ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ: ಮುಂಗಾರು ಬಿತ್ತನೆ ವಿಳಂಬ

ಧರೆಗಿಳಿಯದ ಮಳೆರಾಯ; ರೈತರಲ್ಲಿ ಆತಂಕ
Published 30 ಮೇ 2023, 23:30 IST
Last Updated 30 ಮೇ 2023, 23:30 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ಬಿತ್ತನೆ ಕಾರ್ಯ ಮುಂದಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಕಳೆದ ತಿಂಗಳು ಒಂದೆರಡು ಬಾರಿ ಮಳೆಯಾಗಿರುವುದನ್ನು ಹೊರತುಪಡಿಸಿದರೆ ಮತ್ತೆ ಮಳೆಯಾಗಿಲ್ಲ. ರೈತರು ಆಕಾಶದ ಕಡೆಗೆ ಮುಖ ಮಾಡುವಂತಾಗಿದೆ.

ಸಂಜೆಯಾದರೆ ಗುಡುಗು, ಮಿಂಚಿನ ಆರ್ಭಟ ಜೋರಾಗಿರುತ್ತದೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ಮಳೆ ಮಾಯವಾಗಿ ಒಣ ಹವೆ ಮುಂದುವರೆಯುತ್ತದೆ. ಬೆಳಿಗ್ಗೆ ತಂಪು ವಾತಾವರಣ, ಮಧ್ಯಾಹ್ನ ಉರಿ ಬಿಸಿಲು ಸಂಜೆ ಹೊತ್ತು ಹೇಡಿ ಗಾಳಿ ಬೀಸುತ್ತದೆ. ಇದರಿಂದಾಗಿ ರೈತರು ಚಿಂತಾಕ್ರಾಂತರಾಗಿದ್ದು, ಬಿತ್ತನೆ ಕಾರ್ಯ ವಿಳಂಬವಾಗುವ ಆತಂಕ ಎದುರಾಗಿದೆ.

ತಾಲ್ಲೂಕಿನಲ್ಲಿ ಒಟ್ಟಾರೆ 34 ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದ್ದು, ಈ ಪೈಕಿ 32 ಸಾವಿರ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ನಡೆಯಲಿದೆ. ಗೋವಿನ ಜೋಳ ಶೇ65 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ನಡೆಯಲಿದ್ದು, ಶೇ25ರಷ್ಟು ಕ್ಷೇತ್ರದಲ್ಲಿ ಹತ್ತಿ ಬಿತ್ತನೆಯಾಗಲಿದೆ. ಇನ್ನುಳಿದಂತೆ ತೊಗರಿ, ಶೇಂಗಾ, ಹೈಬ್ರಿಡ್ ಜೋಳ, ಸೋಯಾಬೀನ್, ಉದ್ದು, ಹೆಸರು ಬಿತ್ತನೆ ನಡೆಯಲಿದೆ.

ರಿಯಾಯತಿ ದರದಲ್ಲಿ ಬಿತ್ತನೆ ಬೀಜಗಳ ದಾಸ್ತಾನಿಗಾಗಿ ಬೇಡಿಕೆ ಸಲ್ಲಿಸಲಾಗಿದ್ದು, ನಿಗದಿಯಂತೆ ಕಾಗಿನೆಲೆ ಹೋಬಳಿಯ ಕಾಗಿನೆಲೆ, ಚಿಕ್ಕಬಾಸೂರ ಹಾಗೂ ಬ್ಯಾಡಗಿ ಹೋಬಳಿಯ ಬ್ಯಾಡಗಿ ಮತ್ತು ಮೋಟೆಬೆನ್ನೂರ ಗ್ರಾಮಗಳಲ್ಲಿ ಬಿತ್ತನೆ ಬೀಜಗಳ ವಿತರಣೆ ನಡೆಯಲಿದೆ. 2,800 ಕ್ವಿಂಟಲ್ ಗೋವಿನ ಜೋಳ, 200 ಕ್ವಿಂಟಲ್ ಹೈಬ್ರಿಡ್ ಜೋಳ, ತಲಾ 250 ಕ್ವಿಂಟಲ್ ಸೋಯಾಬೀನ್, ಶೇಂಗಾ, ತಲಾ 50 ಕ್ವಿಂಟಲ್ ತೊಗರಿ ಮತ್ತು ಹೆಸರು ಬಿತ್ತನೆ ಬೀಜಗಳ ದಾಸ್ತಾನು ಹಾಗೂ ಗೊಬ್ಬರದ ದಾಸ್ತಾನಿಗೂ ಬೇಡಿಕೆ ಸಲ್ಲಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ ಮಾಹಿತಿ ನೀಡಿದರು.

ಸರ್ಕಾರ ನಿಗದಿಪಡಿಸಿದ ದರದಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರಗಳ ಮಾರಾಟ ಮಾಡುವಂತೆ ಖಾಸಗಿ ವ್ಯಾಪಾರಸ್ಥರಿಗೆ ಸೂಚಿಸಲಾಗಿದೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

34 ಸಾವಿರ ಹೆಕ್ಟೇರ್ ಒಟ್ಟು ಕೃಷಿ ಕ್ಷೇತ್ರ ಮುಂಗಾರು ಬಿತ್ತನೆ ಕ್ಷೇತ್ರ 32 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಕ್ಷೇತ್ರ 21 ಸಾವಿರ ಹೆಕ್ಟೇರ್

ಸಮರ್ಪಕ ಮಳೆಯಾಗದೆ ಕೃಷಿಭೂಮಿಯನ್ನು ಹಸನುಗೊಳಿಸುವ ಕಾರ್ಯಕ್ಕೂ ಈ ವರ್ಷ ಹಿನ್ನೆಡೆಯಾಗಿದೆ -ಕಿರಣಕುಮಾರ ಗಡಿಗೋಳ ಕಾರ್ಯಾಧ್ಯಕ್ಷ ರಾಜ್ಯ ರೈತ ಸಂಘದ ತಾಲ್ಲೂಕು ಘಟಕ

ತಾಲ್ಲೂಕಿನ ಚಿಕ್ಕಣಜಿ ಭಾಗದಲ್ಲಿ ಅಂತರ್ಜಲ ಕೆಳಮಟ್ಟಕ್ಕೆ ಕುಸಿದ ಪರಿಣಾಮ ನೀರಿಲ್ಲದೆ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಕಬ್ಬು ಬೆಳೆದ ರೈತನಿಗೆ ನಷ್ಟವಾಗಿದೆ. ಕೂಡಲೆ ಕೆರಗಳನ್ನು ತುಂಬಿಸುವ ಕಾರ್ಯ ನಡೆಯಬೇಕಾಗಿದೆ –ಮಲ್ಲೇಶಪ್ಪ ಡಂಬಳ ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT