ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕ್ರಾಮಿಕ ರೋಗ ತಡೆಗೆ ಮುಂದಾಗಿ: ಸಿಇಒ ರಮೇಶ ದೇಸಾಯಿ ಸೂಚನೆ

ಸಮನ್ವಯ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ
Last Updated 22 ಮೇ 2020, 14:20 IST
ಅಕ್ಷರ ಗಾತ್ರ

ಹಾವೇರಿ: ಮಲೇರಿಯಾ, ಡೆಂಗಿ, ಚಿಕುನ್‌ಗುನ್ಯಾ, ಮಿದುಳು ಜ್ವರ, ಆನೆಕಾಲು ರೋಗ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜೊತೆಗೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಸ್ತುತ ಕೋವಿಡ್ ವೈರಸ್‍ನ ಹರಡುವಿಕೆಯ ಸಂದಿಗ್ಧ ಸನ್ನಿವೇಶದಲ್ಲಿ ನಾವಿದ್ದೇವೆ. ಕೋವಿಡ್ ವಿರುದ್ಧ ಹೋರಾಟದ ಜೊತೆಗೆ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗಿ, ಚಿಕುನ್‌ಗುನ್ಯಾ, ಮಿದಳು ಜ್ವರ ನಿಯಂತ್ರಣಕ್ಕಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ, ಜಾಗೃತಿ, ಅರಿವು ಮೂಡಿಸುವ ಕೆಲಸವನ್ನು ಆಯಾ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

ಖಾಸಗಿ ವೈದ್ಯರ ನೆರವು ಪಡೆಯಿರಿ:ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಾಮಾನ್ಯ ಕಾಯಿಲೆಗಳಿಗೆ ವೈದ್ಯಕೀಯ ಸೌಲಭ್ಯಗಳ ಕೊರತೆ ಉಂಟಾಗಿದೆ. ಈ ಸಂದರ್ಭದಲ್ಲಿ ಖಾಸಗಿ ವೈದ್ಯರ ನೆರವು ಪಡೆದು ಕೋವಿಡ್ ಜೊತೆಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ಶ್ರಮಿಸಬೇಕಾಗಿದೆ. ಈ ಕುರಿತಂತೆ ಸಮುದಾಯದಲ್ಲಿ ಅರಿವು ಮೂಡಿಸಲು ಶಾಲಾ ಶಿಕ್ಷಕರಿಗೆ ಡೆಂಗಿ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.

ಸ್ವಚ್ಛತೆಗೆ ಆದ್ಯತೆ ನೀಡಿ:ಶಾಲೆಗಳ ಸುತ್ತ ಹಾಗೂ ಗ್ರಂಥಾಲಯಗಳಲ್ಲಿ ಸೊಳ್ಳೆರಹಿತ ವಾತಾವರಣ ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಕೈಗೊಳ್ಳಬೇಕು. ಕಲ್ಲು ಕ್ವಾರಿಗಳಲ್ಲಿ ಸೊಳ್ಳೆ ರಹಿತ ವಾತಾವರಣ, ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ವಿತರಣೆ, ಆರೋಗ್ಯ ತಪಾಸಣೆ, ಕ್ವಾರಿಗಳನ್ನು ನವೀಕರಿಸಲು ಆರೋಗ್ಯ ಇಲಾಖೆ ಸಮ್ಮತಿ ಪಡೆಯಲು ಗಣಿ ಇಲಾಖೆಯವರು ಗುತ್ತಿಗೆದಾರರಿಗೆ ಸೂಚಿಸಬೇಕು. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೇವಾರಿ, ಚರಂಡಿ ಸ್ವಚ್ಛತೆ, ಗುಂಡಿಗಳನ್ನು ಮುಚ್ಚಿಸುವುದು, ಫಾಗಿಂಗ್, ಕುಡಿಯುವ ನೀರಿನ ಸೂಕ್ತ ನಿರ್ವಹಣೆ, ತೊಟ್ಟಿಗಳ ಸ್ವಚ್ಛತೆ ಸೇರಿದಂತೆ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ.ಪ್ರಭಾಕರ ಕುಂದೂರ ಮಾತನಾಡಿ, 2025ರೊಳಗೆ ಮಲೇರಿಯಾ ನಿರ್ಮೂಲನೆ ಹಾಗೂ ಡೆಂಗಿ ಹರಡುವಿಕೆಯ ನಿಯಂತ್ರಣ ಮಾಡುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಸಹಕಾರ ಅಗತ್ಯವಾಗಿದೆ. 2016 ರಿಂದ 2020ರ ಏಪ್ರಿಲ್ ತಿಂಗಳವರೆಗೆ ಅವಲೋಕಿಸಿದಾಗ ಮಲೇರಿಯಾ ಪ್ರಕರಣಗಳು, ಚಿಕುನ್‌ಗುನ್ಯಾ ಪ್ರಕರಣಗಳು ತೀವ್ರವಾಗಿ ಇಳಿಮುಖವಾಗಿವೆ. ಡೆಂಗಿ ಪ್ರಕರಣಗಳು ಇಳಿಮುಖವಾಗಿಲ್ಲ ಎಂದು ಮಾಹಿತಿ ನೀಡಿದರು.

ಡಾ.ಜಯಾನಂದ ಅವರು ತಾಯಿ ಮರಣ, ಶಿಶು ಮರಣ ವಿವರ, ಎನ್.ಆರ್.ಎಚ್.ಎಂ. ಹಾಗೂ ಜನನಿ ಸುರಕ್ಷಾ ಯೋಜನೆ ಪ್ರಗತಿ ಕುರಿತಂತೆ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಆರೋಗ್ಯ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಡಾ.ಅಪ್ಪಾಸಾಹೇಬ ನರಹಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹಾವನೂರ, ಡಾ.ಜಯಾನಂದ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT