ಬುಧವಾರ, ಆಗಸ್ಟ್ 21, 2019
28 °C
ಆತಂಕದಲ್ಲಿ ತರಗತಿಗೆ ಬಾರದ ಮಕ್ಕಳು, ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ

ಮತ್ತೆ ಕಾರ್ಮೋಡ; ತುಂತುರು ಹನಿಗೂ ಭೀತಿ

Published:
Updated:
Prajavani

ಹಾವೇರಿ: ಕಳೆದ 12 ದಿನಗಳಿಂದ ಸತತವಾಗಿ ಅಬ್ಬರಿಸಿ ಸ್ವಲ್ಪ ಬಿಡುವು ನೀಡಿದ್ದ ಮಳೆರಾಯ ಜಿಲ್ಲೆಯ ವಿವಿಧೆಡೆ ಮಂಗಳವಾರ ಮತ್ತೆ ಧರೆಗೆ ಇಳಿದನು. ಮಳೆ ಪ್ರಮಾಣ ಕಡಿಮೆ ಇತ್ತಾದರೂ, ಇಡೀ ದಿನ ಕವಿದಿದ್ದ ಮೋಡವು ಜನರನ್ನು ಆತಂಕಕ್ಕೆ ದೂಡಿತ್ತು.

ಸೋಮವಾರ ರಾತ್ರಿಯಿಂದಲೂ ಜಿಟಿ ಜಿಟಿ ಮಳೆಯಾಗುತ್ತಿದ್ದ ಕಾರಣ, ಈಗಾಗಲೇ ನೆರೆಯ ಹೊಡೆತಕ್ಕೆ ಸಿಲುಕಿದ್ದ ಗ್ರಾಮಗಳು ಕಂಗಾಲಾಗಿದ್ದವು. ಮಂಗಳವಾರ ಮಧ್ಯಾಹ್ನ ಹಾವೇರಿ, ಹಾನಗಲ್ ಹಾಗೂ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಕೆಲ ಹೊತ್ತು ಮಳೆಯ ಅಬ್ಬರ ಜೋರಾಗಿತ್ತು.

‘ಆ.1ರಿಂದ ಆ.12ರವರೆಗೆ ಜಿಲ್ಲೆಯಲ್ಲಿ 250 ಸೆ.ಮೀ ಮಳೆಯಾಗಿದ್ದು, ಸೋಮವಾರ ರಾತ್ರಿ 3 ಸೆ.ಮೀ ಸುರಿದಿದೆ. ಮಳೆ ಪ್ರಮಾಣ ಸದ್ಯಕ್ಕೆ ಕಡಿಮೆ ಆಗಿದೆಯಾದರೂ, ಇನ್ನೂ ಎರಡು ದಿನ ಇದೇ ವಾತಾವರಣ ಇರಲಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

‘ಪ್ರವಾಹದಲ್ಲಿ ಈಜಿ ಸಾಕಾಗಿ, ಈಗಷ್ಟೇ ಬದುಕು ಕಟ್ಟಿಕೊಳ್ಳಲು ಹೆಜ್ಜೆ ಇಟ್ಟಿದ್ದೇವೆ. ಆದರೆ, ಮತ್ತೆ ಮಳೆ ಸುರಿಯುವುದನ್ನು ನೋಡಿದರೆ ಭಯವಾಗುತ್ತಿದೆ. ಈ ಸಲ ಮನೆ ಸ್ವಚ್ಛ ಮಾಡಿ ನಾವು ಮನೆ ಸೇರಿದರೆ, ಎಂತಹ ಪ್ರವಾಹ ಬಂದರೂ ಮನೆ ಬಿಟ್ಟು ಬರುವುದಿಲ್ಲ. ಮತ್ತೆ ಆ ಪರಿಸ್ಥಿತಿ ಎದುರಿಸಲು ನಮಗೆ ಶಕ್ತಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು ನಾಗನೂರಿನ ಮಹದೇವಪ್ಪ.

ಶಾಲೆಗಳು ಭಣ ಭಣ: ಜಿಲ್ಲೆಯಲ್ಲಿ ಶಾಲೆಗಳು ಮಂಗಳವಾರದಿಂದ ಪುನರಾರಂಭವಾಗಿದ್ದು, ಪ್ರವಾಹದ ಆತಂಕದಿಂದಾಗಿ ಬಹುತೇಕ ಗ್ರಾಮಗಳಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲಿಲ್ಲ. 

‘ಹಾವನೂರಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಹಾಜರಿದ್ದರು. ಉಳಿದ ಕಡೆಗಳಲ್ಲಿ ಅಷ್ಟಾಗಿ ಮಕ್ಕಳು ಇರಲಿಲ್ಲ. ಆ.15ರಂದು ಪ್ರತಿ ಶಾಲೆಯಲ್ಲೂ ಎಲ್ಲ ಮಕ್ಕಳ ಸಮ್ಮುಖದಲ್ಲೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕೆಂಬ ಉದ್ದೇಶ ಹೊಂದಿದ್ದೇವೆ. ಅದಕ್ಕೆ ಸಿದ್ಧತೆಯೂ ನಡೆಯುತ್ತಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.  

ಸಮೀಕ್ಷೆಗೆ ತಂಡ ರಚನೆ: ‘ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ತಂಡವು ಮಳೆಹಾನಿ ಕುರಿತು ಸಮೀಕ್ಷೆ ನಡೆಸಲಿದೆ. ಹಾಗೆಯೇ ಬೆಳೆಹಾನಿ ಸಂಬಂಧ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಸಹಾಯಕ ನಿರ್ದೇಶಕರು ಸಮೀಕ್ಷೆ ನಡೆಸಲಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ತಿಳಿಸಿದರು.  

ವ್ಯಾಪಕ ಸ್ಪಂದನೆ: ಜಿಲ್ಲಾಡಳಿತ ಮನವಿಗೆ ಸ್ಪಂದಿಸಿದ ಜನ ಅಕ್ಕಿ, ಬೇಳೆ, ಜೋಳ, ಬಟ್ಟೆ, ಹೊದಿಕೆ, ಅಡುಗೆ ಸಾಮಗ್ರಿಗಳನ್ನು ಸಂತ್ರಸ್ಥರಿಗೆ ನೆರವಿಗಾಗಿ ನೀಡುತ್ತಿದ್ದಾರೆ. ಮಂಗಳವಾರ ಸರಕು ಸಾಗಣೆ ವಾಹನದಲ್ಲಿ ಬಂದ ಸಾಮಗ್ರಿಗಳನ್ನು ಶಾಸಕ ನೆಹರು ಓಲೇಕಾರ ಹಾಗೂ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸ್ವೀಕರಿಸಿದರು.

 

835 ಶೆಡ್‌ಗಳ ನಿರ್ಮಾಣಕ್ಕೆ ಸಿದ್ಧತೆ

‍‍ಪ್ರವಾಹದ ಸಂದರ್ಭದಲ್ಲಿ ಪರಿಹಾರ ಕೇಂದ್ರಗಳಿಗಾಗಿ 127 ಶಾಲಾ ಕೊಠಡಿಗಳನ್ನು ಬಳಸಿಕೊಳ್ಳಲಾಗಿತ್ತು. ಈಗ ಅವುಗಳ ಸಂಖ್ಯೆ ಕಡಿಮೆ ಆಗಿದೆ. ಮಕ್ಕಳ ಕಲಿಕೆಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಜಿಲ್ಲಾಡಳಿತವು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಸಂತ್ರಸ್ತರನ್ನು ಅಲ್ಲಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಸುತ್ತಿದೆ. 

‘ಪ್ರವಾಹ ಕಡಿಮೆ ಆಗಿದ್ದರೂ ಜನ ತಕ್ಷಣ ಮನೆಗಳಿಗೆ ತೆರಳಲು ಸಾಧ್ಯವಿಲ್ಲ. ಹೀಗಾಗಿ, ಶೆಡ್ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದೆ. ಎತ್ತರ ಪ್ರದೇಶದಲ್ಲಿ ಸರ್ಕಾರಿ ಜಮೀನು ಸಿಗದಿದ್ದರೆ, ಖಾಸಗಿ ಜಾಗಗಳನ್ನೇ ಪಡೆದು ಶೆಡ್ ನಿರ್ಮಿಸಿಕೊಡಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ತಿಳಿಸಿದರು.  

‘ಎರಡು ದಿನಗಳಲ್ಲಿ 835 ಶೆಡ್‌ಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಗುಯಿಲಗುಂದಿ, ಹಳೆ ಮೇಲ್ಮುರಿ, ಕೋಣನತಂಬಗಿ, ಕೆಸರಹಳ್ಳಿ, ಸಂಗೂರು, ವರದಹಳ್ಳಿ, ನಾಗನೂರು, ಕರ್ಜಗಿ, ಹೊಸರಿತ್ತಿ, ಕಂಚಾರಗಟ್ಟಿ ಹಾಗೂ ಹಳೆ ಕಿತ್ತೂರು ಗ್ರಾಮಗಳಲ್ಲಿ ಮೊದಲ ಹಂತದಲ್ಲಿ ನಿರ್ಮಿಸಲಾಗುವುದು’ ಎಂದು ಮಾಹಿತಿ ನೀಡಿದರು.

Post Comments (+)