೆಯ ಜಾಲಿಯ ಮರಗಳಲ್ಲಿ ಆಶ್ರಯ ಪಡೆದು ಹೋಗಿದ್ದವು. ಆ ನಂತರ ಪ್ರತಿ ವರ್ಷವೂ ಇಲ್ಲಿಗೆ ಬಂದು ಸಂತಾನೋತ್ಪತ್ತಿ ಮಾಡುತ್ತಿದ್ದವು. ಕೆರೆಯಲ್ಲಿ ನೀರು ಬತ್ತಿದ ಬಳಿಕ ಪುನಃ ಹಾರಿ ಹೋಗುತ್ತಿದ್ದವು. ಆದರೆ, ನಂತರದ ದಿನಗಳಲ್ಲಿ ಮಳೆಯ ಅಭಾವದಿಂದ ಕೆರೆಯಲ್ಲಿ ನೀರಿನ ಸಂಗ್ರಹಣೆಯಾಗದೇ ಹಕ್ಕಿಗಳ ಆಗಮನವೂ ನಿಂತಿತ್ತು. ಈಗ ಹಳೆ ಚಿತ್ರಣಗಳು ಮರುಕಳಿಸಿದ್ದು, ಪಕ್ಷಿಪ್ರಿಯರಿಗೆ ಹಕ್ಕಿಗಳ ದರ್ಶನ ಸಿಗುತ್ತಿದೆ. ಇದರ ಜೊತೆಗೆ ಕೆರೆಯಲ್ಲಿ ಅರಳಿ ನಿಂತಿರುವ ತಾವರೆ ಹೂವು ಕೆರೆಯ ಅಂದವನ್ನು ಹೆಚ್ಚಿಸಿವೆ.

ಈ ಕೆರೆಗೆ ಬಿಳಿ ಕೊಕ್ಕರೆ, ಕೃಷ್ಣವಾಹನ ಪಕ್ಷಿ, ಗೀಜುಗ, ಚಿಟಗುಬ್ಬಿ, ಗುಣಮಣಕ, ಹೆಬ್ಬಾತು, ಚಮಚ ಚುಂಚಿನ ಬಾತುಕೋಳಿ, ನೀರುಕೋಳಿ, ನೀರು ಕಾಗೆ, ಕಾಮನ್ ಮೈನಾ, ಕುಂಡೆ ಕುಸುಕ, ಕಾಂಚಾಣ, ಬೆಳ್ಳಕ್ಕಿ, ಜೇನುಹಿಡುಕ, ನೀಲಕಂಠ, ಕಿಂಗ್ ಫಿಷರ್, ಗರುಡ ಬರುತ್ತಿವೆ’ ಎನ್ನುತ್ತಾರೆ ಪಕ್ಷಿ ಪ್ರಿಯ ಶಿಕ್ಷಕ ಈರಣ್ಣ ಕಾಟೇನಹಳ್ಳಿ. 

‘ವಿದೇಶಿ ಹಕ್ಕಿಗಳಾದ ಡ್ವಾರ್ಫ್‌ ಕ್ಯಾಸನೋರಿ, ಕ್ರೈಸೆಡ್ ಗಾನ್, ಕ್ಯಾಲಿಪೋರ್ನಿಯಾ ಬುರ್ಲಿ, ಆಸ್ಟ್ರಿಚ್ ಸಿಪಾಯಿ ಕೊಕ್ಕರೆ, ಬುಲ್ ಬುಲ್, ಒಂಟಿ ಕಾಲಿನ ಕೊಕ್ಕರೆ, ಹಮ್ಮಿಂಗ್ ಬರ್ಡನಂತಹ ಹಕ್ಕಿಗಳೂ ಇಲ್ಲಿ ಕಾಣಸಿಗುತ್ತವೆ’ ಎನ್ನುತ್ತಾರೆ ಅವರು.

ಕೆರೆ ಅಭಿವೃದ್ದಿಗೆ ಆಗ್ರಹ: ಈ ಕೆರೆಯು ದೂಪದಹಳ್ಳಿ, ಯತ್ತಿನಹಳ್ಳಿ(ಎಂಕೆ), ಅಬಲೂರ, ನೂಲಗೇರಿ ಗ್ರಾಮಗಳ ಗಡಿರೇಖೆಯನ್ನು ಸೇರಿಸುವ ಕೇಂದ್ರ ಬಿಂದುವಾಗಿದ್ದು, ಸುಮಾರು 40 ಎಕರೆ ವಿಸ್ತೀರ್ಣ ಹೊಂದಿದೆ.

ಇದು ಕಡಿಮೆ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಬೇಸಿಗೆ ಪೂರ್ವದಲ್ಲಿಯೇ ನೀರು ಬರಿದಾಗುತ್ತದೆ. ಅಲ್ಲದೇ, ಕೆರೆಯ ಪಕ್ಕದಲ್ಲಿನ ರೈತರು ಭತ್ತ ನಾಟಿ ಮಾಡಿದ್ದು, ಮಳೆಯ ಅಭಾವ ಎದುರಾದಾಗ ಕೆರೆಯಲ್ಲಿನ ನೀರನ್ನು ಜಮೀನುಗಳಿಗೆ ಹರಿಬಿಡುತ್ತಾರೆ.

‌ಇದರಿಂದ ನೀರು ಬರಿದಾಗಿ, ಪಕ್ಷಿಗಳ ತಾಣವಾಗಿರುವ ಕೆರೆಯ ನಡುಗಡ್ಡೆಯಲ್ಲಿರುವ ಜಾಲಿಯ ಮರಗಳು ನೀರಿನಿಂದ ದೂರವಾಗುತ್ತವೆ. ಇದರಿಂದ ಜನರ ದಾಳಿಯ ಆತಂಕಕ್ಕೆ ಒಳಗಾದ ಪಕ್ಷಿಗಳು, ತಮ್ಮ ವಾಸ ಸೂಕ್ತ ಸ್ಥಾನ ಅರಸಿ ವಲಸೆ ಹೋಗುತ್ತವೆ.

‘ಇಲ್ಲಿ ಪಕ್ಷಿ ವೀಕ್ಷಣೆಗೆ ಬರುವವರಿಗೆ ಸುಕ್ತವಾದ ದಾರಿಯೇ ಇಲ್ಲ. ಹೀಗಾಗಿ ಈ ಕೆರೆಯನ್ನು ಅಭಿವೃದ್ಧಿಪಡಿಸಿ ವರ್ಷವಿಡೀ ನೀರು ನಿಲ್ಲುವಂತೆ ಮಾಡಿದರೆ, ಇದೊಂದು ಶಾಶ್ವತ ಪಕ್ಷಿಧಾಮವಾಗಿ, ಪ್ರವಾಸಿ ತಾಣವೂ ಆಗುತ್ತದೆ’ ಎನ್ನುತ್ತಾರೆ ಗ್ರಾಮದ ಯುವಕ ನಾಗರಾಜ ಬಣಕಾರ. 

ಪ್ರತಿಕ್ರಿಯಿಸಿ (+)