ಬುಧವಾರ, ಏಪ್ರಿಲ್ 1, 2020
19 °C
ಜಿಲ್ಲಾ ಮಟ್ಟದ ಉದ್ಯೋಗಮೇಳ; 2154 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರು

ಶಿಕ್ಷಣ ವ್ಯವಸ್ಥೆ ಬದಲಾಗಲಿ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ದೇಶದಲ್ಲಿ ಬ್ರಿಟಿಷರು ಮಾಡಿಹೋಗಿದ್ದ ಶಿಕ್ಷಣ ವ್ಯವಸ್ಥೆಯಲ್ಲಿ ನಾವಿದ್ದೇವೆ. ಈ ವ್ಯವಸ್ಥೆ ಬದಲಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ ಸಹಯೋಗದಲ್ಲಿ ಶನಿವಾರ ಆರಂಭಗೊಂಡ ಜಿಲ್ಲಾ ಮಟ್ಟದ ಉದ್ಯೋಗಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಕಚೇರಿಯಲ್ಲಿ ಕ್ಲರ್ಕ್‌ಗಳ ತಯಾರಿ ಮಾಡುವ ಶಿಕ್ಷಣ ವ್ಯವಸ್ಥೆಯನ್ನು ಬ್ರಿಟಿಷರು ಮಾಡಿದ್ದರು. ಅದು ಹಾಗೇ ಮುಂದುವರೆದು ಬಂದಿದೆ. ಉದ್ಯೋಗಾಕಾಂಕ್ಷಿಗಳು ಕೌಶಲವನ್ನು ಅಳವಡಿಸಿಕೊಳ್ಳುವುದರ ಜತೆಗೆ ಸತತ ಪ್ರಯತ್ನವನ್ನು ಮಾಡಬೇಕು ಎಂದರು

ಬದಲಾಗುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಹೆಚ್ಚಿನ ಜ್ಞಾನದಾಹವನ್ನು ಹೆಚ್ಚಿಸಿಕೊಳ್ಳಬೇಕು. ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ತಾಂತ್ರಿಕತೆಯಲ್ಲಿಯೂ ಬದಲಾಗುತ್ತಿದ್ದು ಅವುಗಳನ್ನು ತಿಳಿದುಕೊಳ್ಳುವ ಕೌಶಲವನ್ನು ರೂಢಿಸಿಕೊಳ್ಳಬೇಕು ಎಂದರು.  

ದೇಶದಲ್ಲಿ ಶೇ 45 ಕ್ಕಿಂತ ಹೆಚ್ಚು ಯುವಕರಿದ್ದಾರೆ. ವರ್ತಮಾನದ ಬದುಕನ್ನು ಕಟ್ಟಿಕೊಡಬೇಕಾದರೆ ಆರ್ಥಿಕತೆ ಅತೀ ವೇಗದಲ್ಲಿ ಬೆಳೆಯಬೇಕು. ಹಲವಾರು ಉದ್ಯೋಗ ಸೃಷ್ಟಿಯಾಗುತ್ತದೆ. ಯಾರಿಗೆ ಕೌಶಲ ಮತ್ತು ಶ್ರಮ ಪಡುವ ಶಕ್ತಿ ಇದೆಯೋ ಅವರಿಗೆ ಉದ್ಯೋಗ ಲಭಿಸುತ್ತದೆ. ಇಲ್ಲದಿದ್ದವರು ಅಲೆದಾಡುತ್ತಾರೆ ಎಂದರು.

ಮುಂದಿನ ದಿನದಲ್ಲಿ ವಿವಿಧ ವಲಯಕ್ಕೆ, ನಿಗದಿತ ಹುದ್ದೆಗೆ ಉದ್ಯೋಗ ಮೇಳವನ್ನು ನಡೆಸಬೇಕು. ಇದರಿಂದ ಆಯಾ ವರ್ಗಕ್ಕೆ ಅವರವರ ಕೌಶಲಕ್ಕೆ ಸಂಬಂಧಪಟ್ಟಂತೆ ಕೆಲಸಗಳನ್ನು ನೀಡುವಂತಾಗಬೇಕು ಎಂದು ಸಲಹೆ ನೀಡಿದರು.

ಕೈಯಲ್ಲಿನ ಗೆರೆ ಸವೆದರೆ ಹಣೆ ಮೇಲೆ ಗೆರೆ ಮೂಡುತ್ತದೆ. ಇಂದಿನ ಸಂದರ್ಭದಲ್ಲಿ ಕೆಲಸಮಾಡಲು ಬೇಕಾದ ಕೌಶಲ್ಯವನ್ನು ಹೊಂದುವುದರ ಮೂಲಕ ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆಯಬಹುದು. ಹಣೆಬರಹದ ಮೇಲೆ ಭಾರಹಾಕದೆ ಪ್ರಯತ್ನ ಶೀಲರಾಗಿ ಯಶಸ್ಸು ಸಾಧಿಸಿ ಎಂದು ಹಾರೈಸಿದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಹಿಂದೆ 24 ಇಲಾಖೆಗಳಲ್ಲಿ ಕೌಶಲ ಕೇಂದ್ರ ಹಂಚಿಕೆಯಾಗಿತ್ತು. ಇವೆಲ್ಲವನ್ನು ಒಗ್ಗೂಡಿಸಿ ಕೇಂದ್ರ ಸರ್ಕಾರ ಪ್ರತ್ಯೇಕ ಸಚಿವಾಲಯವನ್ನು ಮಾಡಿದೆ ಎಂದರು.

ಪ್ರಸ್ತುತ ಕೌಶಲ ಹಾಗೂ ಪಠ್ಯಕ್ರಮವನ್ನು ಅಳವಡಿಸುವ ಚಿಂತನೆ ಇದೆ. ದೇಶದ ಯುವಕರಿಗೆ ಸರಿಯಾದ ಜ್ಞಾನ ಮತ್ತು ಕೌಶಲವನ್ನು ಪಡೆದರೆ ಜಾಗತಿಕ ಮಟ್ಟದಲ್ಲಿಯೂ ಯಶಸ್ಸು ಸಾಧಿಸಬಹುದು. ಈ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು.

ನೋಂದಣಿ ವಿವರ: ಉದ್ಯೋಗ ಮೇಳದಲ್ಲಿ ಏಳು ಸಾವಿರ ಅಭ್ಯರ್ಥಿಗಳು ನೋಂದಾಯಿಸಿ ಕೊಂಡಿದ್ದಾರೆ. ಅಂದಾಜು 3,500 ಉದ್ಯೋಗಾವಕಾಶಗಳು ಲಭ್ಯವಿದ್ದು, ಮೊದಲ ದಿನ 2154 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಉದ್ಯೋಗ ಮೇಳದಲ್ಲಿ ಮೊದಲ ದಿನ 56 ಕಂಪನಿಗಳು ಭಾಗವಹಿಸಿದ್ದವು. ಸಂದರ್ಶನಕ್ಕಾಗಿ 10 ಕೌಂಟರ್‌ಗಳನ್ನು ತೆರೆಯಲಾಗಿದೆ.

ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಸನಗೌಡ ದೇಸಾಯಿ, ಸದಸ್ಯರಾದ ಸಿದ್ದರಾಜ ಕಲಕೋಟಿ, ವಿರುಪಾಕ್ಷಪ್ಪ ಕಡ್ಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಕೆ.ಜಿ.ದೇವರಾಜು,  ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗಿಶ್ವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು