ಶನಿವಾರ, ಮಾರ್ಚ್ 28, 2020
19 °C
ಜಿಲ್ಲಾಡಳಿತ ಭವನದ ಎದುರು ರೈತರ ಪ್ರತಿಭಟನೆ; ಜಿಲ್ಲಾಧಿಕಾರಿಗೆ ಮನವಿ

ಬೇಡಿಕೆ ಈಡೇರಿಕೆಗೆ ರೈತ ಸಂಘದ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನೆರೆ ಸಂತ್ರಸ್ತರಿಗೆ ಪರಿಹಾರ, ಅಕ್ರಮ ಮನೆಗಳಿಗೆ ಪಟ್ಟಾ ವಿತರಣೆ, ಬೆಳೆ ಹಾನಿ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತ ಭವನದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ ಮಾತನಾಡಿ, ಆಗಸ್ಟ್‌ ಹಾಗೂ ಅಕ್ಟೋಬರ್‌ ತಿಂಗಳಿನಲ್ಲಿ ಸುರಿದ ಮಳೆಗೆ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಪ್ರವಾಹದಿಂದ ಮನೆಯನ್ನು ಕಳೆದುಕೊಂಡಿದ್ದಾರೆ. ನೆರೆ ಸಂತ್ರಸ್ಥರನ್ನು ಸ್ಥಳಾಂತರ ಮಾಡಿ ಮನೆ ನಿ‌ರ್ಮಿಸಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಆರೋಪಿಸಿದರು.

ದೇವಗಿರಿ ಗ್ರಾಮದಲ್ಲಿ ನೂರಾರು ಜನರು ಸುಮಾರು 40 ವರ್ಷಗಳಿಂದ ಮನೆಯನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಅವರಿಗೆ ಗ್ರಾಮ ಪಂಚಾಯ್ತಿ ವತಿಯಿಂದ ನೀರು, ವಿದ್ಯುತ್‌ ಹಾಗೂ ರಸ್ತೆ ಸಂಪರ್ಕವನ್ನೂ ಕಲ್ಪಿಸಿದ್ದಾರೆ. ಪ್ರಸ್ತುತ ಅಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಅಕ್ರಮ ಸಕ್ರಮದಲ್ಲಿ ಅವಕಾಶ ಕಲ್ಪಿಸಿ ಪಟ್ಟಾ ವಿತರಿಸಬೇಕೆಂದು ಅನೇಕ ಬಾರಿ ಹೋರಾಟವನ್ನು ಮಾಡಲಾಗಿದೆ. ಕೂಡಲೆ ಜಿಲ್ಲಾಡಳಿತ ಇದನ್ನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ನೋಟಿಸ್‌ ಕೊಡುವುದು ನಿಲ್ಲಿಸಿ:

ಬ್ಯಾಂಕ್‌ನಿಂದ ರೈತರಿಗೆ ನೋಟಿಸ್‌ ನೀಡುವುದು ಮತ್ತು ಕೇಸ್‌ ದಾಖಲಿಸುವುದು ಮಾಡುತ್ತಿದ್ದಾರೆ. ಹೀಗೆ ನೋಟಿಸ್‌ ನೀಡುವುದರಿಂದ ರೈತರು ಬ್ಯಾಂಕಿನವರ ಕಾಟಕ್ಕೆ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಅಂತಹ ಬ್ಯಾಂಕ್‌ನವರ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ವಿವಿಧ ಹಳ್ಳಿಗಳಿಗೆ ಬಸ್‌ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಮಕ್ಕಳು ನಡೆದುಕೊಂಡೇ ಶಾಲೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ನಗರಕ್ಕೆ ಸಾರ್ವಜನಿಕ ಬರಬೇಕೆಂದರೂ ಸೌಲಭ್ಯ ಇಲ್ಲದಾಗಿದೆ. ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ಎಲ್ಲ ಹಳ್ಳಿಗಳಿಗೆ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬೆಳೆ ವಿಮೆ ಅನ್ಯಾಯ ಸರಿಪಡಿಸಿ:

ಬೆಳೆವಿಮೆ ಮತ್ತು ಬೆಳೆ ಹಾನಿ ಪರಿಹಾರ ರೈತರಿಗೆ ಸರಿಯಾಗಿ ತಲುಪಿಲ್ಲ. ಮನೆ ಬಿದ್ದವರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಬೆಳೆ ಹಾನಿ ಪರಿಹಾರ ಕೆಲವರಿಗಷ್ಟೇ ತಲುಪಿದ್ದು, ಶೇ. 65 ಜನರಿಗೆ ಪರಿಹಾರ ಸಿಕ್ಕಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಒತ್ತಾಯಿಸಿದರು.

ಹಾಶಿಂ ಜಿಗಳೂರ, ಭುವನೇಶ್ವರ ಶಿಡ್ಲಾಪುರ, ನಾಗರಾಜ ದೊಡ್ಡಕುರುಬರ, ಉಮೇಶ ವಿಠ್ಠೋಜಿ, ನೂರಅಹ್ಮದ್, ರಾಜೇಸಾಬ ತರ್ಲಘಟ್ಟ, ಜಗದೀಶ ಬಳ್ಳಾರಿ, ಮಂಜಣ್ಣ ಅರಳಿ, ರುದ್ರಪ್ಪ ಬಳಿಗಾರ, ಚನ್ನಪ್ಪ ಮರಡೂರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು