ಶುಕ್ರವಾರ, ಅಕ್ಟೋಬರ್ 18, 2019
23 °C
ನೆರೆ ಸಂತ್ರಸ್ತರ ಸ್ಥಿತಿ ಇನ್ನೂ ಗಂಭೀರ * ಪರಿಹಾರ ಹಂಚಿಕೆಯಲ್ಲೂ ರಾಜಕೀಯ

ಸಿಗಲಿಲ್ಲ ಪರಿಹಾರ; ಜಗುಲಿಯಲ್ಲೇ ಸಂಸಾರ!

Published:
Updated:
Prajavani

ಹಾವೇರಿ: ಯಾರದ್ದೋ ಮನೆಗಳ ಜಗುಲಿ ಮೇಲೆ ದಿನ ದೂಡುತ್ತಿರುವ ಕುಟುಂಬಗಳು. ಖಾಲಿ ಜಾಗಗಳಲ್ಲಿ ಚಪ್ಪರ ಹಾಕಿಕೊಂಡು ನೆಲೆಸಿರುವ ಸಂತ್ರಸ್ತರು. ಪರಿಹಾರ ಹಂಚಿಕೆಯಲ್ಲೂ ಮಧ್ಯಪ್ರವೇಶಿಸಿದ ರಾಜಕೀಯ. ಕೆಸರಳ್ಳಿಯಲ್ಲಿ ಒಂದೇ ಕುಟುಂಬ ಆರೇಳು ಮಂದಿ ಅಣ್ಣ–ತಮ್ಮಂದಿರಿಗೆ ಪರಿಹಾರ. ಬಿಡಿಗಾಸಿನ ನೆರವೂ ಸಿಗದೆ ನರಳುತ್ತಿರುವ ಅಸಲಿ ಸಂತ್ರಸ್ತರು...

ನೆರೆ ಇಳಿದ ಮೇಲೆ ಹಾವೇರಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಕಂಡುಬಂದ ಸನ್ನಿವೇಶಗಳಿವು. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ₹10 ಸಾವಿರ ಹಾಗೂ ಬಾಡಿಗೆ ಮನೆಯಲ್ಲಿ ಇರಲು ಬಯಸಿದವರೆಗೆ ₹5 ಸಾವಿರ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಬ್ಯಾಂಕ್ ಖಾತೆಯೇ ಇಲ್ಲದವರಿಗೆ ಹೇಗೆ ಪರಿಹಾರ ತಲುಪಿಸಿದಿರಿ? ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

‘ನಮ್ಮ ಖಾತೆಗೆ ಹಣ ಬಂದಿಲ್ಲ. ಯಾರಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ. ಗ್ರಾಮಲೆಕ್ಕಿಗರನ್ನು ಕೇಳಿದರೆ ತಹಶೀಲ್ದಾರ್‌ ಕಡೆ ಬೊಟ್ಟು ಮಾಡುತ್ತಾರೆ. ಅವರಿಗೆ ವಿಚಾರಿಸಿದರೆ ಜಿಲ್ಲಾಧಿಕಾರಿ ಬಳಿ ಹೋಗಿ ಎನ್ನುತ್ತಾರೆ. ಹೀಗೆ, ಎಲ್ಲರೂ ಮೈಗೆ ಎಣ್ಣೆ ಹಚ್ಚಿಕೊಂಡೇ ಓಡಾಡುತ್ತಿದ್ದಾರೆ. ಮುಖ್ಯಮಂತ್ರಿ ಊರಿಗೆ ಬಂದು ಹೋದ ನಂತರ (ಆ.31) ಯಾರೊಬ್ಬರೂ ಇಲ್ಲಿಗೆ ಬಂದಿಲ್ಲ’ ಎಂದು ನಾಗನೂರಿನ ಸಂತ್ರಸ್ತರು ದೂರುತ್ತಾರೆ.

ಖಾತೆಯೇ ಇಲ್ಲ, ಪರಿಹಾರ ಹೇಗೆ?
ನೆರೆಯಲ್ಲಿ ಮನೆ ಕಳೆದುಕೊಂಡ ನಾಗೇಶ ಬುಡಣ್ಣನವರ ಅವರು ಪತ್ನಿ, ಐವರು ಮಕ್ಕಳು ಹಾಗೂ ತಾಯಿಯ ಜತೆ ಮಾಲತೇಶ್ ಕುಂಬಾರ್ ಎಂಬುವರ ಮನೆಯ ಕಟ್ಟೆಯ ಮೇಲೆ ಜೀವನ ನಡೆಸುತ್ತಿದ್ದಾರೆ. ಅಡುಗೆ, ಊಟ, ಮಕ್ಕಳ ಓದು– ಬರಹ ಎಲ್ಲವೂ ಅಲ್ಲೇ ನಡೆಯುತ್ತಿದೆ.

‘ಹೆಣ್ಣು ಮಕ್ಕಳು, ಪತ್ನಿ, ತಾಯಿ– ಪಾಳು ಬಿದ್ದ ಮನೆಯೊಂದರಲ್ಲಿ ಮಲಗುತ್ತಾರೆ. ನಾನು ಗಂಡು ಮಕ್ಕಳೊಂದಿಗೆ ಜಗುಲಿ ಮೇಲೇ ನಿದ್ರಿಸುತ್ತೇನೆ. ಸರ್ಕಾರ ಬಿಡಿಗಾಸಿನ ಪರಿಹಾರ ಕೊಟ್ಟಿದ್ದರೂ ದಾಖಲೆ ತೋರಿಸಲಿ. ನನಗೆ ಬ್ಯಾಂಕ್ ಖಾತೆಯೇ ಇಲ್ಲ. ಇವರು ಯಾರ ಖಾತೆಗೆ ಪರಿಹಾರ ಹಾಕಿದರು’ ಎಂದು ಬುಡ್ಡಣ್ಣನವರ ಆಕ್ರೋಶದಿಂದಲೇ ಪ್ರಶ್ನಿಸಿದರು.

ಇನ್ನು ಕೆಸರಳ್ಳಿ ಗ್ರಾಮದಲ್ಲೂ ಇದೇ ಕತೆ. ‘ರಾಜಕಾರಣಿಗಳ, ಪಂಚಾಯ್ತಿ ಸದಸ್ಯರ ಆಪ್ತರ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಹಂಚಿಕೆಯಲ್ಲಿ ಆದ್ಯತೆ ನೀಡಲಾಗಿದೆ. ಒಂದೇ ಮನೆ ಬಿದ್ದಿದ್ದರೂ ಆ ಕುಟುಂಬದ ಪ್ರತಿ ಸದಸ್ಯರೂ ಪರಿಹಾರ ಪಡೆದುಕೊಂಡಿದ್ದಾರೆ. ಅಸಲಿ ಸಂತ್ರಸ್ತರು ಮಾತ್ರ ಪ್ರತಿದಿನ ಬ್ಯಾಂಕ್‌ಗೆ ಹೋಗಿ, ಹಣ ಜಮೆ ಆಗಿದೆಯೇ ಎಂದು ನೋಡಿಕೊಂಡು ಬರುತ್ತಿದ್ದಾರೆ’ ಎಂದು ಪರಿಸ್ಥಿತಿ ಬಿಚ್ಚಿಟ್ಟರು ಗ್ರಾಮಸ್ಥರು.

‘ಮನೆ ಬಾಡಿಗೆ ಹಣ ನೀಡುವುದಾಗಿ ಹೇಳಿ ಸಂತ್ರಸ್ತರನ್ನು ಪರಿಹಾರ ಕೇಂದ್ರಗಳಿಂದ ಖಾಲಿ ಮಾಡಿಸಿದರು. ಈಗ ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ. ನನ್ನ ಹಾಗೂ ಚಿಕ್ಕಪ್ಪನ ಎರಡು ಮನೆಗಳು ನೆಲಸಮ ಆಗಿವೆ. ಈಗ ಒಂದೇ ಮನೆ ಬಾಡಿಗೆ ಪಡೆದು ಮೂರು ಕುಟುಂಬಗಳು ನೆಲೆಸಿದ್ದೇವೆ. ಇಲ್ಲಿ ಅನ್ಯಾಯ ಆದವರಿಗೆ ಏನೂ ಇಲ್ಲ. ನಷ್ಟ ಆಗದಿದ್ದವರಿಗೆ ಎಲ್ಲ ಸಿಗ್ತಿದೆ’ ಎಂದು ಗ್ರಾಮದ ಚೇತನ್ ಹಿರೇಮಠ ನೋವು ತೋಡಿಕೊಂಡರು.

‘ಪರಿಹಾರದ ಜವಾಬ್ದಾರಿ ನನ್ನದು’
‘ಎಲ್ಲ ಸಂತ್ರಸ್ತರಿಗೂ ಪರಿಹಾರ ನೀಡಲಾಗಿದೆ ಎಂದು ತಹಶೀಲ್ದಾರ್‌ಗಳು ಹೇಳಿದ್ದರು. ಅವರು ಹೇಳಿದ್ದೇ ನಿಜ ಎಂದು ಹೇಳಲಾಗುವುದಿಲ್ಲ. ಖಾತೆಯೇ ಇಲ್ಲದ ಸಂತ್ರಸ್ತರಿಗೆ ಹೇಗೆ ಪರಿಹಾರ ತಲುಪಿಸಿದರು ಎಂಬ ಬಗ್ಗೆ ಅವರಿಂದ ವಿವರಣೆ ಪಡೆಯುತ್ತೇನೆ. ಪರಿಹಾರ ವಂಚಿತ ಸಂತ್ರಸ್ತರ ಮಾಹಿತಿ ತರಿಸಿಕೊಂಡು, ಅವರಿಗೆ ಹಣ ತಲುಪಿಸುವ ಹೊಣೆ ನನ್ನದು’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)