ಗುರುವಾರ , ಆಗಸ್ಟ್ 22, 2019
27 °C
ಮಕ್ಕಳ ಕಲಿಕೆಗೂ ಪೆಟ್ಟು ಕೊಟ್ಟ ಪ್ರವಾಹ; ₹38 ಕೋಟಿ ಮೌಲ್ಯದ ಕೊಠಡಿಗಳಿಗೆ ಹಾನಿ

ನೆಲಕಚ್ಚಿದ ಶಾಲೆ, ಸಿಕ್ಕ ಜಾಗದಲ್ಲೇ ತರಗತಿ!

Published:
Updated:
Prajavani

ಹಾವೇರಿ: ಪ್ರವಾಹದ ಹೊಡೆತ ಶಾಲಾ ಮಕ್ಕಳ ಕಲಿಕೆ ಮೇಲೂ ಬಿದ್ದಿದೆ. ತರಗತಿ ಕೊಠಡಿಗಳು ಕುಸಿದಿರುವುದರಿಂದ  ದೇವಸ್ಥಾನಗಳಲ್ಲಿ, ಸಹಕಾರ ಸಂಘಗಳಲ್ಲಿ, ರೈತ ಸಂಪರ್ಕ ಕೇಂದ್ರಗಳಲ್ಲಿ, ವಸತಿ ನಿಲಯಗಳಲ್ಲಿ... ಹೀಗೆ ಸಿಕ್ಕ ಸಿಕ್ಕ ಜಾಗಗಳಲ್ಲೆಲ್ಲ ಮಕ್ಕಳನ್ನು ಕೂರಿಸಿ ಪಾಠ ಹೇಳಿಕೊಡಲಾಗುತ್ತಿದೆ. ಆ ಕಟ್ಟಡಗಳೂ ಈಗಲೋ–ಆಗಲೋ ಎನ್ನುವಂತಹ ಸ್ಥಿತಿಯಲ್ಲಿದ್ದು, ಗೋಡೆ ಪಕ್ಕಕ್ಕೆ ಸರಿಯಲು ಹೇಳಿದರೆ ಆ ಪುಟ್ಟ ಮಕ್ಕಳು ಭಯದಲ್ಲಿ ಉಗುಳು ನುಂಗುತ್ತಿವೆ!‌‌

ಮಳೆ–ಪ್ರವಾಹ ನಿಂತು ಬುಧವಾರದಿಂದ ಶಾಲೆಗಳು ಪುನರಾರಂಭ ಆಗಿವೆ. ಆದರೆ, ಮಕ್ಕಳಲ್ಲಿ ಎಂದಿನ ಲವಲವಿಕೆ ಇಲ್ಲ. ಪೋಷಕರ ಮೊಗದಲ್ಲೂ ಖುಷಿ ಮರೆಯಾಗಿ ಆತಂಕ ಆವರಿಸಿದೆ. ಹಿರೇಕೆರೂರಿನ ಚಿನ್ನಮುಳಗುಂದ ಗ್ರಾಮದಲ್ಲಂತೂ, ‘ಸದ್ಯಕ್ಕೆ ತರಗತಿ ಆರಂಭಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಪೋಷಕರು ಬೃಹತ್ ಪ್ರತಿಭಟನೆಯನ್ನೇ ನಡೆಸಿದ್ದಾರೆ.

ಕೆಲವು ಶಾಲೆಗಳಲ್ಲಿ ತರಗತಿ ನಡೆಯುತ್ತಿದ್ದರೂ ಶಿಕ್ಷಕರು ಪಠ್ಯಪುಸ್ತಕ–ಬೋರ್ಡ್ ನೋಡುವುದಕ್ಕಿಂತಲೂ ಹೆಚ್ಚಾಗಿ, ಶಾಲೆಯ ಕಟ್ಟಡದ ಮೇಲೇ ಕಣ್ಣು ಹಾಯಿಸಿ ಜಾಗ್ರತೆ ವಹಿಸುತ್ತಿದ್ದಾರೆ. ಪುಟ್ಟ ಮಕ್ಕಳು ಅಕ್ಷರ ಮಾಲೆ ಹೇಳುವಾಗ ಅ,ಆ,ಇ.ಈ... ಎನ್ನುತ್ತಲೇ ಕಣ್ಣರಳಿಸುತ್ತ ಛಾವಣಿ ನೋಡುತ್ತಿದ್ದಾರೆ.

₹38 ಕೋಟಿ ಹಾನಿ: ‘ನೆರೆಯಿಂದ ಶಾಲಾ ಕಟ್ಟಡಗಳಿಗೆ ಆಗಿರುವ ಹಾನಿಯ ಬಗ್ಗೆ ಅಧ್ಯಯನ ನಡೆಸಿ ಈಗಾಗಲೇ ಜಿಲ್ಲಾಡಳಿತಕ್ಕೆ ವರದಿ ಕೊಟ್ಟಿದ್ದೇವೆ. ಜಿಲ್ಲೆಯಲ್ಲಿ ಒಟ್ಟು 1,160 ಸರ್ಕಾರಿ ಶಾಲೆಗಳಿದ್ದು, 266 ಶಾಲೆಗಳಿಗೆ ಗಂಭೀರ ಹಾನಿಯಾಗಿದೆ. ಅವುಗಳ ದುರಸ್ತಿಗೆ ₹28.19 ಕೋಟಿ ಬೇಕಾಗಬಹುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನೂ 488 ಕೊಠಡಿಗಳಿಗೆ ಸಣ್ಣಪುಟ್ಟ ಹಾನಿಯಾಗಿದ್ದು, ಅವುಗಳ ರಿಪೇರಿಗೆ ₹9.77 ಕೋಟಿ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಕೆಲವು ತರಗತಿ ಕೊಠಡಿಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆದಿರುವ ಕಾರಣ, ಅಲ್ಲಿ ಕಲಿಯಬೇಕಾಗಿದ್ದ ಮಕ್ಕಳನ್ನು ಬೇರೆ ತರಗತಿಗಳ ವಿದ್ಯಾರ್ಥಿಗಳೊಂದಿಗೆ ಕೂಡಿಸಿ ಪಾಠ ಮಾಡಲಾಗುತ್ತಿದೆ. ಗೋಡೆಗಳು ಶಿಥಿಲಗೊಂಡಿರುವ ಕೊಠಡಿಗಳಲ್ಲಿ ತರಗತಿ ನಡೆಸಲು ಬಿಟ್ಟಿಲ್ಲ’ ಎಂದೂ ಹೇಳಿದರು.

ಚಿಣ್ಣರಿಗೂ ನೋವು: ತಮ್ಮ ನೆಚ್ಚಿನ ಶಾಲೆ ಹಾಳಾಗಿರುವುದನ್ನು ಕಂಡು ಚಿಣ್ಣರೂ ಬೇಸರಪಟ್ಟುಕೊಂಡಿದ್ದಾರೆ. ಹರವಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬುಧವಾರ ಇಡೀ ಆವರಣ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ 7ನೇ ತರಗತಿ ವಿದ್ಯಾರ್ಥಿ ಮಂಜುನಾಥ್ ಬಾರ್ಕಿ, ‘ರಾಷ್ಟ್ರಗೀತೆ ಹಾಡೋಕೂ ಜಾಗ ಇಲ್ದಂಗೆ ಮೈದಾನದಾಗ ಕೆಸ್ರು ನಿಂತದ. ನಾವ್ ನೀರಾಕಿ ಬೆಳೆಸಿದ ಗಿಡಗಳೆಲ್ಲ ಹಾಳಾಗಿ ಹೋಗ್ಯಾವ’ ಎಂದು ನೋವು ತೋಡಿಕೊಂಡನು.

 

ಹೊಣೆ ಹೊತ್ತು ಶಾಲೆ ನಡೆಸಿ

‘ನಮ್ಮ ಶಾಲೆಯಲ್ಲಿ 3 ಕೊಠಡಿ ಬಿದ್ದಿವೆ. ಇಲಾಖೆಯ ಆದೇಶದ ಮೇರೆಗೆ ಇತರೆ ಕೊಠಡಿಗಳಲ್ಲಿ ಮಂಗಳವಾರ ತರಗತಿ ಆರಂಭಿಸಲು ಮುಂದಾಗಿದ್ದೆವು. ಆಗ ಗಲಾಟೆ ಪ್ರಾರಂಭಿಸಿದ 50ಕ್ಕೂ ಹೆಚ್ಚು ಗ್ರಾಮಸ್ಥರು, ‘ಮಕ್ಕಳಿಗೆ ಏನೇ ಆದರೂ ನಾವೇ ಜವಾಬ್ದಾರು’ ಎಂದು ಪತ್ರ ಬರೆದುಕೊಟ್ಟು ಶಾಲೆ ಪ್ರಾರಂಭಿಸುವಂತೆ ಆಗ್ರಹಿಸಿದರು.

ಕೊನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಿದೆ. ಸ್ಥಳಕ್ಕೆ ದೌಡಾಯಿಸಿದ ಅವರು, ಮಕ್ಕಳ ಕಲಿಕೆಗೆ ತೊಂದರೆ ಆಗಬಾರದೆಂದು ರೈತ ಸಂಪರ್ಕ ಕೇಂದ್ರ, ಸಹಕಾರಿ ಸಂಘಗಳ ಕಚೇರಿಗಳಲ್ಲೇ ತರಗತಿ ವ್ಯವಸ್ಥೆ ಮಾಡಿದರು’ ಎಂದು ಚಿನ್ನಮುಳಗುಂದ ಶಾಲೆಯ ಮುಖ್ಯ ಶಿಕ್ಷಕ ಎಂ.ಡಿ.ಕುರುಬರ್ ಹೇಳಿದರು.   

 

ಸಂತ್ರಸ್ತರು ಶಾಲೆಯಲ್ಲೇ ಇರಿ; ಶಾಸಕ

‘ಶಾಲೆ ಶುರುವಾಗಿದ್ದು ಪರಿಹಾರ ಕೇಂದ್ರದಿಂದ ಸಂತ್ರಸ್ತರನ್ನು ಹೊರಗೆ ಕಳುಹಿಸಲಾಗುತ್ತದೆ ಎಂಬ ವದಂತಿ ಹಬ್ಬಿದೆ. ಅದಕ್ಕೆ ಯಾರೂ ಕಿವಿಗೊಡಬಾರದು. ತಮಗೆ ಶೆಡ್‌ಗಳನ್ನು ನಿರ್ಮಿಸಿಕೊಡುವವರೆಗೂ ಸಂತ್ರಸ್ತರು ಪರಿಹಾರ ಕೇಂದ್ರದಲ್ಲೇ ಇರಬಹುದು. ಅಲ್ಲಿಯವರೆಗೂ ಅಗತ್ಯ ಸಾಮಗ್ರಿಗಳನ್ನು ಪೂರೈಸಲಿದ್ದೇವೆ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

Post Comments (+)