ಶುಕ್ರವಾರ, ಜೂನ್ 5, 2020
27 °C
ಏ.15 ರಿಂದ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹ

ಹಾವೇರಿ ಜಿಲ್ಲೆಯ ಪ್ರತಿ ವ್ಯಕ್ತಿಯ ತಪಾಸಣೆ: ಸಿಇಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಸಮುದಾಯ ಜನರ ಆರೋಗ್ಯದ ಸ್ಥಿತಿಗತಿಗಳನ್ನು ವೈಜ್ಞಾನಿಕ ತಪಾಸಣೆಯ ಮೂಲಕ ಮಾಹಿತಿ ಸಂಗ್ರಹಿಸಲು ಏ. 15ರಿಂದ ಜಿಲ್ಲೆಯಲ್ಲಿ ಮನೆ–ಮನೆಗೆ ತೆರಳಿ ಆರೋಗ್ಯ ತಪಾಸಣೆ ಆರಂಭಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಜಿಲ್ಲೆಯ ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಸಭೆ ನಡೆಸಿ ‘ಕಮ್ಯುನಿಟಿ ಹೆಲ್ತ್ ಚೆಕಪ್’ ಕುರಿತು ಚರ್ಚಿಸಿದರು.

ಜಿಲ್ಲೆಯಲ್ಲಿ ಕೋವಿಡ್‌–19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿಲ್ಲ. ಆದರೂ ತಳಮಟ್ಟದಲ್ಲಿ ಆರೋಗ್ಯದ ಸ್ಥಿತಿಗತಿಗಳ ಮಾಹಿತಿಗಾಗಿ ಸಮುದಾಯದ ಜನರನ್ನು ಆರೋಗ್ಯ ತಪಾಸಣೆಗೊಳಪಡಿಸಿ ವೈದ್ಯಕೀಯ ವರದಿ ಪಡೆಯಲು ಉದ್ದೇಶಿಸಲಾಗಿದೆ. ಸಾಮಾನ್ಯ ಅನಾರೋಗ್ಯ ವ್ಯಕ್ತಿಗಳಿಗೆ ಆಯಾ ಗ್ರಾಮದಲ್ಲೇ ಚಿಕಿತ್ಸೆ ನೀಡಲು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು. 

ತಪಾಸಣೆ ವೇಳೆ ಕೊರೊನಾ ಸೋಂಕು ಲಕ್ಷಣಗಳು ಯಾವುದಾದರೂ ವ್ಯಕ್ತಿಗಳಲ್ಲಿ ಪತ್ತೆಯಾದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಸಮುದಾಯಕ್ಕೆ ಹರಡುವುದನ್ನು ತಪ್ಪಿಸುವ ಮುಂಜಾಗ್ರತಾ ಕ್ರಮವಾಗಿ ‘ಸಮುದಾಯ ಆರೋಗ್ಯ ತಪಾಸಣೆ’ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಆಶಾ, ಅಂಗನವಾಡಿ, ಕಿರಿಯ ಆರೋಗ್ಯ ಸಹಾಯಕರು ಒಳಗೊಂಡ ಮೂರುಜನರ ತಂಡ ರಚಿಸಿ ಪ್ರತಿ ತಂಡಕ್ಕೆ 50 ಮನೆಗಳಂತೆ ಹಂಚಿಕೆ ಮಾಡಿ ತಪಾಸಣೆ ಆರಂಭಿಸಬೇಕು. ಅಕ್ಕಪಕ್ಕ ಗ್ರಾಮದ ಆಶಾ, ಅಂಗನವಾಡಿ ಹಾಗೂ ಕಿರಿಯ ಆರೋಗ್ಯ ಸಹಾಯಕರನ್ನು ನಿಯೋಜಿಸಿ ಗ್ರಾಮದ ಮನೆಗಳ ಸಂಖ್ಯೆಗನುಸಾರ ಹೆಚ್ಚುವರಿ ತಂಡ ರಚಿಸಿ ಪ್ರತಿ ಮನೆಯ ಪ್ರತಿ ವ್ಯಕ್ತಿಯ ಮಾಹಿತಿಯನ್ನು ಪಡೆಯಬೇಕು ಎಂದರು. 

ಸಮೀಕ್ಷೆ ಕಾರ್ಯಕರ್ತರಿಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳು, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಹಾಗೂ ಗೂಗಲ್ ಆಧಾರಿತ ಸಮೀಕ್ಷಾ ಮಾಹಿತಿಯ ವರದಿಯನ್ನು ಕಳುಹಿಸುವ ಕೊಡುವ ವ್ಯವಸ್ಥೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ, ಹಾವೇರಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲೆಯ ಎಲ್ಲ ತಾಲ್ಲೂಕಿನ ತಹಶೀಲ್ದಾರ್‌ಗಳು, ತಾಲ್ಲೂಕು ಪಂಚಾಯ್ತಿ ಇ.ಒ.ಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು