ಸೋಮವಾರ, ಆಗಸ್ಟ್ 19, 2019
28 °C
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕುಟುಕಿದ ಎಚ್‌.ಕೆ.ಪಾಟೀಲ

ಶಿವಮೊಗ್ಗಕ್ಕೆ ಕೊಡುವಾಗ ನೋಟಿನ ಮೆಷಿನ್ ಇತ್ತಾ?

Published:
Updated:

ಹಾವೇರಿ: ‘ಉತ್ತರ ಕರ್ನಾಟಕಕ್ಕೆ ಬರ್ರೋ ಅಂತ ನಾವೆಲ್ಲ ಶಂಖ ಹೊಡ್ಕೊಂಡ ಮ್ಯಾಗ ಕೇಂದ್ರದಿಂದ ಅಮಿತ್‌ ಶಾ,  ನಿರ್ಮಲಾ ಸೀತಾರಾಮನ್‌ ಬಂದ್ರು. ವೈಮಾನಿಕ ಸಮೀಕ್ಷೆ ಅಂತ ಮಾಡ್ಕೊಂಡು ಹೋಗಿ ಐದ್ ದಿನ ಆದ್ರೂ, ಪರಿಹಾರದ ಬಗ್ಗೆ ಇನ್ನೂ ಮಾತಿಲ್ಲ. ಎಲ್ರೂ ಸೇರ್ಕೊಂಡು ಈಗ್ಲೂ ಪಾರ್ಟಿ ಮೀಟಿಂಗ್ ಮಾಡ್ಕೊಂಡು ಕುಂತಾರಾ...?’

ಕೆಪಿಸಿಸಿ ಪ್ರವಾಹ ಅಧ್ಯಯನ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಎಚ್‌.ಕೆ.ಪಾಟೀಲ ಕೇಂದ್ರದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು. ಬುಧವಾರ ಅವರು ಹಾವೇರಿಯ ನೆರೆಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.

‘ದೆಹಲಿ ಹಾಗೂ ಬೆಂಗಳೂರಲ್ಲಿ ಕೂತವರಿಗೆ, ವಿಮಾನದಿಂದ ಕೆಳಗೆ ಇಣುಕಿ ನೋಡುವವರಿಗೆ ಇಲ್ಲಿನ ಅನಾಹುತ ಸ್ಪಷ್ಟವಾಗಿ ಕಾಣಲ್ಲ. ಊಹಿಸಲೂ ಆಗದಷ್ಟು ಹಾನಿ ಉಂಟಾಗಿದೆ. ತ್ವರಿತವಾಗಿ ಪರಿಹಾರ ನೀಡಿ ಅಂತ ಮುಖ್ಯಮಂತ್ರಿ ಅವರನ್ನ ಕೇಳಿದರೆ, ‘ನಾವೇನ್ ನೋಟ್ ಪ್ರಿಂಟ್ ಮಾಡೋ ಮೆಷಿನ್ ಇಟ್ಟಿದೀವಾ’ ಎಂದಿದ್ದಾರೆ. ಮೊನ್ನೆ ಶಿವಮೊಗ್ಗಕ್ಕೆ ಹೋದಾಗ ₹ 50 ಕೋಟಿ ಪರಿಹಾರದ ಘೋಷಣೆ ಕೂಗಿದ್ರಲ್ವಾ. ಆಗ ನೋಟ್ ಪ್ರಿಂಟ್ ಮಾಡೋ ಮೆಷಿನ್ ಜೊತೆಗೇ ತಗೊಂಡು ಹೋಗಿದ್ರಾ’ ಎಂದು ಬಿ.ಎಸ್.ಯಡಿಯೂರಪ್ಪ ಅವರನ್ನು ಕುಟುಕಿದರು. 

‘ಮುಖ್ಯಮಂತ್ರಿ ಅವರೇ. ನೀವೊಬ್ಬರು ಪ್ರವಾಸ ಮಾಡಿದರೆ ಸಾಕೇ? 14–15 ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳನ್ನು ಹೊಂದಿದ್ದೀರಿ. ಅವರನ್ನೆಲ್ಲ ಒಂದೊಂದು ನೆರೆಪೀಡಿತ ಪ್ರದೇಶಕ್ಕೆ ನಿಯೋಜಿಸಿ. ವಾಸ್ತವ ಪರಿಸ್ಥಿತಿ ಏನೆಂಬುದು ಅವರಿಗೂ ಗೊತ್ತಾಗಲಿ. ಕೂತಲ್ಲೇ ಫೋಟೊ ನೋಡಿ ಪರಿಹಾರ ನಿಗದಿ ಮಾಡುವುದು ಬೇಡ’ ಎಂದೂ ಹೇಳಿದರು. 

‘ಉತ್ತರದ ಭಾಗದ ಬಹುತೇಕ ಗ್ರಾಮಗಳು ನಾಶವಾಗಿವೆ. ಪರಿಹಾರ ಕೇಂದ್ರದಿಂದ ವಾಪಸ್ ಹೋಗುವುದಕ್ಕೂ ಮನೆಗಳಿಲ್ಲದೆ ಸಂತ್ರಸ್ತರು ಕಂಗಾಲಾಗಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದಲೂ ಈ ಭಾಗದ ಕಡೆಗೆ ಮಾನವೀಯತೆ ಮಿಡಿಯುತ್ತಿದೆ. ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ಜತೆಗೆ ಗ್ರಾಮಗಳ ಪುನರ್‌ ನಿರ್ಮಾಣ ಮಾಡುವ ಜವಾಬ್ದಾರಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲಿದೆ’ ಎಂದರು. 

‘ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ದೊಡ್ಡ ಪ್ರಮಾಣದ ಪರಿಹಾರ ಹರಿಸಬೇಕು. ಬೆಳೆವಿಮೆ ತುಂಬುವ ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಬೇಕು. ಉನ್ನತ ಶಿಕ್ಷಣಕ್ಕಾಗಿ ಬರುವ ಪ್ರವಾಹಪೀಡಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ಶುಲ್ಕರಹಿತ ಪ್ರವೇಶ ನೀಡಬೇಕು. ಈ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಬೇಕು’ ಎಂದೂ ಪಾಟೀಲ ಒತ್ತಾಯಿಸಿದರು.

Post Comments (+)