ಬುಧವಾರ, ಜೂನ್ 23, 2021
30 °C
ಹಾಸ್ಟೆಲ್‌, ಆಸ್ಪತ್ರೆ, ಕಾರಾಗೃಹಗಳಿಗೆ ಮಾನವ ಹಕ್ಕು ಆಯೋಗದ ನ್ಯಾಯಾಂಗ ಸದಸ್ಯ ಚಂಗಪ್ಪ ಭೇಟಿ

ಕುಂದು–ಕೊರತೆ ಮಾಹಿತಿ ನೀಡಲು ಮಾನವ ಹಕ್ಕು ಆಯೋಗದ ನ್ಯಾಯಾಂಗ ಸದಸ್ಯ ಚಂಗಪ್ಪ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಕೆ.ಜಿ.ಚಂಗಪ್ಪ ಗುರುವಾರ ಜಿಲ್ಲೆಯ ವಿವಿಧ ವಿದ್ಯಾರ್ಥಿ ನಿಲಯ, ಆಸ್ಪತ್ರೆ ಹಾಗೂ ಹಾವೇರಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಸತಿನಿಲಯಗಳಲ್ಲಿ ಮೂಲಸೌಕರ್ಯಗಳ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಚಿಕಿತ್ಸಾ ಸೌಲಭ್ಯ, ರೋಗಿಗಳಿಗೆ ಒದಗಿಸುವ ಸೌಕರ್ಯ, ಸ್ವಚ್ಛತೆ ಕುರಿತು ಪರಿಶೀಲಿಸಿ, ರೋಗಿಗಳಿಂದ ಮಾಹಿತಿ ಪಡೆದರು.

ಹಾವೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿನಿಲಯಗಳಿಗೆ ಭೇಟಿ ನೀಡಿ, ವಾರ್ಡನ್‍ಗಳಿಂದ ವಸತಿನಿಲಯಗಳ ಅಡುಗೆ ಕೋಣೆ, ಶೌಚಾಲಯ ಸ್ವಚ್ಛತೆ, ವಿದ್ಯಾರ್ಥಿಗಳ ಕೊಠಡಿ ವ್ಯವಸ್ಥೆ, ಹಾಸಿಗೆ, ಹೊದಿಕೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಗ್ರಂಥಾಲಯ ವ್ಯವಸ್ಥೆ, ತುರ್ತು ವೈದ್ಯಕೀಯ ಹಾಗೂ ರಕ್ಷಣಾ ನೆರವು ಕುರಿತು ಮಾಹಿತಿ ಪಡೆದರು.

ವಸತಿನಿಲಯಗಳ ಕಾಯಂ ಹಾಗೂ ಹೊರಗುತ್ತಿಗೆ ನೌಕರರ ವೇತನ ಪಾವತಿ ಪಿ.ಎಫ್, ಇ.ಎಸ್.ಐ ಸೌಕರ್ಯ ಕುರಿತು ಮಾಹಿತಿ ಪಡೆದರು.

ವಿದ್ಯಾರ್ಥಿಗಳೊಂದಿಗೆ ಕೆ.ಜಿ.ಚಂಗಪ್ಪ ಮಾತನಾಡಿ, ವಸತಿನಿಲಯದಲ್ಲಿ ಯಾವುದಾದರೂ ಕೊರತೆಗಳಿದ್ದರೆ ಮಾಹಿತಿಯನ್ನು ಹಂಚಿಕೊಳ್ಳಬೇಕು. ತುರ್ತು ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವೈದ್ಯಕೀಯ, ಪೊಲೀಸ್‌ ನೆರವಿನ ಸಹಾಯವಾಣಿ ಸಂಖ್ಯೆಯನ್ನು ಪ್ರದರ್ಶಿಸುವಂತೆ ಹಾಕಬೇಕು ಎಂದು ವಾರ್ಡನ್‌ಗಳಿಗೆ ನಿರ್ದೇಶನ ನೀಡಿದರು.

ಕಾರಾಗೃಹಕ್ಕೆ ಭೇಟಿ: ಹಾವೇರಿ ಜಿಲ್ಲಾ ಕೇಂದ್ರ ಕಾರಾಗ್ರಹಕ್ಕೆ ಭೇಟಿ ನೀಡಿದ ಅವರು ಕೈದಿಗಳ ವೈಯಕ್ತಿಕ ಮಾಹಿತಿಯೊಂದಿಗೆ ಕಾರಾಗೃಹದ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಬಳಿಕ ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿರುವ ಕೈದಿಗಳನ್ನು ಮಾತನಾಡಿಸಿ ಯಾವ ಯಾವ ಪ್ರಕರಣದಲ್ಲಿ ಬಂದಿಯಾಗಿದ್ದೀರಿ? ಎಷ್ಟು ವರ್ಷಗಳಿಂದ ಜೈಲಿನಲ್ಲಿದ್ದಿರಿ? ನಿಮ್ಮ ಪರವಾಗಿ ವಾದ ಮಾಡುವ ವಕೀಲರು ಯಾರು? ಹಾಗೂ ವಕೀಲರ ನೇಮಕಾತಿ ಕುರಿತು ವಿವರವಾಗಿ ಮಾಹಿತಿ ಪಡೆದುಕೊಂಡರು.

ಮಹಿಳಾ ಸೆಲ್‍ಗೆ ಭೇಟಿ ನೀಡಿ ಮಕ್ಕಳ ಪೋಷಣೆ, ಪೌಷ್ಟಿಕ ಆಹಾರ ವಿತರಣೆ ಹಾಗೂ ಮಹಿಳಾ ಕೈದಿಗಳಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲದೆ, ಕಾನೂನು ಸೇವೆಗಳ ಪ್ರಾಧಿಕಾರದಿಂದ ಅಗತ್ಯ ನೆರವು ಒದಗಿಸಬೇಕು ಹಾಗೂ ಮಹಿಳಾ ಸೆಲ್‌ನಲ್ಲಿ ಗ್ರಂಥಾಲಯ ಸೌಲಭ್ಯ ಒದಗಿಸುವಂತೆ ಸಲಹೆ ನೀಡಿದರು.

ಹಾವೇರಿ ತಹಶೀಲ್ದಾರ್‌ ಶಂಕರ್ ಹಾಗೂ ರಾಣೆಬೆನ್ನೂರು ತಹಶೀಲ್ದಾರ್‌ ಬಸವನಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚೈತ್ರಾ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜು ಕೂಲೇರ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಗುಡ್ಡಪ್ಪ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.