ಸೋಮವಾರ, ಆಗಸ್ಟ್ 26, 2019
28 °C
ನೆರೆ ಇಳಿದಾಯ್ತು, ಈಗ ನೆಲೆಯದ್ದೇ ಚಿಂತೆ; ನಡುಗಡ್ಡೆಯಾದ ಊರಿಗೆ ದಾರಿಯೂ ಇಲ್ಲ

ಜೀವ ಉಳಿದಿದೆ, ಬದುಕೇ ಹೋಗಿದೆ!

Published:
Updated:
Prajavani

ಹಾವೇರಿ:‌ ಮಳೆರಾಯನ ಅಬ್ಬರಕ್ಕೆ ಶರಣರ ನಾಡೂ ತತ್ತರಿಸಿದ್ದು, ಪ್ರವಾಹ ಕಡಿಮೆ ಆದಂತೆಲ್ಲ ಒಂದೊಂದೇ ಕುಟುಂಬದ ಕರುಣಾಜನಕ ಸ್ಥಿತಿ ಎದೆಗೆ ಅಪ್ಪಳಿಸುತ್ತಿದೆ. ‘ಹತ್ತು ದಿನಗಳ ಹಿಂದಿದ್ದ ಮನೆಗಳು ಈಗಿಲ್ಲ’ ಎಂಬ ನೋವು, ಕಣ್ಣೀರಿನ ರೂಪದಲ್ಲಿ ಮತ್ತೊಂದು ಪ್ರವಾಹವನ್ನೇ ಸೃಷ್ಟಿಸಿದೆ. ಇದೇ ಪರಿಸ್ಥಿತಿಯಲ್ಲಿರುವ ಜಿಲ್ಲೆಯ ಪುಟ್ಟ ಊರು ಕೆಸರಳ್ಳಿ, ಪರಿಹಾರ ಸಾಮಗ್ರಿಗಳ ಪೂರೈಕೆಗೂ ರಸ್ತೆ ಸಂಪರ್ಕವಿಲ್ಲದೆ ಅಕ್ಷರಶಃ ಕಂಗಾಲಾಗಿದೆ...

170 ಮನೆಗಳಿದ್ದ ಈ ಊರಿನಲ್ಲಿ ಜೀವಕ್ಕಷ್ಟೇ ಏನಾಗಿಲ್ಲ. ಆದರೆ, ಜೀವನಕ್ಕೇ ಬೇಕಾಗಿದ್ದ ಎಲ್ಲವೂ ಕೊಚ್ಚಿ ಹೋಗಿದೆ. ಕೃಷಿ, ಸಣ್ಣಪುಟ್ಟ ವ್ಯಾಪಾರ–ವಹಿವಾಟುಗಳೆಲ್ಲ ನೆಲ ಕಚ್ಚಿದ್ದು, ಬದುಕು ವಸ್ತುಶಃ ಬೀದಿಪಾಲಾಗಿದೆ. ಪರಿಹಾರ ಕೇಂದ್ರದಿಂದ ಮರಳಿ ಹೋಗಲು ಮನೆಯೇ ಇಲ್ಲದೆ, ಮನೆ ಇದ್ದರೂ ವಾಸಿಸಲಾಗದ ಸ್ಥಿತಿಯಲ್ಲಿ ಸಂತ್ರಸ್ತರು ಕಣ್ಣೀರ ಕೋಡಿ ಹರಿಸುತ್ತಿದ್ದಾರೆ.

‘ಬರದ ಊರಿನಲ್ಲಿ ಇಷ್ಟು ದಿನ ಜೀವನ ನಡೆಸಿದ್ದೇ ದೊಡ್ಡದು. ಈಗ ಮತ್ತೆ ಹೊಸ ಬದುಕು ಕಟ್ಟಿಕೊಳ್ಳುವುದೆಂದರೆ ದೂರದ ಮಾತು. ಅದ್ಯಾವ ಜನ್ಮದಲ್ಲಿ ಏನು ಕರ್ಮ ಮಾಡಿದ್ದೆವೋ? ಅನ್ನ–ನೀರು ಕೊಡುವುದಕ್ಕೆ ಬಂದುವರಿಗೂ ಗಂಗವ್ವ ದಾರಿ ಬಿಡದೆ, ನಮ್ಮನ್ನು ದಿಗ್ಬಂದನದಲ್ಲಿ ಇಟ್ಟಿದ್ದಾಳೆ’ ಎಂದು ಗ್ರಾಮಸ್ಥರು ದುಃಖ ತೋಡಿಕೊಳ್ಳುತ್ತಿದ್ದಾರೆ. ದಾವಣಗೆರೆ, ಚಿತ್ರದುರ್ಗ ಹಾಗೂ ಶಿಕಾರಿಪುರದಿಂದ ಮಂಗಳವಾರ ಬಂದ ಪರಿಹಾರ ಸಾಮಗ್ರಿಗಳನ್ನು ಬೈಕ್‌ಗಳ ಮೂಲಕ ಕೆಸರಳ್ಳಿಗೆ ಸಾಗಿಸಲಾಯಿತು.

ಕಟ್ಗೆ ಅಲ್ರಿ ನಾವು ಇಟ್ಗೆ: ‘ಒಂದ್ಸಲ ಬರ. ಒಂದ್ಸಲ ನೆರೆ.. ಹಿಂಗ ಸಮಸ್ಯೆ ಬಂದು ಬಂದು ನಾವೂ ಮಂಡ್ ಆಗೋಗಿವಿ. ‘ಕಟ್ಗೆ ಸುಟ್ರ ಬೂದಿ ಆಗ್ತದ. ಆದ್ರ, ಇಟ್ಗೆ ಸುಟ್ರ ಗಟ್ಟಿ ಆಗ್ತದಾ’ ಅಂತಾರಲ್ಲ ಹಂಗ ನಾವು. ಆ ದ್ಯಾವ್ರು ಎಷ್ಟೆಷ್ಟು ಕಷ್ಟ ಕೊಡ್ತಾನೋ ಕೊಡ್ಲಿ. ನಾವು ಇರೋವರ್ಗೂ ಅನುಭವ್ಸೋಕೆ ಸಿದ್ಧ ಅದೀವಿ’ ಎಂದು ಗುಡುಗಿದ 80 ವರ್ಷದ ಮಲ್ಲಪ್ಪ ಮಡಿವಾಳರ, ಮರುಕ್ಷಣವೇ ‘ಇದೆಲ್ಲ ಕಂಡ್ರ ಭಾಳ ನೋವಾಗ್ತದ್ರಿ’ ಎಂದು ವ್ಯಥೆಪಟ್ಟುಕೊಂಡರು.  

‘ನಮ್ಮದು ಗ್ರಾಮದಲ್ಲೇ ಅತಿ ದೊಡ್ಡ ಮನೆ. ಶತಮಾನದ ಹಿಂದೆ ಕಟ್ಟಿಸಿದ್ದು. ಐವರು ಅಣ್ಣ–ತಮ್ಮಂದಿರು ಹಾಗೂ ಅವರ ಪತ್ನಿ–ಮಕ್ಕಳು ಸೇರಿ 20 ಮಂದಿ ಒಟ್ಟಿಗೇ ವಾಸವಿದ್ದೇವೆ. ಹುಟ್ಟಿದ್ದು, ಆಡಿ–ಬೆಳೆದದ್ದು ಎಲ್ಲ ಇದೇ ಮನೆಯಲ್ಲಿ. ಹೀಗಾಗಿ, ಪ್ರತಿ ಜಾಗದಲ್ಲೂ ನೆನಪುಗಳಿವೆ. ಭಾವನಾತ್ಮಕ ಸಂಬಂಧವಿದೆ. ಆದರೀಗ ಮನೆಯ ಮುಂಭಾಗ ಬಿಟ್ಟು ಪೂರ್ತಿ ಬಿದ್ದು ಹೋಗಿದೆ. ಒಳಗೆ ಮೊಣಕಾಲುದ್ದ ಕೆಸರು ನಿಂತಿದೆ’ ಎನ್ನುತ್ತ ದುಃಖತಪ್ತರಾದರು ಕೆಸರಳ್ಳಿಯ ಬಸವಣ್ಣಯ್ಯ.

‘ಮನೆಯ ಸ್ಥಿತಿ ನೋಡಿ ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತವೆ. ನಾನೂ ನೋವು ನುಂಗಿಕೊಂಡು ಮಕ್ಕಳನ್ನು ಸಮಾಧಾನ ಮಾಡುತ್ತಿದ್ದೇನೆ. ಎಲ್ಲಿ ಮನೆ ಬಿಡುತ್ತದೋ? ಯಾವ ಸಮಯಕ್ಕೆ ಏನಾಗಿಬಿಡುತ್ತದೋ ಎಂಬ ಆತಂಕದಲ್ಲೇ ಸಮಯ ಕಳೆಯುತ್ತಿದ್ದೇವೆ. ರಾತ್ರಿವರೆಗೂ ರಸ್ತೆಯಲ್ಲಿ ಕೂತು ಮನೆಯನ್ನೇ ನೋಡುತ್ತ ಕೂರುತ್ತಿದ್ದೇವೆ’ ಎನ್ನುತ್ತ ತಮ್ಮ ನೋವು ಹೊರಹಾಕಿದರು.

ಪಕ್ಕದೂರಿಗೆ 25 ಕಿ.ಮೀ: ‘ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಬೇಕೆಂದರೆ 5 ಕಿ.ಮೀ ದೂರದ ಹೊಸರಿತ್ತಿ ಪಟ್ಟಣಕ್ಕೆ ಹೋಗುತ್ತಿದ್ದೆವು. ಈಗ ರಸ್ತೆ ಮುಳುಗಿರುವುದರಿಂದ ಯಲಗಚ್ಚಿ, ಹಳೇರಿತ್ತಿ ಸುತ್ತಿಕೊಂಡು ಪಟ್ಟಣಕ್ಕೆ ಹೋಗುತ್ತಿದ್ದೇವೆ. ಈ ಹಾದಿ 25 ಕಿ.ಮೀ ದೂರವಾಗುತ್ತದೆ’ ಎಂದು ಗ್ರಾಮಸ್ಥ ವೀರೇಶ್ ಹಿರೇಮಠ್ ಹೇಳಿದರು.  

ಮೆಣಸಿಗಾಗಿ ಹೊಳೆಯಲ್ಲೇ ಓಡಿದೆ..

ನಾಲ್ಕು ಎಕರೆಯಲ್ಲಿ ಮೆಣಸಿನ ಕಾಯಿ ಬೆಳೆದಿದ್ದೆ. 300 ಚೀಲದಷ್ಟು ಮೆಣಸು ಬೆಳೆದಿತ್ತು. ಆ.6ರಂದು ಬಂದಿದ್ದ ವ್ಯಾಪಾರಿಯೊಬ್ಬ, ‘ನಾಳೆ ಬಂದು ಮಾಲು ತಗೊಂಡು ಹೋಗ್ತೀನಿ’ ಎಂದಿದ್ದ. ಆದರೆ, ಅದೇ ದಿನ ರಾತ್ರಿ ವರದಾ ನೀರು ಹೊಲ–ಮನೆಗೆ ನುಗ್ಗಿತು. ಮೆಣಸು ಬೆಳೆಯ ನೆನಪಾಗಿ ರಾತ್ರಿಯೇ ಹೊಲದೊಳಗೆ ಓಡಿದ್ದೆ. ನಮ್ಮ ಸಂಬಂಧಿಕರು ಹಾಗೂ ಗ್ರಾಮಸ್ಥರು ನನ್ನನ್ನು ವಾಪಸ್ ಎಳೆದು ತಂದರು. ಈಗಲೂ ಬೆಳೆ ಏನಾಗಿದೆ ನೋಡಲು ಸಾಧ್ಯವಾಗಿಲ್ಲ.

ಬಸವಣ್ಣಯ್ಯ, ಕೆಸರಳ್ಳಿ

 

‘ದ್ಯಾವ್ರೂ ಆಗಲ್ರಿ, ನಾವೇ ನೋಡ್ಕೇಬೇಕು’

ಅವತ್ ರಾತ್ರಿ 12 ಗಂಟೆಗೆ ಹೊಳಿ ತುಂಬಿ ಬಂತು. ಒಂದ್ ಹರಿಬೀನೂ ತಗೊಳ್ದೆ ಮಕ್ಳು–ಮರೀನಾ ಅವಚ್ಕೊಂಡು ರಸ್ತೆಗೆ ಓಡಿದ್ವಿ. ಈಗ ನೋಡಿದ್ರ ಎಲ್ಲ ನಾಶ ಆಗೇತಿ. ಬಾಡಿಗೆ ಹುಡ್ಕೋಣ ಅಂದ್ರೂ ಒಂದ್ ಮನೆ ಉಳ್ದಿಲ್ರಿ. ಮುಂದಿನ್ ನಮ್ ಜೀವ್ನದ ಬಗ್ಗೆ ಯೋಚ್ನೆ ಮಾಡಿದ್ರ ಭಯ ಆಗ್ತತಿ. ಗುಡಿಯಾಗ ಕೂರೋ ದ್ಯಾವ್ರು, ತನ್ ದೀಪಾನೆ ತಾನ್ ಹಚ್ಕೋಳಲ್ಲಾ. ಇನ್ನು ನಮ್ ಬಾಳಿಗ್ ಕೊಡ್ತಾನೇನ್ರಿ. ಎಲ್ಲ ನಾವ ಮಾಡ್ಕೋಬೇಕು ಎಂದರು ನಿರಾಶ್ರಿತ ವೀರಬಸಯ್ಯ.

Post Comments (+)