ಹಾವೇರಿ: ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ಜೋರು ಮಳೆಯಾಗಿದ್ದು, ಕೆಲವೆಡೆ ಮರಗಳು ಉರುಳಿಬಿದ್ದಿವೆ. ಕೆಲ ಗ್ರಾಮಗಳಲ್ಲಿ ಮನೆಗಳ ಚಾವಣಿಯ ಹಂಚುಗಳು ಹಾಗೂ ಶೆಡ್‌ಗಳ ಚಾವಣಿಗಳು ಹಾರಿ ಹೋಗಿವೆ.
ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಗಾಳಿ ಸಹಿತ ಜೋರು ಮಳೆ ಸುರಿದಿದೆ.
ಮುಂಗಾರು ಆರಂಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ನಂತರ, ಮಳೆ ಕ್ರಮೇಣ ಕಡಿಮೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಆಗಾಗ ಮಾತ್ರ ಮೋಡ ಮುಸುಕಿದ ವಾತಾವರಣ ಕಾಣಿಸಿಕೊಳ್ಳುತ್ತಿದೆ. ಅದರ ಜೊತೆಯಲ್ಲಿಯೇ, ಬಿಸಿಲು ಸಹ ಹೆಚ್ಚಾಗಿವೆ.
ಹಾವೇರಿ, ರಾಣೆಬೆನ್ನೂರು, ಸವಣೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಿಸಿಲು ಹೆಚ್ಚಾಗಿದೆ. ಸೆಕೆಯೂ ಜಾಸ್ತಿ ಇದೆ.
ಮಲೆನಾಡು ಸೆರಗಿನಲ್ಲಿರುವ ಹಾನಗಲ್, ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಆಗಾಗ ಜೋರು ಮಳೆ ಆಗುತ್ತಿದೆ. ಸೋಮವಾರ ರಾತ್ರಿ ಮಳೆಯ ಆರ್ಭಟ ಜೋರಾಗಿತ್ತು. ಗುಡುಗು ಹಾಗೂ ಸಿಡಿಲಿನ ಜೊತೆಯಲ್ಲಿ ಉತ್ತಮ ಮಳೆ ಸುರಿಯಿತು.
ಹಾನಗಲ್ ತಾಲ್ಲೂಕಿನ ಸೋಮಸಾಗರ ಗ್ರಾಮದಲ್ಲಿ ಮಳೆ ಹೆಚ್ಚು ಸುರಿದಿದೆ. ಗ್ರಾಮದಲ್ಲಿರುವ ಸುನೀಲ್ ಚಿಕೋಣತಿ ಅವರಿಗೆ ಸೇರಿದ್ದ ಜಿ.ಎಸ್. ಕ್ಲಾಥಿಂಗ್ ಕಾರ್ಖಾನೆಯ ಚಾವಣಿ ಹಾರಿ ಹೋಗಿದೆ. ಮಳೆ ನೀರು ಕಾರ್ಖಾನೆಯೊಳಗೆ ನುಗ್ಗಿ, ಸೀರೆ ನೇಯ್ಯುವ ಯಂತ್ರವೂ ಕೆಟ್ಟಿದೆ.
ಮುಳತ್ತಳ್ಳಿ, ಹಿರೇಬಾಸೂರು, ಉಪ್ಪಂಶಿ, ಚಿಕ್ಕಬಾಸೂರು, ಹೇರೂರು ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಜೋರು ಮಳೆ ಆಗಿದೆ.
ಸೋಮಸಾಗರ ಗ್ರಾಮದಿಂದ ಮುಳತ್ತಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದಿತ್ತು. ಇದರಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಬೆಳಿಗ್ಗೆ ಶಾಲಾ ವಿದ್ಯಾರ್ಥಿಗಳು, ರಸ್ತೆ ದಾಡಿ ಹೋಗಲು ಕಷ್ಟಪಟ್ಟರು. ಬಳಿಕ, ಗ್ರಾಮಸ್ಥರು ಮರವನ್ನು ತೆರವುಗೊಳಿಸಿದರು.
‘ಸೋಮವಾರ ರಾತ್ರಿ ಜೋರು ಗಾಳಿ ಸಮೇತ ಮಳೆ ಆಯಿತು. ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಮರ ಉರುಳಿಬಿದ್ದಿತ್ತು. ಇಡೀ ರಸ್ತೆಯಲ್ಲಿ ಮರದ ಟೊಂಗೆಗಳು ಬಿದ್ದಿದ್ದವು. ಇದರಿಂದಾಗಿ ವಾಹನಗಳು, ಒಂದು ಕಡೆಯಿಂದ ಮತ್ತೊಂದು ರಸ್ತೆ ಹೋಗಲು ಸಾಧ್ಯವಾಗಿರಲಿಲ್ಲ’ ಎಂದು ಗ್ರಾಮಸ್ಥರು ಹೇಳಿದರು.
‘ಮರ ಬಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮದ ಕೆಲವರು, ಸ್ಥಳಕ್ಕೆ ಹೋಗಿ ಮರದ ಟೊಂಗೆಗಳನ್ನು ಕಡಿದು ಬೇರೆಡೆ ಸ್ಥಳಾಂತರಿಸಿದರು. ರಸ್ತೆಯಲ್ಲಿದ್ದ ಮರದ ಅವಶೇಷಗಳನ್ನು ತೆರವು ಮಾಡಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು’ ಎಂದು ತಿಳಿಸಿದರು.
ಮಳೆ ಸಾಧ್ಯತೆ: ‘ಜಿಲ್ಲೆಯಲ್ಲಿ ಬಿಸಿಲಿನ ಜೊತೆಯಲ್ಲಿಯೇ ಅಲ್ಲಲ್ಲಿ ಮಳೆ ಆಗುತ್ತಿದೆ. ಸೋಮವಾರ ರಾತ್ರಿಯೂ ಕೆಲವೆಡೆ ಜೋರು ಮಳೆಯಾಗಿದೆ. ಮುಂದಿನ ಕೆಲ ದಿನಗಳವರೆಗೆ ಮಳೆಯಾಗುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆಯವರು ತಿಳಿಸಿದ್ದಾರೆ.
ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಮಳೆ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ ಬೆಳೆ ಒಣಗಿಸಲು ರೈತರ ಪರದಾಟ
ರೈತರು ಕಂಗಾಲು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಸೋಯಾಬೀನ್ ಮೆಕ್ಕೆಜೋಳ ಫಸಲು ಕಟಾವಿಗೆ ಬಂದಿದೆ. ಜಿಲ್ಲೆಯ ಹಲವು ರೈತರು ಫಸಲು ಕಟಾವು ಮಾಡಿ ಕಾಳುಗಳನ್ನು ಹಲವೆಡೆ ಒಣಗಿಸಲು ಹಾಕಿದ್ದಾರೆ. ಆದರೆ ದಿಢೀರ್ ಮಳೆ ಆಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ‘ಮೆಕ್ಕೆಜೋಳದಲ್ಲಿ ತೇವಾಂಶ ಕಡಿಮೆ ಇದ್ದರೆ ಮಾತ್ರ ಉತ್ತಮ ಬೆಲೆ ಸಿಗುತ್ತದೆ. ಆದರೆ ಈಗ ಮಳೆಯಿಂದಾಗಿ ಮೆಕ್ಕೆಜೋಳದಲ್ಲಿ ತೇವಾಂಶ ಹೆಚ್ಚಾಗಿದೆ. ಒಣಗಲು ಹಾಕಿದರೆ ಮಳೆ ಭಯ ಶುರುವಾಗಿದೆ. ಮಳೆ ಬಿಡುವು ನೀಡಿದರೆ ಕಾಳುಗಳು ಚೆನ್ನಾಗಿ ಒಣಗುತ್ತವೆ’ ಎಂದು ರೈತ ಶಂಕರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.