ಬುಧವಾರ, ಸೆಪ್ಟೆಂಬರ್ 18, 2019
25 °C
ಹಿಂದೂಗಳಿಂದಲೇ ಸಂಭ್ರಮದ ಆಚರಣೆ * ಭಾವೈಕ್ಯ ಮೆರೆಸುತ್ತಿದ್ದ ನಾಗೇನಹಳ್ಳಿ

ಮುಸ್ಲಿಮರೇ ಇಲ್ಲದ ಊರಲ್ಲೂ ಅದ್ದೂರಿ ಮೊಹರಂ!

Published:
Updated:
Prajavani

ನಾಗೇನಹಳ್ಳಿ (ಕುಮಾರಪಟ್ಟಣ): ಮೊಹರಂ ಎಂದಾಕ್ಷಣ ಮುಸ್ಲಿಮರ ಪವಿತ್ರ ಹಬ್ಬ ಎಂದು ತಲೆಗೆ ಬಂದುಬಿಡುತ್ತದೆ. ಆದರೆ, ಮುಸ್ಲಿಂ ಬಂಧುಗಳೇ ಇಲ್ಲದ ರಾಣೆಬೆನ್ನೂರು ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಹಿಂದೂಗಳೇ ನೂರಾರು ವರ್ಷಗಳಿಂದ ಊರ ಹಬ್ಬದಂತೆ ಮೊಹರಂ ಆಚರಿಸುತ್ತಾ ಬರುವ ಮೂಲಕ ಭಾವೈಕ್ಯ ಮೆರೆಯುತ್ತಿದ್ದಾರೆ.

ಸಾಂಪ್ರದಾಯಿಕವಾಗಿ ಐತಿಹಾಸಿಕ ಹಿನ್ನೆಲೆಯುಳ್ಳ ಮೊಹರಂ ಹಬ್ಬ ಆಚರಿಸುವ ಗ್ರಾಮಗಳಲ್ಲಿ ನಾಗೇನಹಳ್ಳಿ ಮಂಚೂಣಿಯಲ್ಲಿ ನಿಲ್ಲುತ್ತದೆ. ಹಬ್ಬವನ್ನು ಗ್ರಾಮ ದೇವತೆ ಹಬ್ಬಕ್ಕಿಂತ ಮಿಗಿಲಾಗಿ ಆಚರಿಸಲಾಗುತ್ತಿದೆ. ‘ಮೊದಲಿನಿಂದಲೂ ಇಲ್ಲಿ ಮುಸ್ಲಿಂ ಸಮುದಾಯದ ಕುಟುಂಬಗಳು ನೆಲೆ ನಿಂತಿಲ್ಲ. ಆದರೂ, ಎಲ್ಲಾ ವರ್ಗದ ಜನ ಕೂಡಿಕೊಂಡು ಎರಡು ದಿನ ಸಡಗರದಿಂದ ಮೊಹರಂ ಆಚರಿಸುತ್ತೇವೆ’ ಎನ್ನುತ್ತಾರೆ ಮುಖಂಡರಾದ ಸಿದ್ದನಗೌಡ ಪಾಟೀಲ.

‘ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ರಾಣೆಬೆನ್ನೂರಿನಿಂದ ಮೌಲ್ವಿಗಳನ್ನು ಕರೆತರುತ್ತೇವೆ. ಎಲ್ಲ ಕಾರ್ಯಗಳನ್ನು ಅವರೇ ನೆರವೇರಿಸುತ್ತಾರೆ. ಮೊದಲ ದಿನ ಮುಂಜಾನೆ ಸಕ್ಕರೆ ಹಂಚುವುದು, ದೀಡ್ ನಮಸ್ಕಾರ, ಎತ್ತಿನ ಮೆರವಣಿಗೆ ನಡೆಯಲಿದೆ. ಎರಡನೇ ದಿನ ಮಹಿಳೆಯರು ನದಿಗೆ ತೆರಳಿ ಕುಂಭದಲ್ಲಿ ನೀರು ತಂದ ಬಳಿಕ ಪೀರ ದೇವರ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ನಡೆಯುತ್ತದೆ. ಈ ವೇಳೆ ಭಕ್ತರು ಬೆಲ್ಲ, ತರಕಾರಿ, ಹಣ್ಣುಗಳನ್ನು ತೂರುತ್ತಾರೆ’ ಎಂದು ಅಣ್ಣಪ್ಪ ಗೋವಿಂದಗೌಡ್ರ ವಿವರಿಸಿದರು.

‘ಸಂಜೆ ವೇಳೆ ದೇವರು ಅಲೆಕುಣಿಯಲ್ಲಿ ಕೆಂಡ ತುಳಿಯುವ ಕಾರ್ಯ ವಿಶೇಷವಾಗಿದೆ ನಡೆಯುತ್ತದೆ. ನಾನಾ ಅವಾಂತರಗಳಿಗೆ ತುತ್ತಾದವರು ಹಾಗೂ ಅರಿಕೆ ಹೊತ್ತವರು, ಸಕ್ಕರೆ ತುಲಾಬಾರ ಹಾಕಿಸಿ ದೇವರಿಗೆ ಭಕ್ತಿ ಅರ್ಪಿಸುತ್ತಾರೆ. ಬಳಿಕ ಎಲ್ಲಾ ದೇವರ ಗುಡಿಗೆ ಹಾಗೂ ನದಿಗಳ ಬಳಿ ತೆರಳಿ ಗಂಗಾಪೂಜೆ ಮಾಡುತ್ತಾರೆ. ಆ ನಂತರ ಉತ್ಸವ ಕೊನೆಗೊಳ್ಳುತ್ತದೆ’ ಎಂದು ಹೇಳುತ್ತಾರೆ ಷಣ್ಮುಖನಗೌಡ್ರ ಸಣ್ಣಹನುಮನಗೌಡ್ರ.

ವರ್ಷಕ್ಕೊಮ್ಮೆ ನಡೆಯುವ ಮೊಹರಂ ಹಬ್ಬಕ್ಕೆ ರಾಣೆಬೆನ್ನೂರು, ಹಾವೇರಿ, ಹರಿಹರ, ಹರಪನಹಳ್ಳಿ, ಹಿರೇಕೆರೂರು, ಬ್ಯಾಡಗಿ, ರಟ್ಟೀಹಳ್ಳಿ, ಹೊನ್ನಾಳಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ವಿವಿಧ ಭಾಗಗಳಿಂದ ಬಂಧು ಬಳಗದವರು, ಭಕ್ತರು ಈ ಊರಿಗೆ ಆಗಮಿಸುತ್ತಾರೆ. ಉತ್ಸವದಲ್ಲಿ ಪಾಲ್ಗೊಂಡು, ಸವಿಯಾದ ಭೋಜನ ಸವಿದು ಹಬ್ಬದ ಸಂಭ್ರಮ ಹಂಚಿಕೊಳ್ಳುತ್ತಾರೆ.

ಧರ್ಮದ ಸಂಕೋಲೆ ಹಾಕಲ್ಲ

‘ದೇವನೊಬ್ಬ ನಾಮ ಹಲವು’ ಎಂಬ ನಂಬಿಕೆಯಲ್ಲಿ ಬದುಕುತ್ತಿರುವವರು ನಾವು. ದೇವರಿಗೆ ಜಾತಿ, ಧರ್ಮ ಸಂಕೋಲೆ ಹಾಕದೆ ಹಿಂದೂ–ಮುಸ್ಲಿಮರೆಲ್ಲಾ ಒಂದು ಎಂಬ ಭಾವನೆಯಿಂದ ಆಚರಣೆ ಮುಂದುವರಿಸಿಕೊಂಡು ಬಂದಿದ್ದೇವೆ. ಮುಸ್ಲಿಮರು ಇಲ್ಲವೆಂದು ಎಂದೂ ಮೊಹರಂ ಹಬ್ಬ ನಿಲ್ಲುವುದಿಲ್ಲ

ಹನುಮನಗೌಡ ಸಣ್ಣಹನುಮನಗೌಡ್ರ, ಗ್ರಾಮದ ಮುಖಂಡ

Post Comments (+)