ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ತಪ್ಪಿದ ‘ಬೆಳೆ’, ಕೈ ಸೇರದ ‘ಬೆಲೆ‘!

ಆಗಸ್ಟ್‌ ನೆರೆ ಹಾಗೂ ಅಕಾಲಿಕ ಮಳೆಗೆ ಶೇಂಗಾ ಇಳುವರಿ ಕುಂಠಿತ
Last Updated 30 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಹಾವೇರಿ: ಶೇಂಗಾ ಬೆಳೆಯ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಏಕೆಂದರೆ ಇಳುವರಿ ಕುಂಠಿತವಾಗುವುದರ ಜೊತೆಗೆ ಬೆಲೆಯೂ ಕಡಿಮೆಯಾಗಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನೆರೆಯಿಂದ ಶೇಂಗಾ ಬೆಳೆ ಹಾಳಾಗಿ ನಿರೀಕ್ಷಿತ ಇಳುವರಿ ಸಿಕ್ಕಿರಲಿಲ್ಲ. ಕೈಗೆ ಸಿಕ್ಕ ಅಲ್ಪಸ್ವಲ್ಪ ಶೇಂಗಾವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ, ಉತ್ತಮ ಬೆಲೆ ಸಿಗದೇ ಇರುವುದು ರೈತರ ಆತಂಕವನ್ನು ಹೆಚ್ಚಿಸಿದೆ. ಕೊನೇ ಪಕ್ಷ ಹಾಕಿದ ಬಂಡವಾಳವೂ ಸಿಗುತ್ತಿಲ್ಲ ಎಂಬುದು ಬೆಳೆಗಾರರ ಅಳಲು.

‘ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ 19,885 ಹೆಕ್ಟೇರ್‌ ಬೆಳೆ ಬಿತ್ತನೆ ಮಾಡಲಾಗಿತ್ತು. ಆಗಸ್ಟ್‌ ತಿಂಗಳಿನ ನೆರೆಯಿಂದ ಹಾಗೂ ಅಕ್ಟೋಬರ್‌ ತಿಂಗಳ ಮಳೆಯಿಂದಾಗಿ 13,744 ಹೆಕ್ಟೇರ್‌ ಬೆಳೆ (ಶೇ 75) ಹಾನಿಯಾಗಿದೆ. ಆರಂಭದಲ್ಲಿ ಕ್ವಿಂಟಲ್‌ ಶೇಂಗಾಕ್ಕೆ ₹9 ಸಾವಿರ ದರವಿತ್ತು. ಈಗ ₹4,700ಕ್ಕೆ ದರ ಕುಸಿದಿರುವುದರಿಂದ ಸಭೆ ನಡೆಸಲಾಗಿದೆ’ ಎಂದು ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ ತಿಳಿಸಿದರು.

‘ಈಗ ಶೇಂಗಾ ಸೀಸನ್‌ ಆದ ಕಾರಣ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದೆ. ಇದರಿಂದ ಬಹಳಷ್ಟು ರೈತರು ಶೇಂಗಾ ಮಾರಲು ಹಿಂದೇಟು ಹಾಕುತ್ತಿದ್ದಾರೆ. ಎರಡು–ಮೂರು ವಾರಗಳ ನಂತರ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಸಾಲ ಮಾಡಿ ಶೇಂಗಾ ಬಿತ್ತನೆ ಮಾಡಲಾಗಿತ್ತು. ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆ ಅರ್ಧ ಬದುಕನ್ನು ನಶ್ವರವನ್ನಾಗಿಸಿದೆ. ಈಗ ಬೆಲೆ ಸಿಗದಿರುವುದಕ್ಕೆ ಬೀದಿಗೆ ಬರುವ ಸ್ಥಿತಿ ಇದೆ. ಹತ್ತಾರು ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದರೆ ಕಡಿಮೆ ಬೆಲೆಗೆ ಖರೀದಿಸುತ್ತಾರೆ’ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ವಿವಿಧ ರೈತ ಸಂಪರ್ಕ ಕೇಂದ್ರಕ್ಕೆ 2,577 ಕ್ವಿಂಟಲ್‌ ಶೇಂಗಾ ಬೀಜವನ್ನು ಸರಬರಾಜು ಮಾಡಲಾಗಿತ್ತು. ಅದರಲ್ಲಿ 2,262 ಕ್ವಿಂಟಲ್‌ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

‘ಹಾವೇರಿ ಮಾರುಕಟ್ಟೆಗೆ ಶೇಂಗಾ ಬರುವುದು ಕಡಿಮೆ. ಇಲ್ಲಿಂದ ರೈತರು ಲಕ್ಷ್ಮೇಶ್ವರದಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಾರೆ. ಎಪಿಎಂಸಿಯಲ್ಲಿ ಶೇಂಗಾ ಬೆಲೆ ಈಗ ₹2,400 ರಿಂದ ₹5,129ರವರೆಗೆ ಇದೆ’ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು.

‘ಮೂರು ಎಕರೆಯಲ್ಲಿ ಬೆಳೆದಿದ್ದ ಶೇಂಗಾ ಪೈಕಿ, ಎರಡು ಎಕರೆ ನೆರೆಯಿಂದ ಹಾಳಾಗಿದೆ. ಇನ್ನುಳಿದ ಬೆಳೆ ತೆಗೆಸಲು ಹೋದರೆ ಕಾರ್ಮಿಕರು ಹೆಚ್ಚಿನ ಕೂಲಿಯನ್ನು ಕೇಳುತ್ತಾರೆ. ಅಲ್ಲದೆ, ಒಂದು ಗಿಡದಲ್ಲಿ ಬಿಡುವ ಕಾಯಿಯ ಮುಕ್ಕಾಲು ಭಾಗದಷ್ಟು ಕಾಯಿಗಳು ನೆಲದಲ್ಲಿಯೇ ಉಳಿಯುತ್ತಿದೆ’ ಎಂದು ಸವೂರಿನ ರೈತ ಅಣ್ಣಪ್ಪ ಸುಣಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷ ಇಳುವರಿಗೆ ತಕ್ಕಂತೆ ಬೆಲೆ ಇರುತ್ತಿತ್ತು. ಇಳುವರಿ ಕಡಿಮೆಯಾದಾಗ ಬೆಲೆ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿ ಇಳುವರಿ ಕಡಿಮೆ ಇದ್ದರೂ ಬೆಲೆ ಸಿಗುತ್ತಿಲ್ಲ. ಕಾಯಿಯೂ ಸರಿಯಾಗಿ ಬಿಟ್ಟಿಲ್ಲ’ ಎಂದು ಅಣ್ಣಪ್ಪ ಹತಾಶೆ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT