ಗುರುವಾರ , ಡಿಸೆಂಬರ್ 12, 2019
16 °C
220 ಟನ್ ಗೋವಿನಜೋಳ ಖರೀದಿಸಿ ಕಣ್ಮರೆ, ಆರೋಪಿಯನ್ನು ಹಿಡಿದು ತಂದ ಸಿಇಎನ್

ಹಾವೇರಿಯ ಮೂರು ತಾಲ್ಲೂಕುಗಳ ರೈತರಿಗೆ ₹92 ಲಕ್ಷ ವಂಚನೆ!

ಎಂ.ಸಿ.ಮಂಜುನಾಥ Updated:

ಅಕ್ಷರ ಗಾತ್ರ : | |

ಹಾವೇರಿ: ಕ್ವಿಂಟಲ್‌ಗೆ ಹೆಚ್ಚುವರಿ ₹ 200 ಬೆಲೆ ನೀಡುವುದಾಗಿ ನಂಬಿಸಿ ಹಾನಗಲ್, ಬ್ಯಾಡಗಿ ಹಾಗೂ ನ್ಯಾಮತಿ ತಾಲ್ಲೂಕುಗಳ ರೈತರಿಂದ ಸುಮಾರು ₹ 92 ಲಕ್ಷ ಮೌಲ್ಯದ ಗೋವಿನಜೋಳ ಖರೀದಿಸಿ, ನಂತರ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದ ಲೋಕೇಶ್ ವಿರೂಪಾಕ್ಷಯ್ಯ ಎಂಬಾತ ಇದೀಗ ಸಿಇಎನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಈತನ ವಿರುದ್ಧ ಹಾನಗಲ್ ತಾಲ್ಲೂಕು ಶಂಕರಿಕೊಪ್ಪದ 13 ರೈತರು ಆ.19ರಂದು ಆಡೂರು ಠಾಣೆಗೆ ದೂರು ಕೊಟ್ಟಿದ್ದರು. ವಂಚನೆ ಮೊತ್ತ ಹೆಚ್ಚಿದ್ದ ಕಾರಣ ಪ್ರಕರಣ ಸಿಇಎನ್‌ಗೆ ವರ್ಗವಾಗಿತ್ತು. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಇನ್‌ಸ್ಪೆಕ್ಟರ್ ಚಿದಾನಂದ್ ನೇತೃತ್ವದ ತಂಡ ಶನಿವಾರ ಆರೋಪಿಯನ್ನು ಬಂಧಿಸಿತ್ತು. ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

‘ಲೋಕೇಶ್ ದಾವಣಗೆರೆಯ ನಿಟ್ಟುವಳ್ಳಿ ರಸ್ತೆಯ ನಿವಾಸಿ. ಆತನನ್ನು ಬಂಧಿಸಿದ್ದು ಹಾನಗಲ್ ಪ್ರಕರಣದಲ್ಲಿ. ಆದರೆ, ತಾನು ನ್ಯಾಮತಿ ಹಾಗೂ ಬ್ಯಾಡಗಿಯ ರೈತರಿಗೂ ವಂಚಸಿರುವುದಾಗಿ ಆತನೇ ನ್ಯಾಯಾಲಯದಲ್ಲಿ ಒಪ್ಪಿಕೊಂಡ. ಲೋಕೇಶ್‌ನ ಆರು ಮಂದಿ ಕುಟುಂಬ ಸದಸ್ಯರ ಮೇಲೂ ರೈತರು ದೂರು ಕೊಟ್ಟಿದ್ದು, ಅವರೆಲ್ಲ ಜಾಮೀನು ಪಡೆದುಕೊಂಡಿದ್ದಾರೆ. ಗೋವಿನಜೋಳ ಮಾರಿದ ಹಣ ಎಲ್ಲಿಟ್ಟಿದ್ದಾನೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಸಿಇಎನ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

80 ಕುಟುಂಬಗಳು ಕಂಗಾಲು:

ಹಾನಗಲ್‌ ತಾಲ್ಲೂಕಿನ ಶಂಕರಿಕೊಪ್ಪ, ಆಡೂರು, ಬಸಾಪುರ ಗ್ರಾಮದ ಸುಮಾರು 80 ರೈತ ಕುಟುಂಬಗಳಿಗೆ ಸೇರಿದ 220 ಟನ್ ಗೋವಿನಜೋಳವನ್ನು ಆರೋಪಿ ಮೇ ತಿಂಗಳಲ್ಲಿ ಖರೀದಿಸಿದ್ದ. ಅದಕ್ಕೆ ಹಣ ನೀಡುವುದಾಗಿ ಭರವಸೆ ನೀಡುತ್ತಲೇ ಬಂದಿದ್ದ ಆತ, ಕೊನೆಗೊಮ್ಮೆ ‘ನನ್ನ ವ್ಯವಹಾರದಲ್ಲಿ ನಷ್ಟವಾಗಿದೆ. ಸದ್ಯಕ್ಕೆ ಹಣ ಕೊಡಲು ಆಗುವುದಿಲ್ಲ’ ಎಂದಿದ್ದ.

ಇದರಿಂದ ಕಂಗಾಲಾದ ರೈತರು, ತಮ್ಮಿಂದ ಆರೋಪಿಗೆ ಗೋವಿನಜೋಳ ಕೊಡಿಸಿದ್ದ ಆತನ ಸಂಬಂಧಿ ಹೇಮಣ್ಣ ಬೆಣಗೇರಿ ಅವರ ಮನೆ ಬಾಗಿಲಿಗೆ ಹೋಗಲಾರಂಭಿಸಿದರು. ಈ ಬೆಳವಣಿಗೆಯಿಂದ ಬೇಸರಗೊಂಡ ಹೇಮಣ್ಣ, ‘ಹಣ ಕೊಡುವವರೆಗೂ ನಿನ್ನನ್ನು ಬಿಡುವುದಿಲ್ಲ’ ಎಂದು ಲೋಕೇಶ್‌ನನ್ನು ಎರಡು ತಿಂಗಳು ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದರು. ಕೊನೆಗೆ ಆರೋಪಿ ಅವರ ಮನೆಯಿಂದಲೂ ತಪ್ಪಿಸಿಕೊಂಡಿದ್ದ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಹೇಮಣ್ಣ, ‘2018ರ ಅಕ್ಟೋಬರ್‌ನಿಂದ ನಾನು ಸಹ ಲೋಕೇಶ್ ಬಳಿ ವ್ಯವಹಾರ ಮಾಡುತ್ತಿದ್ದೇನೆ. ಆರಂಭದಲ್ಲಿ ಗೋವಿನಜೋಳಕ್ಕೆ ಉತ್ತಮ ಬೆಲೆಗೆ ಕೊಡುತ್ತಿದ್ದ. ಇದನ್ನು ಕಂಡ ಊರಿನ ರೈತರು, ತಮ್ಮ ಬೆಳೆಯನ್ನು ಆತನಿಗೇ ಕೊಡುವುದಾಗಿ ಮುಂದೆ ಬಂದರು. ಪರಿಚಯಸ್ಥರು ಎಂಬ ಕಾರಣಕ್ಕೆ ಅದಕ್ಕೆ ಒಪ್ಪಿಕೊಂಡೆ. ನಂತರ ಲೋಕೇಶ್ 8 ಲಾರಿಗಳಲ್ಲಿ ಗೊವಿನಜೋಳದ ಮೂಟೆಗಳನ್ನು ತುಂಬಿಕೊಂಡು ಹೋಗಿದ್ದ’ ಎಂದು ವಿವರಿಸಿದರು.

‘ಅದರಲ್ಲಿ ನನಗೂ ₹ 17 ಲಕ್ಷ ಬರಬೇಕು. ಇತ್ತೀಚೆಗೆ ನೆರೆ ಬಂದು ಎಲ್ಲ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಭೂಮಿ ಹಾಳಾಗಿರುವುದರಿಂದ ಜಮೀನು ಸ್ವಚ್ಛ ಮಾಡಿಕೊಳ್ಳಲು ಹಾಗೂ ಮರುಬಿತ್ತನೆಗೆ ಎಲ್ಲರಿಗೂ ಈಗ ದುಡ್ಡಿನ ಅವಶ್ಯಕತೆ ಇದೆ. ನನ್ನ ಹಣವನ್ನು ಬದಿಗಿಟ್ಟು, ಕನಿಷ್ಠ ಆ ರೈತರಿಗಾದರೂ ಆರೋಪಿ ಹಣ ಕೊಡಬೇಕು’ ಎಂದು ಹೇಮಣ್ಣ ಮನವಿ ಮಾಡಿದರು.

ಇದೇ ನೋವಿನಲ್ಲಿ ತಾಯಿ ಸತ್ತರು 

‘ದಿನ ಬೆಳಗಾದರೆ ರೈತ ಕುಟುಂಬಗಳು ಮನೆ ಬಾಗಿಲಿಗೆ ಬರುತ್ತಿವೆ. ಕೆಲವರಿಗೆ ಸಮಾಧಾನ ಮಾಡಿ, ಇನ್ನೂ ಕೆಲವರಿಗೆ ನಾನೇ ಕೈ–ಕಾಲು ಹಿಡಿದು ಕ್ಷಮೆಯಾಚಿಸುತ್ತಿದ್ದೇನೆ. ನನ್ನ ಈ ಪರಿಸ್ಥಿತಿ ನೋಡಿ ಕೊರಗುತ್ತಿದ್ದ ತಾಯಿ, ಅದೇ ನೋವಿನಲ್ಲಿ ನಾಲ್ಕು ದಿನಗಳ ಹಿಂದೆ ನಿಧನರಾದರು. ರೈತರಿಗೆ ಹಣ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. ದಿಕ್ಕೇ ತೋಚುತ್ತಿಲ್ಲ’ ಎನ್ನುತ್ತ ಹೇಮಣ್ಣ ದುಃಖತಪ್ತರಾದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು