ಸೋಮವಾರ, ನವೆಂಬರ್ 18, 2019
24 °C

ಹಾವೇರಿ: ನೀರಿನಲ್ಲಿ ಕೊಚ್ಚಿ ಹೋದ ಬಾಲಕ; ಅಪಾಯದಿಂದ ಪಾರಾದ ಬೈಕ್ ಸವಾರರು

Published:
Updated:

ಹಾವೇರಿ: ಭಾನುವಾರ ತಡರಾತ್ರಿ ಸುರಿದ ಗುಡುಗು ಸಹಿತ ಮಳೆಯಿಂದ ಹೊಲಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹಿಂಗಾರು ಮಳೆಗೆ ರಸ್ತೆಗಳು ಜಲಾವೃತ್ತವಾಗಿ, ಜಮೀನಿನಲ್ಲಿ ನೀರು ನಿಂತಿದೆ.

ಭಾನುವಾರ ರಾತ್ರಿ ಹಾಗೂ ಸೋಮವಾರ ನಸುಕಿನಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಹಾವೇರಿ, ಬ್ಯಾಡಗಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ, ಸಾವು ನೋವು ಸಂಭವಿಸಿದೆ.

ಜೋರಾದ ಮಳೆಯಿಂದ ಹಿರೇಕೆರೂರ ತಾಲ್ಲೂಕಿನ ಬಾಳಂಬೀಡ ಗ್ರಾಮದ ರಾಜು ಭರಮಗೌಡ್ರ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಅಲ್ಲದೇ, ಸೋಯಬ್‌ ರಾಣೆಬೆನ್ನೂರು(8) ವರ್ಷದ ಬಾಲಕ ಕಾಲು ಜಾರಿ ಬಿದ್ದು, ದುರ್ಗಾದೇವಿ ಕೆರೆಗೆ ಹೋಗುವ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಬಾಲಕನ ಶವಕ್ಕಾಗಿ ಸ್ಥಳೀಯರಿಂದ ಶೋಧಕಾರ್ಯ ನಡೆದಿದೆ.

ಹಾವೇರಿ ನಗರದಲ್ಲಿ ತಡರಾತ್ರಿ ಸುರಿದ ಮಳೆಗೆ ದೊಡ್ಡಬಸವೇಶ್ವರ ದೇವಸ್ಥಾನದ ಬಳಿಯ ಬಸವರಾಜ ಹತ್ತಿಮತ್ತೂರ(65) ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ಅಲ್ಲದೇ, ಹೆಗ್ಗೇರಿ ಕೆರೆಯಲ್ಲಿ ಸುಮಾರು 55 ವರ್ಷದ ವ್ಯಕ್ತಿಯ ಶವವು ಪತ್ತೆಯಾಗಿದೆ. ಹಾವೇರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಅಗಡಿ ಹಳ್ಳದಲ್ಲಿ ಮಳೆಯಿಂದ ತುಂಬಿ ರಸ್ತೆಯ ಮೇಲೆ ಹರಿಯುತ್ತಿತ್ತು. ಮಳೆಯಲ್ಲಿ ರಾತ್ರಿ ದಾರಿ ಕಾಣದೆ ಬೈಕ್‌ ಸವಾರರು ಸೇತುವೆ ದಾಟುತ್ತಿರುವಾಗ, ಕೊಚ್ಚಿ ಹೋಗಿದ್ದರು. ಅದೃಷ್ಟವಶಾತ್ ಮರದ ಟೊಂಗೆ ಹಿಡಿದು ಕುಳಿತಿದ್ದ, ಬೊಮ್ಮನಕಟ್ಟಿ ಗ್ರಾಮದ ಸಂಗಯ್ಯ ಬಸಯ್ಯ ಹಿರೇಮಠ, ನೇತ್ರಾವತಿ ಹಾಗೂ ಸೀತಾಬಾಯಿ ನಾಯಕ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ಚಾಲಕ ಹಾಗೂ ಪ್ರಯಾಣಿಕರಿಂದ ರಕ್ಷಣೆ ಮಾಡಿದರು.

ಪ್ರತಿಕ್ರಿಯಿಸಿ (+)