ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಗೆ ಹಾರ ಹೊರಟಿದ್ದ ಅಂಗವಿಕಲ ಅಪ್ಪ–ಮಗ!

ಸಹಜ ಸ್ಥಿತಿಗೆ ಮರಳುತ್ತಿದೆ ಕುಣಿಮೆಳ್ಳಿ ಹಳ್ಳಿ * ಕಾಲಿಲ್ಲದ ರುದ್ರಪ್ಪನಿಗೆ ಬೇಕಿದ ಆಸರೆ
Last Updated 20 ಆಗಸ್ಟ್ 2019, 20:18 IST
ಅಕ್ಷರ ಗಾತ್ರ

ಹಾವೇರಿ: ಆ ಅಪ್ಪ–ಮಗ ಹುಟ್ಟು ಅಂಗವಿಕಲರು. ಕಾಲುಗಳು ಸ್ವಾಸ್ಥ್ಯ ಕಳೆದುಕೊಂಡಿದ್ದರೂ, ಹೇಗೋ ಬಡಗಿ ಕೆಲಸ ಮಾಡಿಕೊಂಡು ಬದುಕಿನ ಬಂಡಿ ಎಳೆಯುತ್ತಿದ್ದರು. ಆದರೆ, ಆಶ್ರಯಕ್ಕಿದ್ದ ಪುಟ್ಟ ಮನೆಯೂ ನೆರೆಯಿಂದ ಕುಸಿದಾಗ ಬದುಕುವ ಆಸೆಯನ್ನೇ ಕಳೆದುಕೊಂಡ ಅವರು, ತಮ್ಮನ್ನೂ ನೀರಿಗೆ ಅರ್ಪಿಸಿಕೊಳ್ಳಲು ಕುಂಟುತ್ತಲೇ ಹೊಳೆಯ ಹತ್ತಿರಕ್ಕೆ ಓಡಿದ್ದರು. ಬೆನ್ನಟ್ಟಿ ಹೋಗಿ ಆ ತಂದೆ–ಮಗನನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಗ್ರಾಮಸ್ಥರು, ಈಗಲೂ ಅವರನ್ನು ಕಾಯುವ ಕಾಯಕದಲ್ಲೇ ನಿರತರಾಗಿದ್ದಾರೆ!

ಈ ಮನಕಲಕುವ ಘಟನೆ ನಡೆದಿರುವುದು ಕುಣಿಮೆಳ್ಳಿ ಹಳ್ಳಿಯಲ್ಲಿ. ಆಗಸ್ಟ್ 7ರಿಂದಲೂ ಪರಿಹಾರ ಕೇಂದ್ರದಲ್ಲಿದ್ದ ರುದ್ರಪ್ಪ ಬಸಪ್ಪ ಬಡಿಗೇರ ಹಾಗೂ ಅವರ ಮಗ ರಾಘವೇಂದ್ರ, ನೆರೆ ಇಳಿದಿದ್ದರಿಂದ ಶುಕ್ರವಾರ (ಆ.16) ರಾತ್ರಿ ತಮ್ಮ ಮನೆ ಬಳಿ ಮರಳಿದ್ದರು. ಆದರೆ, ತಮ್ಮ ಸಾಲಿನಲ್ಲಿದ್ದ ಎಲ್ಲ ಮನೆಗಳ ಜತೆಗೆ ತಮ್ಮ ಪುಟ್ಟ ಗೂಡೂ ನೆಲಕ್ಕುರುಳಿದ್ದನ್ನು ಕಂಡು ರುದ್ರಪ್ಪ ಅಲ್ಲೇ ಕುಸಿದು ಬಿದ್ದರು.

‘ಆ ರಾತ್ರಿಎಲ್ಲರೂ ಮನೆ ಕಳೆದುಕೊಂಡು ನೋವಿನಲ್ಲಿ ಕುಳಿತಿದ್ದರು. ಇದರ ನಡುವೆಯೇ ರುದ್ರಪ್ಪ ಮಗನನ್ನು ಕರೆದುಕೊಂಡು ಹೊಳೆಯ ಹತ್ತಿರಕ್ಕೆ ಹೋಗಿದ್ದ. ಕೂಡಲೇ ಓಡಿ ಹೋಗಿ ಅವರನ್ನು ಉಳಿಸಿಕೊಂಡೆವು. ಏನಾದರೂ ಅನಾಹುತ ಮಾಡಿಕೊಳ್ಳಬಹುದು ಎಂಬ ಭಯದಲ್ಲಿ ಈಗಲೂ ಆತನ ಜತೆಗೇ ಇರುತ್ತಿದ್ದೇವೆ.ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಸರಿ ಇರುವ ನಾವು ಬದುಕುವುದೇ ಕಷ್ಟ. ಇನ್ನು ಕಾಲುಗಳಿಲ್ಲದ ಇವರ ಭವಿಷ್ಯ ನೆನೆಸಿಕೊಂಡರೆ ಬೇಸರವಾಗುತ್ತದೆ’ ಎಂದು ಗ್ರಾಮಸ್ಥರು ಕನಿಕರ ವ್ಯಕ್ತಪಡಿಸಿದರು.

‘ನಾವು ಹುಟ್ಟಿ–ಬೆಳೆದಿದ್ದೆಲ್ಲ ಇಲ್ಲೇ. ಪತ್ನಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಊರಿಗೆ ಕಳುಹಿಸಿದ್ದೇನೆ. ಕೆಲಸ ಕಲಿತಾಗಿನಿಂದಲೂ ಗ್ರಾಮದ ಎಲ್ಲ ರೈತರಿಗೂ ನಾನೇ ಕುಂಟೆ, ಕೂರಿಗೆ, ನೇಗಿಲು ಮಾಡಿಕೊಡುತ್ತ ಬಂದಿದ್ದೇನೆ. ಹಣಕ್ಕೆ ಬದಲಾಗಿ ಬೆಳೆದಂತ ಬೆಳೆಯಲ್ಲಿ ನನಗೂ ಸ್ವಲ್ಪ ಪಾಲು (ಆಯಾ) ಕೊಡುತ್ತಾರೆ. ಅದರಲ್ಲೇ ತುತ್ತಿನ ಚೀಲ ತುಂಬಿಕೊಳ್ಳುತ್ತೇನೆ. ಈಗ ಅವರ ಬೆಳೆಯೂ ನಾಶವಾಗಿದೆ. ಕಳೆದುಕೊಂಡವರ ಬಳಿ ನಾನು ಏನನ್ನು ಬೇಡಲಿ’ ಎನ್ನುತ್ತಲೇ ಕಣ್ಣೀರು ಸುರಿಸಿದರು ರುದ್ರಪ್ಪ.

‘ಸರ್ಕಾರ ಮನೆ ಕಟ್ಟಿಸಿಕೊಡುವ ಭರವಸೆಯನ್ನೇನೋ ಕೊಟ್ಟಿದೆ. ಆದರೆ, ಅಲ್ಲಿಯವರೆಗೆ ನಾವು ಎಲ್ಲಿರುವುದು ಎಂಬುದೇ ತಿಳಿಯುತ್ತಿಲ್ಲ. ನನ್ನ ವೃತ್ತಿಗೆ ಸಂಬಂಧಿಸಿದ ಎಲ್ಲ ಸಾಮಾನುಗಳೂ ಅವಶೇಷಗಳಲ್ಲಿ ಮುಚ್ಚಿ ಹೋಗಿವೆ. ಇಷ್ಟು ದಿನ ಜೀವನಕ್ಕಾಗಿ ಹೋರಾಡಿದ್ದೇನೆ. ಈಗ ಬದುಕುವ ಆಸೆಯೂ ಇಲ್ಲ. ಸಾಯಲು ಗ್ರಾಮಸ್ಥರು ಬಿಡಲಿಲ್ಲ’ ಎಂದು ನೋವು ತೋಡಿಕೊಂಡರು.

ಇನ್ನು 18 ವರ್ಷದ ರಾಘವೇಂದ್ರ, ‘ನಂಗೆ ಅಪ್ಪನ್ನ ಬಿಟ್ರೆ ಯಾರೂ ಇಲ್ಲ. ಅವರು ಹೆಂಗೆ ಹೇಳ್ತಾರೋ ಹಂಗೆ ಕೇಳ್ತೀನಿ. ‘ಸಾಯೋಣ ಬಾ’ ಅಂತ ಕರೆದಾಗ್ಲೂ ಹಿಂದೆ–ಮುಂದೆ ಯೋಚ್ನೆ ಮಾಡ್ದೆ ಹೊಳಿ ಹತ್ರ ಹೋಗಿದ್ದೆ’ ಎಂದು ಹತಾಶರಾಗಿ ಹೇಳಿದರು.

ಸಹಜ ಸ್ಥಿತಿಯತ್ತ ಗ್ರಾಮ: ಕುಣಿಮೆಳ್ಳಿ ಹಳ್ಳಿಯ ಬಹುತೇಕ ಭಾಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮನೆಯಲ್ಲಿ ತುಂಬಿಕೊಂಡಿದ್ದ ಕೆಸರನ್ನೆಲ್ಲ ಹೊರಗೆ ಚೆಲ್ಲಿ ಜನ ಸುಣ್ಣ–ಬಣ್ಣ ಬಳಿದು ಹೊಸ ಬದುಕು ಪ್ರಾರಂಭಿಸಿದ್ದಾರೆ. ಬಣವೆ, ಕಟ್ಟಿಗೆಗಳನ್ನು ರಸ್ತೆಯಲ್ಲೇ ಹಾಕಿ ಒಣಗಿಸುವ ಕೆಲಸವೂ ನಡೆದಿದೆ. ಜಾನುವಾರುಗಳಿಗೆ ಹಸಿಹುಲ್ಲನ್ನೇ ಕೊಯ್ದು ಹಾಕುತ್ತಿದ್ದಾರೆ.

ಹಬ್ಬಕ್ಕೂ ಮೊದಲೇ ಮುಳುಗಿದ ಗಣಪ!

ಗ್ರಾಮದ ಪ್ರಸನ್ನ ಕುಮಾರ್ ಅವರು ಗಣೇಶ ಹಬ್ಬದ ಪ್ರಯುಕ್ತ ಹತ್ತಾರು ಹಳ್ಳಿಗಳ ಯುವಕರಿಂದ ಆರ್ಡರ್ ಪಡೆದು 600ಕ್ಕೂ ಹೆಚ್ಚು ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸಿದ್ದರು. ಆದರೆ, ಪ್ರವಾಹದಿಂದಾಗಿ ಹಬ್ಬಕ್ಕೂ ಮೊದಲೇ ಆ ಮೂರ್ತಿಗಳು ಮುಳುಗಿದವು. ಈಗ ಅದೇ ಮಣ್ಣನ್ನು ಪೂರ್ತಿ ಕಲಸಿಮತ್ತೆ ಮನೆ ಮುಂದೆ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಪ್ರವಾಹವು ಪ್ರಸನ್ನ ಅವರ ಮೂರು ತಿಂಗಳ ಶ್ರಮ ಹಾಗೂ ಲಕ್ಷಾಂತರ ರೂಪಾಯಿ ಬಂಡವಾಳ ನಾಶ ಮಾಡಿದೆ.

ತಂಡ ಬರ್ತಾವೆ, ಹೋಗ್ತಾವೆ...

‘2–3 ದಿನಕ್ಕೊಮ್ಮೆ ಅಧಿಕಾರಿಗಳು ಬಂದು ಸಮೀಕ್ಷೆ ನಡೆಸುತ್ತಾರೆ. ಈ ಸಾಲಿನಲ್ಲಿ 15 ಮನೆಗಳು ಬಿದ್ದಿರುವುದಾಗಿ ಹೇಳಿದರೆ, ‘ಇಷ್ಟು ಸಣ್ಣ ಜಾಗವಿದೆ. ಅಷ್ಟೊಂದು ಮನೆಗಳಿದ್ದವಾ?’ ಎಂದು ನಮ್ಮನ್ನೇ ಅನುಮಾನದಿಂದ ನೋಡುತ್ತಾರೆ. ಪರಿಹಾರದ ವಿಷಯ ಕೇಳಿದರೆ, ಇನ್ನೂ ಎರಡು ತಂಡಗಳು ಬಂದು ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿ ಹೋಗುತ್ತಾರೆ. ಬಂದವರಿಗೆಲ್ಲ ಮಾಹಿತಿ ಕೊಟ್ಟು ಕೊಟ್ಟು ನಮಗೂ ಸಾಕಾಗಿ ಹೋಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು ಗ್ರಾಮದ ಗುರುಬಸಪ್ಪ ಚನ್ನಬಸಪ್ಪ ಅಣ್ಣಿಗೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT