ಸೋಮವಾರ, ನವೆಂಬರ್ 18, 2019
26 °C
ವಿಮೆ ಕಂಪನಿ, ಕೃಷಿ ಇಲಾಖೆ ಅಧಿಕಾರಿಗಳಿಗೆ ತರಾಟೆ

ರೈತ ಮಹಿಳೆಗೆ ಸಿಕ್ತು ಬೆಳೆ ವಿಮೆ ಪರಿಹಾರ!

Published:
Updated:
Prajavani

ಹಾವೇರಿ: ಮಳೆ ಅಭಾವದಿಂದ ಗೋವಿನಜೋಳ ಬೆಳೆ ಕಳೆದುಕೊಂಡ ಮಹಿಳೆಗೆ ವಿಮೆ ಪರಿಹಾರ ನೀಡಲು ಎರಡು ವರ್ಷಗಳಿಂದ ಸತಾಯಿಸುತ್ತಿದ್ದ ವಿಮಾ ಕಂಪನಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ಗ್ರಾಹಕ ನ್ಯಾಯಾಲಯ, ‘ತಿಂಗಳೊಳಗೆ ಆ ಮಹಿಳೆಗೆ ಹಣ ನೀಡಲೇಬೇಕು’ ಎಂದು ಖಡಕ್ ಆದೇಶ ಪ್ರಕಟಿಸಿತು.

ತಮಗೆ ಅನ್ಯಾಯ ಆಗಿರುವುದಾಗಿ ಬ್ಯಾಡಗಿ ತಾಲ್ಲೂಕು ಕಲ್ಲೇದೇವರು ಗ್ರಾಮದ ಬಸವ್ವ ಕೋರ್ಟ್ ಮೆಟ್ಟಿಲೇರಿದ್ದರು. ‘ಯುನಿವರ್ಸಲ್ ಶಾಂಪೋ ಜನರಲ್ ಇನ್ಶೂರೆನ್ಸ್’ ಕಂಪನಿ ವ್ಯವಸ್ಥಾಪಕ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕರನ್ನು (ಬ್ಯಾಡಗಿ) ಎದುರುದಾರರನ್ನು ಮಾಡಿದ್ದರು. ದೂರುದಾರರ ಪರವಾಗಿ ವಕೀಲ ಎಂ.ಕೆ.ಕೋಡಿಹಳ್ಳಿ ವಕಾಲತ್ತು ವಹಿಸಿದ್ದರು.

ಏನಿದು ಪ್ರಕರಣ: 2016ರಲ್ಲಿ ಬಸವ್ವ ಕಲ್ಲೇದೇವರು ಗ್ರಾಮದಲ್ಲಿರುವ ತಮ್ಮ 6 ಎಕರೆ 3 ಗುಂಟೆ ಜಮೀನಿನಲ್ಲಿ ಗೋವಿನಜೋಳ ಬೆಳೆದಿದ್ದರು. ಕೃಷಿ ಅಧಿಕಾರಿಯ ಸಲಹೆ ಮೇರೆಗೆ ಅವರು ಬೆಳೆ ವಿಮೆ ಮಾಡಿಸಿದ್ದರು. 2016ರ ಜುಲೈ 26ರಂದು ವಿಜಯಾ ಬ್ಯಾಂಕ್‌ನ ವಿಜಯಾ ಬ್ಯಾಂಕ್‌ ಶಾಖೆ ಮೂಲಕ ₹ 2.176 ಮೊತ್ತದ ಡಿ.ಡಿ ಮೂಲಕ ಕಂತನ್ನು ಪಾವತಿ ಸಹ ಮಾಡಿದ್ದರು.

ಹೀಗಿರುವಾಗ, ಮಳೆ ಅಭಾವ ಉಂಟಾಯಿತು. ಸಾಲ–ಸೋಲ ಮಾಡಿ ಹಾಕಿದ್ದ ಬೆಳೆಯೂ ಹಾಳಾಯಿತು. ಆ ಸಂದರ್ಭದಲ್ಲಿ ವಿಮಾ ಕಂಪನಿಯವರು ತಮ್ಮ ಬಳಿ ವಿಮೆ ಮಾಡಿಸಿದ್ದ ಎಲ್ಲ ರೈತರಿಗೂ ಪರಿಹಾರ ಒದಗಿಸಿದ್ದರು. ಆದರೆ, ತಾಂತ್ರಿಕ ಕಾರಣಗಳನ್ನು ನೀಡಿ ಬಸವ್ವ ಅವರ ಖಾತೆಗೆ ಹಣ ಜಮೆ ಮಾಡಿರಲಿಲ್ಲ. ಈ ಬಗ್ಗೆ ವಿಚಾರಿಸಲು ಕಚೇರಿ ಬಳಿ ಹೋದಾಗಲೆಲ್ಲ, ‘ಇನ್ನೊಂದು ತಿಂಗಳಲ್ಲಿ ಮಾಡುತ್ತೇವೆ’ ಎಂದು ಸಬೂಬು ಹೇಳಿ ಕಳುಹಿಸುತ್ತಿದ್ದರು. 

ಇದರಿಂದ ಬೇಸರಗೊಂಡ ಬಸವ್ವ, ವಕೀಲರ ನೆರವು ಪಡೆದು 2010ರ ಅ.16ರಂದು ಎದುರುದಾರರಿಗೆ ಕಾನೂನು ರೀತಿ ನೋಟಿಸ್ ಕಳುಹಿಸಿದ್ದರು. ಅದಕ್ಕೆ ಅವರು ಪ್ರತಿಕ್ರಿಯೆ ನೀಡದಿದ್ದಾಗ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ‘ಎಕರೆಗೆ ₹ 14,400ರಂತೆ 6 ಎಕರೆ 3 ಗುಂಟೆಗೆ ₹ 87.480 ವಿಮೆ ಪರಿಹಾರವನ್ನು ಹಾಗೂ ಅದಕ್ಕೆ ಶೇ 12ರಷ್ಟು ಬಡ್ಡಿಯನ್ನು ಕೊಡಿಸಬೇಕು’ ಎಂದು ಬಸವ್ವ ಮನವಿ ಮಾಡಿದ್ದರು.

ವಿಚಾರಣೆ ಕೈಗೆತ್ತಿಕೊಂಡ ಗ್ರಾಹಕರ ವೇದಿಕೆ ಅಧ್ಯಕ್ಷೆ ಸುನಂದ ದುರುಗೇಶ್ ಹಾಗೂ ಸದಸ್ಯರಾದ ಬಿ.ಎಸ್.ಮಹೇಶ್ವರಿ, ‘ಬಸವ್ವ ಅವರು ವಿಮೆ ಮಾಡಿಸಿದ್ದರು ಎಂಬುದಕ್ಕೆ ಹಾಗೂ ಕಂತು ಕಟ್ಟಿದ್ದರು ಎಂಬುದಕ್ಕೆ ದಾಖಲೆಗಳಿವೆ. ಹಾಗೆಯೇ, 2016–17ನೇ ಸಾಲಿನಲ್ಲಾದ ಮಳೆಯ ಪ‍್ರಮಾಣ ಹಾಗೂ ಜಮೀನು ಹಾನಿಯ ವಿವರಗಳನ್ನು ಕೃಷಿ ಅಧಿಕಾರಿಗಳು ಕೋರ್ಟ್‌ಗೆ ಕೊಟ್ಟಿದ್ದಾರೆ. ದೂರುದಾರರ ಬೆಳೆಯೂ ಹಾಳಾಗಿರುವುದು ಅದರಿಂದ ದೃಢವಾಗಿದೆ. ಕಂಪನಿಯವರ ಸೇವಾ ನ್ಯೂನತೆ ಇರುವುದೂ ಖಚಿತವಾಗಿದೆ’ ಎಂಬ ಅಭಿಪ್ರಾಯಕ್ಕೆ ಬಂದರು.

ತಿಂಗಳೊಳಗೆ ಪಾವತಿಸದಿದ್ದರೆ ಬಡ್ಡಿ

‘ಬಸವ್ವ ಅವರಿಗೆ ₹ 87,480 ವಿಮೆ ಮೊತ್ತ, ದಾವೆ ಹೂಡಿದ್ದರ ಶುಲ್ಕ ₹ 2 ಸಾವಿರ ಹಾಗೂ ಅವರು ಮಾನಸಿಕ ಯಾತನೆ ಅನುಭವಿಸಿದ್ದಕ್ಕೆ ₹ 2 ಸಾವಿರ ಪರಿಹಾರ ನೀಡಬೇಕು. ತಿಂಗಳೊಳಗೆ ಈ ಪರಿಹಾರ ಒದಗಿಸದಿದ್ದರೆ ಶೇ 12ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ’ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. 

ಪ್ರತಿಕ್ರಿಯಿಸಿ (+)