ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧೀಜಿಯವರ 155ನೇ ಜಯಂತ್ಯುತ್ಸವ: ಹಳ್ಳಿಕೇರಿ ಜೀವನ ಚರಿತ್ರೆ ಬಿಂಬಿಸುವ ಗ್ಯಾಲರಿ

ಗಾಂಧಿ ಗ್ರಾಮೀಣ ಗುರುಕುಲದ 41ನೇ ಸಂಸ್ಥಾಪನಾ ದಿನ
Published : 30 ಸೆಪ್ಟೆಂಬರ್ 2024, 15:57 IST
Last Updated : 30 ಸೆಪ್ಟೆಂಬರ್ 2024, 15:57 IST
ಫಾಲೋ ಮಾಡಿ
Comments

ಹಾವೇರಿ: ‘ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಗಾಂಧಿವಾದಿ ಗುದ್ಲೆಪ್ಪ ಹಳ್ಳಿಕೇರಿ ಅವರ ಜೀವನ ಚರಿತ್ರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಫೋಟೊ ಗ್ಯಾಲರಿ ನಿರ್ಮಿಸಲಾಗಿದ್ದು, ಅಕ್ಟೋಬರ್ 2ರಂದು ಗ್ಯಾಲರಿಯ ಉದ್ಘಾಟನಾ ಸಮಾರಂಭ ನಡೆಯಲಿದೆ’ ಎಂದು ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಹಿರಿಯ ಧರ್ಮದರ್ಶಿ ವೀರಣ್ಣ ಚೆಕ್ಕಿ ಹೇಳಿದರು.

ತಾಲ್ಲೂಕಿನ ಹೊಸರಿತ್ತಿಯಲ್ಲಿರುವ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಾಂಧೀಜಿಯವರ 155ನೇ ಜಯಂತ್ಯುತ್ಸವ ಹಾಗೂ ಗುರುಕುಲದ 41ನೇ ಸಂಸ್ಥಾಪನಾ ದಿನಾಚರಣೆ ಜೊತೆಯಲ್ಲಿಯೇ ಫೋಟೊ ಗ್ಯಾಲರಿ ಉದ್ಘಾಟನೆಯೂ ಜರುಗಲಿದೆ’ ಎಂದರು.

‘ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಗುದ್ಲೆಪ್ಪ ಅವರು, ರಾಜಕೀಯ ಕ್ಷೇತ್ರದಲ್ಲೂ ಸ್ವಚ್ಛ ಆಡಳಿತ ನೀಡಿದ್ದರು. ಅವರೊಬ್ಬ ಮಾದರಿ ವ್ಯಕ್ತಿ. ಅವರ ಜೀವನ, ಸಾಧನೆ ಹಾಗೂ ಆದರ್ಶಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ‘ದರ್ಶನ ಪ್ರದರ್ಶನ’ ಹೆಸರಿನಲ್ಲಿ ಫೋಟೊ ಗ್ಯಾಲರಿ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.

‘ಗುದ್ಲೆಪ್ಪನವರ ಅವರ ಬಾಲ್ಯದ ದಿನಗಳು, ಸಾಹಸಗಾಥೆ ಬಿಂಬಿಸುವ ಮಹತ್ವದ ಫೋಟೊಗಳು, ವಿವಿಧ ಹೋರಾಟದ ಫೋಟೊಗಳನ್ನು ಗ್ಯಾಲರಿಯಲ್ಲಿ ನೋಡಬಹುದಾಗಿದೆ. ಜವಾಹರಲಾಲ ನೆಹರು, ದೇವರಾಜ ಅರಸು ಸೇರಿದಂತೆ ಹಲವು ಮಹಾನ್ ನಾಯಕರ ಜೊತೆಗಿನ ಒಡನಾಟದ ಫೋಟೊಗಳೂ ಸಹ ಗ್ಯಾಲರಿಯಲ್ಲಿವೆ’ ಎಂದು ಹೇಳಿದರು.

‘ಫೋಟೋ ಗ್ಯಾಲರಿಯನ್ನು ಹುಬ್ಬಳ್ಳಿಯ ಉದ್ಯಮಿ ಚಿಗುರುಪಾಟಿ ಸತ್ಯವರ ಪ್ರಸಾದ ಉದ್ಘಾಟಿಸಲಿದ್ದಾರೆ. ಪ್ರತಿಷ್ಠಾನದ ಪ್ರಧಾನ ಧರ್ಮದರ್ಶಿ ರಾಜೇಂದ್ರಪ್ರಸಾದ ಹಳ್ಳಿಕೇರಿ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಗುರುಕುಲದ ಕಳಕೇಶ್ವರ ಪಟ್ಟಣಶೆಟ್ಟಿ, ಶಿವಲಿಂಗಯ್ಯ ಗಡ್ಡದೇವರಮಠ, ವಿಜಯಕುಮಾರ ಜಯಕರ ಅವರನ್ನು ಸನ್ಮಾನಿಸಲಾಗುವುದು’ ಎಂದು ಅವರು ತಿಳಿಸಿದರು.

ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಪ್ರಧಾನ ಧರ್ಮದರ್ಶಿ ರಾಜೇಂದ್ರಪ್ರಸಾದ ಹಳ್ಳಿಕೇರಿ, ‘ರಾಜ್ಯದಲ್ಲೇ ವಿಶೇಷವಾಗಿರುವ ಗಾಂಧಿ ಗ್ರಾಮೀಣ ಗುರುಕುಲದ ಸ್ಥಾಪಕ ಗುದ್ಲೆಪ್ಪ ಹಳ್ಳಿಕೇರಿ ಅವರ ಜೀವನ ಯಶೋಗಾಥೆ ಬಿಂಬಿಸುವ ಫೋಟೊ ಗ್ಯಾಲರಿ ಅದ್ಭುತವಾಗಿ ಮೂಡಿ ಬಂದಿದೆ. ಇಂದಿನ ಯುವ ಪೀಳಿಗೆಗೆ ಗ್ಯಾಲರಿ ಮಾದರಿಯಾಗಲಿದೆ’ ಎಂದರು.

ದಯಾನಂದ ಕಲಕೋಟಿ, ಗುರುಕುಲದ ಮುಖ್ಯ ಶಿಕ್ಷಕ ಎಂ.ಪಿ. ಗೌಡಣ್ಣವರ, ಪ್ರಾಂಶುಪಾಲ ಎಂ.ಪಿ. ಸೊಬರದ, ನಿವೃತ್ತ ಮುಖ್ಯ ಶಿಕ್ಷಕ ಆರ್.ಎಸ್. ಪಾಟೀಲ, ಚಂದ್ರಶೇಖರ ಅರಳಿಹಳ್ಳಿ, ಪ್ರಭಣ್ಣ ಗೌರಿಮನಿ, ಛಾಯಾಗ್ರಾಹಕ ಶಶಿ ಸಾಲಿ ಇದ್ದರು.

’ಗುರುಕುಲಕ್ಕೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’

‘ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ನೀಡುವ 2024ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಲಭಿಸಿದೆ’ ಎಂದು ವೀರಣ್ಣ ಚೆಕ್ಕಿ ಹೇಳಿದರು.

‘ಮಹಾತ್ಮ ಗಾಂಧೀಜಿಯವರ ಸತ್ಯ ಅಹಿಂಸೆ ಸ್ವಾವಲಂಬನೆ ಗ್ರಾಮಸ್ವರಾಜ್ ಅಸ್ಪಶ್ಯತೆ ನಿವಾರಣೆ ಆರ್ಥಿಕ ಚಿಂತನೆ ಖಾದಿ ಚಟುವಟಿಕೆ ಜೀವನ ಶಿಕ್ಷಣ ಹಾಗೂ ಇತರೆ ತತ್ವಾದರ್ಶಗಳನ್ನು ಅಳವಡಿಸಿಕೊಂಡಿರುವ ವ್ಯಕ್ತಿಗಳು ಹಾಗೂ ಸಂಘ–ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ನಮ್ಮ ಗುರುಕುಲಕ್ಕೆ ಪ್ರಶಸ್ತಿ ದೊರಕಿರುವುದಕ್ಕೆ ಸಂತೋಷವಾಗಿದೆ’ ಎಂದರು.

‘1984ರ ಅಕ್ಟೋಬರ್ 2ರಂದು ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದಿಂದ ಗುರುಕುಲ ವಸತಿ ಶಾಲೆ ಪ್ರಾರಂಭಿಸಲಾಯಿತು. ಈ ಗುರುಕುಲ ವಸತಿ ಶಾಲೆಯಲ್ಲಿ ನಾನಾ ಜಿಲ್ಲೆಯ ವಿದ್ಯಾರ್ಥಿಗಳು 5ನೇ ತರಗತಿಯಿಂದ 10ನೇ ತರಗತಿವರೆಗೆ ಶಿಕ್ಷಣ ಪಡೆಯುತ್ತಿದ್ದಾರೆ. ಗ್ರಾಮೀಣ ಕೃಷಿಕ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಇಲ್ಲಿದ್ದಾರೆ. ಶಿಕ್ಷಣದ ಜೊತೆಯಲ್ಲಿ ಗಾಂಧೀಜಿಯವರ ತತ್ವಾದರ್ಶನಗಳನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT