ಗುರುವಾರ , ಅಕ್ಟೋಬರ್ 17, 2019
21 °C

ದಶಕದ ನಂತರ ಮೈದುಂಬಿದ ಹಾವೇರಿಯ ಹೆಗ್ಗೇರಿ ಕೆರೆ

Published:
Updated:
Prajavani

ಹಾವೇರಿ: ಚನ್ನಗಿರಿಯ ಸೂಳೆಕೆರೆ ಬಿಟ್ಟರೆ ರಾಜ್ಯದ 2ನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ ಹೊಂದಿರುವ ಹಾವೇರಿಯ ಹೆಗ್ಗೇರಿ ಕೆರೆಯು ದಶಕದ ನಂತರ ತುಂಬಿ ಹರಿಯುತ್ತಿದೆ.

ಈ ಕೆರೆಯನ್ನು ತುಂಬಿಸಲು ಜನಪ್ರತಿನಿಧಿಗಳು ಎರಡೆರಡು ಯೋಜನೆಗಳನ್ನು ರೂಪಿಸಿ ಕೋಟ್ಯಂತರ ರೂಪಾಯಿ ವ್ಯಯಿಸಿದ್ದರು. ಆದರೆ, ಹಲವು ವರ್ಷಗಳೇ ಕಳೆದರೂ ಈ ಜಲಮೂಲಕ್ಕೆ ನೀರು ಬಂದಿರಲಿಲ್ಲ. ಇತ್ತ ಸಾರ್ವಜನಿಕರ ಕುಡಿಯುವ ನೀರಿನ ಬವಣೆಯೂ ತೀರಿರಲಿಲ್ಲ. ಈಗ ಸತತ ಮಳೆಯಿಂದ ಕೆರೆ ತಾನಾಗಿಯೇ ತುಂಬಿಕೊಂಡಿದ್ದು ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ.

682 ಎಕರೆ ವಿಸ್ತೀರ್ಣವಿದ್ದ ಹೆಗ್ಗೇರಿ ಕೆರೆಯು ಒತ್ತುವರಿ ಕಾರಣದಿಂದ ಈಗ 400 ಎಕರೆಗೆ ಇಳಿದಿದೆ. 2009ರ ಪ್ರವಾಹ ಸಂದರ್ಭದಲ್ಲಿ ಇದು ಭರ್ತಿಯಾಗಿ ಕೋಡಿ ಬಿದ್ದಿತ್ತು. ಈ ವರ್ಷದ ಆಗಸ್ಟ್‌ನಲ್ಲಿ ಸುರಿದ ಮಹಾಮಳೆಗೆ ಕೆರೆ ತುಂಬಿತ್ತಾದರೂ, ಕೋಡಿ ಬಿದ್ದಿರಲಿಲ್ಲ. 

‘ಬ್ಯಾಡಗಿ ತಾಲೂಕಿನ ಕಾಗಿನೆಲೆ ಕೆರೆ ತುಂಬಿದರೆ, ಹೆಗ್ಗೇರಿ ಸೇರಿದಂತೆ ಏಳೂರ ಕೆರೆಗಳೂ ತುಂಬುತ್ತವೆ ಎಂಬುದು ವಾಡಿಕೆ. ಅದು ನಿಜ ಕೂಡ. ಕಳೆದ ಹತ್ತು ದಿನಗಳಿಂದ ಪ್ರತಿದಿನ ಸಂಜೆ ಸುರಿಯುತ್ತಿರುವ ಮಳೆಯಿಂದ ಬುಧವಾರ ಕಾಗಿನೆಲೆ ಕೆರೆ ತುಂಬಿ ಹರಿಯುತ್ತಿತ್ತು. ಅದರ ಹೆಚ್ಚುವರಿ ನೀರು ಹೆಗ್ಗೇರಿ ಕೆರೆಯ ಒಡಲು ಸೇರಿದ್ದರಿಂದ ಇದೂ ತುಂಬಿದೆ’ ಎಂದು ಸ್ಥಳೀಯ ರೈತರು ಹೇಳುತ್ತಾರೆ. 

ಸಂಭ್ರಮದ ಸ್ನಾನ:

ಕೋಡಿ ಬಿದ್ದಿರುವ ವಿಚಾರ ತಿಳಿದು ಸುತ್ತಮುತ್ತಲ ಗ್ರಾಮಸ್ಥರು ಗುರುವಾರದಿಂದಲೇ ಹೆಗ್ಗೇರಿ ಕೆರೆ ಬಳಿ ಬರುತ್ತಿದ್ದಾರೆ. ನೀರಿನ ಹರಿವನ್ನು ಕಣ್ತುಂಬಿಕೊಂಡು ಕೆಲವರು ಫೋಟೊ ಕ್ಲಿಕ್ಕಿಸಿಕೊಂಡರೆ, ಯುವಕರ ಗುಂಪು ಹರಿಯುತ್ತಿರುವ ನೀರಿನಲ್ಲೇ ಸ್ನಾನ ಮಾಡಿ ಸಂಭ್ರಮಿಸುತ್ತಿದ್ದಾರೆ. 

ಈ ಕೆರೆಯನ್ನು ಮೊದಲು ನೀರಾವರಿಗೆ ಮಾತ್ರ ಬಳಸಿಕೊಳ್ಳುವುದು ವಾಡಿಕೆಯಾಗಿತ್ತು. 2009ರಲ್ಲಿ ಇದು ಭರ್ತಿಯಾದಾಗ, ಹಾವೇರಿ ನಗರದ ಜನತೆಗೆ ಕುಡಿಯುವ ನೀರಾಗಿ ಪೂರೈಸಲಾಯಿತು. ನಂತರದ ದಿನಗಳಲ್ಲಿ ₹ 9 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಿ, ಕರ್ಜಗಿ ನದಿಯಿಂದ ಪೈಪ್‌ಲೈನ್ ಮೂಲಕ ಕೆರೆ ತುಂಬಿಸುವ ಕಾರ್ಯವನ್ನೂ ಆರಂಭಿಸಲಾಯಿತು.

ಆ ನಂತರ ನಗರದ ಜನತೆಗೆ ನೀರು ಪೂರೈಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ಮೂಲಕ ಕೆರೆಯನ್ನು ನಗರಸಭೆಗೆ ಹಸ್ತಾಂತರಿಸಲಾಯಿತು. ಈ ಜಲಮೂಲವನ್ನೇ ನಂಬಿ 24X7 ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೆ ಮುಂದಾಗಿರುವ ನಗರಸಭೆಗೆ, ಈಗ ಕೆರೆ ತುಂಬಿ ಹರಿದಿರುವುದು ಬಲ ಸಿಕ್ಕಂತಾಗಿದೆ.

ಹೆಗ್ಗೇರಿ ಕೆರೆಯ ವಿವರ

ಕೆರೆಯ ವಿಸ್ತೀರ್ಣ; 682 ಎಕರೆ

ಕೆರೆಯ ಆಳ; 12 ಅಡಿ

ನೀರಿನ ಸಾಮರ್ಥ್ಯ; 0.2 ಟಿಎಂಸಿ

ಕೆರೆ ಅಭಿವೃದ್ಧಿಗೆ ಅನುದಾನ; ₹ 9 ಕೋಟಿ

Post Comments (+)