ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಪರಿಹಾರ ಅನ್ಯಾಯ ಗ್ರಾಮಸ್ಥರ ಪ್ರತಿಭಟನೆ

Last Updated 28 ಡಿಸೆಂಬರ್ 2019, 10:53 IST
ಅಕ್ಷರ ಗಾತ್ರ

ಹಾವೇರಿ: ‘ಆಗಸ್ಟ್‌ ಹಾಗೂ ಅಕ್ಟೋಬರ್‌ನಲ್ಲಿ ಉಂಟಾದ ನೆರೆಯಲ್ಲಿ ಕುಸಿದ ಮನೆಗಳ ಪರಿಹಾರ ವಿತರಣೆಯಲ್ಲಿ ಅನ್ಯಾಯ ಆಗುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ದೇವಗಿರಿ ಯಲ್ಲಾಪೂರ ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ರೈತ ಮುಖಂಡ ರಾಜೇಸಾಬ್‌ ತರ್ಲಘಟ್ಟ ಮಾತನಾಡಿ, ಅತಿವೃಷ್ಟಿಯಿಂದಾಗಿ ಗ್ರಾಮದಲ್ಲಿ ಸುಮಾರು 300ಕ್ಕೂ ಅಧಿಕ ಮನೆಗಳು ಬಿದ್ದಿವೆ. ಇದರಲ್ಲಿ ಬಿ, ಕೆಟಗರಿಯ 231 ಹಾಗೂ ಸಿ, ಕೆಟಗರಿಯ 69 ಮನೆಗಳು ಕುಸಿದಿವೆ ಎಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿತ್ತು. ಈ ವರದಿಯಂತೆ ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸುವಂತೆ ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ತಿಳಿಸಿದರೂಪ್ರಕಟಿಸಿರಲಿಲ್ಲ ಎಂದರು.

ಸಂತ್ರಸ್ತರು ಪತ್ತೆ ಹಚ್ಚಿದ ಪಟ್ಟಿಯಲ್ಲಿ ಅನರ್ಹ ಫಲಾನುಭವಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಕುರಿತು ಗ್ರಾಮ ಪಂಚಾಯ್ತಿ ಕಾರ್ಯಾಲಯದ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ತಹಶೀಲ್ದಾರ್‌ ಭೇಟಿ ನೀಡಿ ಎರಡು ದಿನದಲ್ಲಿ ಸಮಸ್ಯೆ ಬಗೆ ಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೂ,ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ದೇವಗಿರಿ ಗ್ರಾಮ ಪಂಚಾಯ್ತಿ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಚೇರಿ ಸಿಬ್ಬಂದಿ ನೆರೆ ಪರಿಹಾರವನ್ನು ಹಣವಂತರಿಗೆ ನೀಡಿದ್ದಾರೆ. ಅವರ ಹೆಸರಿನಲ್ಲಿ ಪಕ್ಕಾ ಮನೆಗಳಿದ್ದರೂ ಬಡವರ ಪರಿಹಾರದ ಹಣವನ್ನು ಉಳ್ಳವರಿಗೆ ನೀಡುತ್ತಿದ್ದಾರೆ. ಒಂದು ಮನೆ ಮಂಜೂರು ಮಾಡಿಕೊಡುವುದಕ್ಕೆ ₹1 ಲಕ್ಷ ಹಣವನ್ನು ಕೇಳುತ್ತಾರೆ ಎಂದು ಆರೋಪಿಸಿದರು.

ಸಂತ್ರಸ್ತರು ನೆರೆ ಪರಿಹಾರದ ಕುರಿತು ಪಂಚಾಯ್ತಿ ಕಾರ್ಯಾಲಯದಲ್ಲಿ ಕೇಳಿದರೆ ಸರಿಯಾದ ಮಾಹಿತಿ ನೀಡುವುದಿಲ್ಲ. ದಾಖಲಾತಿಯಲ್ಲಿ ಸಮಸ್ಯೆ ಇದೆ ಇದನ್ನು ಸರಿಪಡಿಸಿಕೊಂಡು ಬನ್ನಿ ಎಂಬ ಅಸಡ್ಡೆಯ ಉತ್ತರಗಳನ್ನು ನೀಡುತ್ತಾರೆ. ವಾಸ್ತವ್ಯ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲಾತಿ ಕೇಳಲು ಹೋದರೂ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂದು ಆರೋಪಿಸಿದರು.

ಇಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ನಿಜವಾದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೋರಟ ನಡೆಸುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದರು.

ಗ್ರಾಮಸ್ಥರಾದ ಪ್ರಕಾಶ ಕಲ್ಲೇದೇವರ, ಗಂಗವ್ವ, ಬೀರಪ್ಪ, ಫಕ್ಕೀರೇಶ, ಈಶ್ವರ ಪಾಟೀಲ, ಶಂಕ್ರಪ್ಪ, ಎ.ವೈ. ಪೂಜಾರ, ನಿಂಗಪ್ಪ ಪೂಜಾರ, ಎನ್.ವಿ. ಬಡಿಗೇರ, ರಾಮಣ್ಣ ಬಸಾಪೂರ, ಅಬ್ದುಲ್‍ಖಾದರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT