ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ನೋಂದಣಿ ಮಾಡಿಸಲು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸರದಿ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಂಡಿರುವ ಜಿಲ್ಲಾಸ್ಪತ್ರೆ, ತ್ವರಿತವಾಗಿ ಚೀಟಿ ಮಾಡಿಸಲು ‘ಅಭಾ’ ಆ್ಯಪ್ ಪರಿಚಯಿಸಿದೆ.
ದೇಶದ ವಿವಿಧ ಆಸ್ಪತ್ರೆಗಳಲ್ಲಿ ಯಶಸ್ವಿಯಾಗಿರುವ ‘ಅಭಾ’ ಆ್ಯಪ್‌ನ ಸೇವೆಯನ್ನು ಹಾವೇರಿ ಜಿಲ್ಲಾಸ್ಪತ್ರೆಯಲ್ಲೂ ಆರಂಭಿಸಲಾಗಿದೆ. ಹೊಸದಾಗಿ ಜಿಲ್ಲಾಸ್ಪತ್ರೆಗೆ ಬರುವ ಜನರು, ತಮ್ಮ ಮೊಬೈಲ್‌ನಲ್ಲಿ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ತ್ವರಿತವಾಗಿ ಹೊರ ರೋಗಿಗಳ ವಿಭಾಗದ (ಒಪಿಡಿ) ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.
ನ್ಯಾಷನಲ್ ಹೆಲ್ತ್ ಅಥಾರಿಟಿ ವತಿಯಿಂದ ಅಭಿವೃದ್ಧಿಪಡಿಸಿರುವ ಅಭಾ ಆ್ಯಪ್, ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ವೈದ್ಯರ ಮೆಚ್ಚುಗೆ ಪಡೆದಿದೆ. ಆಧುನಿಕ ಯುಗದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು, ಯಾವುದೇ ಸರದಿ ನಿಲ್ಲದೇ ಚೀಟಿ ಮಾಡಿಸಲು ಆ್ಯಪ್ ಸಹಕಾರಿಯಾಗುತ್ತಿದೆ. ಇದರಿಂದಾಗಿ ರೋಗಿಗಳು, ಸಿಬ್ಬಂದಿ ಹಾಗೂ ವೈದ್ಯರ ಸಮಯ ಉಳಿತಾಯವಾಗುತ್ತಿದೆ.
‘ಕ್ಯೂನಲ್ಲಿ ನಿಲ್ಲಬೇಡಿ...’ ಎಂಬ ಘೋಷವಾಕ್ಯದೊಂದಿಗೆ ರೂಪಿಸಲಾಗಿರುವ ಅಭಾ ಆ್ಯಪ್‌ನಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯ ವಿವರವನ್ನು ದಾಖಲಿಸಲಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳು, ಆ್ಯಪ್ ತೆರೆದು ಹಾವೇರಿ ಜಿಲ್ಲಾಸ್ಪತ್ರೆ ಆಯ್ಕೆ ಮಾಡಿಕೊಂಡು ನೋಂದಣಿ ಮಾಡಿಸಿ ಚೀಟಿಗಾಗಿ ಆನ್‌ಲೈನ್ ಮೂಲಕವೇ ಟೋಕನ್ ಪಡೆಯಬಹುದಾಗಿದೆ.
ಕೋವಿಡ್ ನಂತರದ ದಿನಗಳಲ್ಲಿ ಜನರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಾತಾವರಣದ ಬದಲಾವಣೆಯಿಂದಾಗಿ ಜ್ವರ, ಕೆಮ್ಮು, ನೆಗಡಿ ಹಾಗೂ ಇತರೆ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದರ ನಡುವೆಯೂ ಡೆಂಗಿ ಹಾವಳಿಯೂ ಇದೆ. ಈ ಪೈಕಿ ಹಲವರು ಜಿಲ್ಲಾಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಜಿಲ್ಲಾಸ್ಪತ್ರೆ ಎದುರು ಪ್ರತಿನಿತ್ಯವೂ ನೋಂದಣಿ ಮಾಡಿಸಲು ಜನರು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲ ಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ.
ಈ ಹಿಂದೆ ಜಿಲ್ಲಾಸ್ಪತ್ರೆ ಕಟ್ಟಡದ ಒಳಭಾಗದಲ್ಲಿ ನೋಂದಣಿ ಕೇಂದ್ರವಿತ್ತು. ಈ ಸ್ಥಳದಲ್ಲಿ ಸರದಿ ನಿಲ್ಲಲು ತೊಂದರೆ ಉಂಟಾಗುತ್ತಿದೆ. ಇದೇ ಕಾರಣಕ್ಕೆ ನೋಂದಣಿ ಕೇಂದ್ರವನ್ನು ಹೊರಗಿರುವ ಸುಸಜ್ಜಿತ ಕೊಠಡಿಗಳಿಗೆ ವರ್ಗಾಯಿಸಲಾಗಿದೆ. ನೋಂದಣಿ ಕೌಂಟರ್‌ಗಳ ಎದುರು ಸಹ ಜನರು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲುವುದು ತಪ್ಪಿಲ್ಲ. ಇದೇ ಕಾರಣಕ್ಕೆ ಅಭಾ ಆ್ಯಪ್ ಸಹಾಯದಿಂದ, ಹೊಸದಾಗಿ ಫಾಸ್ಟ್ ಟ್ರ್ಯಾಕ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ‘ಫಾಸ್ಟ್ ಟ್ರ್ಯಾಕ್’ ಕೌಂಟರ್ ತೆರೆಯಲಾಗಿದ್ದು, ಆ್ಯಪ್ ಬಳಕೆದಾರರಿಗೆ ಮಾತ್ರ ಕೌಂಟರ್ ಮೀಸಲಿಡಲಾಗಿದೆ.
ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಮಧ್ಯಾಹ್ನ 1.45 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ನೋಂದಣಿ ವಿಭಾಗ ತೆರೆದಿರುತ್ತದೆ.
‘ಆಸ್ಪತ್ರೆಗೆ ನಿತ್ಯವೂ 1 ಸಾವಿರದಿಂದ 1,200 ರೋಗಿಗಳು ಆಸ್ಪತ್ರೆಯ ಹೊರರೋಗಿಗಳ ವಿಭಾಗಕ್ಕೆ ಬಂದು ಹೋಗುತ್ತಾರೆ. ಆಸ್ಪತ್ರೆಯ ಸಾಮರ್ಥ್ಯಕ್ಕೆ ಮೀರಿ ರೋಗಿಗಳು ಬರುತ್ತಿದ್ದಾರೆ. ಲಭ್ಯವಿರುವ ಸೌಲಭ್ಯ ಬಳಸಿಕೊಂಡು ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಗಂಟೆಗಟ್ಟಲೇ ಸರದಿ ನಿಲ್ಲುವುದನ್ನು ತಪ್ಪಿಸಲು ಅಭಾ ಆ್ಯಪ್ ಫಾಸ್ಟ್ ಟ್ರ್ಯಾಕ್ ವ್ಯವಸ್ಥೆ ಜಾರಿಗೊಳಿಸಲಾಗಿದೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ. ಆರ್. ಹಾವನೂರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಸ್ಪತ್ರೆಗೆ ಬರುವ ಬಹುಪಾಲು ಮಂದಿ, ಸರದಿಯಲ್ಲಿ ನಿಂತುಕೊಂಡೇ ಚೀಟಿ ಮಾಡಿಸುತ್ತಿದ್ದಾರೆ. ಇದರಿಂದಾಗಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಅಭಾ ಆ್ಯಪ್ ಬಳಕೆ ಮಾಡುವುದರಿಂದ ತ್ವರಿತವಾಗಿ ಚೀಟಿ ಮಾಡಿಸಿ, ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬಹುದು. ಜನರು ಆ್ಯಪ್‌ನ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ವಿದ್ಯಾರ್ಥಿಗಳ ಸಹಾಯ: ಜಿಲ್ಲಾಸ್ಪತ್ರೆಯ ಕೌಂಟರ್‌ಗಳ ಬಳಿಯೇ ಆ್ಯಪ್ ಬಳಕೆ ಕುರಿತು ಫಲಕಗಳನ್ನು ಅಳವಡಿಸಲಾಗಿದೆ. ಕೌಂಟರ್ ಬಳಿ ಕುರ್ಚಿ ಹಾಕಿಕೊಂಡು ಕುಳಿತುಕೊಳ್ಳುವ ನರ್ಸೀಂಗ್ ವಿದ್ಯಾರ್ಥಿನಿಯರು, ಜನರಿಗೆ ಆ್ಯಪ್ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಅವರೇ ಆ್ಯಪ್ ಡೌನ್‌ಲೋಡ್ ಮಾಡಿಸಿ, ಇನ್‌ಸ್ಟಾಲ್ ಮಾಡಿಸಿ ಮೊದಲ ಬಾರಿಗೆ ಚೀಟಿ ಮಾಡಿಸಲು ಸಹಾಯ ಮಾಡುತ್ತಿದ್ದಾರೆ.
‘ಇಂದು ಎಲ್ಲರ ಬಳಿಯೂ ಅಂತರ್ಜಾಲ ಸಂಪರ್ಕವಿರುವ ಮೊಬೈಲ್ ಇದೆ. ಅಭಾ ಆ್ಯಪ್ ಇದ್ದರೂ, ಜಿಲ್ಲಾಸ್ಪತ್ರೆಗೆ ಬರುವ ಬಹುಪಾಲು ಜನರು ಸುಖಾಸುಮ್ಮನೇ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ಇದರ ಬದಲು, ಮೊಬೈಲ್‌ನಲ್ಲಿ ಆ್ಯಪ್ ಬಳಸಿದರೆ ಸರದಿ ನಿಲ್ಲುವುದು ತಪ್ಪಲಿದೆ. ಈ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುತ್ತಿದ್ದೇವೆ’ ಎಂದು ನರ್ಸೀಂಗ್ ವಿದ್ಯಾರ್ಥಿನಿಯೊಬ್ಬರು ಹೇಳಿದರು.
ಜನರು ಸರದಿ ನಿಲ್ಲುವುದನ್ನು ತಪ್ಪಿಸಲು ಮತ್ತಷ್ಟು ಕೌಂಟರ್ ತೆರೆಯುವಂತೆ ಹಾಗೂ ಫಾಸ್ಟ್ ಟ್ರ್ಯಾಕ್ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸುವಂತೆ ವೈದ್ಯರಿಗೆ ಸೂಚಿಸಲಾಗಿದೆ.–ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.