ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ವಿದ್ಯಾರ್ಥಿಗಳ ಖಾತೆಗೆ ಅಕ್ರಮ ಹಣ ಸಂದಾಯ

ನಗದು ವ್ಯವಹಾರದಲ್ಲಿ ಲೋಪದೋಷ: ಆಂತರಿಕ ತನಿಖಾ ವರದಿಯಲ್ಲಿ ಬಹಿರಂಗ
Last Updated 19 ಜೂನ್ 2022, 19:30 IST
ಅಕ್ಷರ ಗಾತ್ರ

ಹಾವೇರಿ: ದೇವಗಿರಿ ಸಮೀಪದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಅಕೌಂಟಿನಲ್ಲಿ ಸಾಕಷ್ಟು ಹಣವಿಲ್ಲದ ಕಾರಣ, ವಿದ್ಯಾರ್ಥಿಗಳಿಗೆ ನೀಡಿದ ಸ್ಕಾಲರ್‌ಶಿಪ್‌ ಚೆಕ್‌ಗಳು ಬೌನ್ಸ್‌ ಆಗಿರುವುದು ಒಂದು ಕಡೆಯಾದರೆ, ಆಯ್ದ ವಿದ್ಯಾರ್ಥಿಗಳ ಅಕೌಂಟುಗಳಿಗೆ ಲಕ್ಷಗಟ್ಟಲೇ ಹಣ ಅಕ್ರಮವಾಗಿ ಸಂದಾಯವಾಗಿರುವುದು ಬೆಳಕಿಗೆ ಬಂದಿದೆ.

ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ಸಾಲ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂದುವಿದ್ಯಾರ್ಥಿಗಳಿಂದ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ‘ಆಂತರಿಕ ತನಿಖೆ’ ನಡೆಸಲಾಗಿತ್ತು. ನಗದು ವ್ಯವಹಾರದಲ್ಲಿ ಲೋಪದೋಷಗಳು ಕಂಡುಬಂದಿರುವುದನ್ನು ತನಿಖಾ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಬ್ಯಾಂಕಿನ ಸ್ಟೇಟ್‌ಮೆಂಟ್‌ ಪರಿಶೀಲಿಸಿದಾಗ ಖಾತೆಯಲ್ಲಿ ಜಮೆಯಾದ ಮೊತ್ತ ಮತ್ತು ವಿತರಣೆಯಾದ ಮೊತ್ತವು ಎಲ್ಲಿಯೂ ತಾಳೆಯಾಗುತ್ತಿಲ್ಲ. ಸ್ಕಾಲರ್‌ಶಿಪ್‌ ಖಾತೆಯಲ್ಲಿ ಮಂಜೂರಾದ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ವಿದ್ಯಾರ್ಥಿಗಳಿಗೆ ವಿತರಿಸಿರುವುದು ಕಂಡುಬಂದಿದೆ. ಸ್ಕಾಲರ್‌ಶಿಪ್‌ ಮತ್ತು ಲೋನ್‌ ಖಾತೆಗಳ ಸಮಗ್ರ ಪರಿಶೀಲನೆ ಅಗತ್ಯವಿದೆ ಎಂದು ಆಂತರಿಕ ತನಿಖಾ ವರದಿಯಲ್ಲಿ ತಿಳಿಸಲಾಗಿದೆ.

ಮಧು ಎನ್ನುವ ವಿದ್ಯಾರ್ಥಿಗೆ ಕಾಲೇಜಿನ ಸ್ಕಾಲರ್‌ಶಿಪ್‌ ಖಾತೆಯಿಂದ ₹79,840 ಮತ್ತು ₹25,000 ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಲೋನ್‌ ಖಾತೆಯಿಂದ ₹15,000 ಸೇರಿದಂತೆ ಒಟ್ಟು ₹1.19 ಲಕ್ಷವನ್ನು ಪಾವತಿಸಲಾಗಿದೆ. ಸತೀಶ ಎಸ್‌.ದೊಡ್ಡಮನಿ ಎಂಬ ವಿದ್ಯಾರ್ಥಿಗೆ ₹1.01 ಲಕ್ಷ ಹಾಗೂ ಸುರೇಶ ಎಚ್‌.ಕಂಬಳಿ ಎಂಬ ವಿದ್ಯಾರ್ಥಿಗೆ ₹1.30 ಲಕ್ಷ ಪಾವತಿಸಲಾಗಿದೆ.

ವಹಿವಾಟು ಸಂಶಯಾಸ್ಪದ:10 ವರ್ಷಗಳ ಪರೀಕ್ಷಾ ವಿಭಾಗಕ್ಕೆ ಸಂಬಂಧಪಟ್ಟ ಬ್ಯಾಂಕ್‌ ಖಾತೆಗಳಲ್ಲಿ ನಮೂದಿಸಿದ ವಹಿವಾಟುಗಳು ಸಂಶಯಾಸ್ಪದವಾಗಿವೆ. ಚೆಕ್‌ ಮೂಲಕ ಮಾಡಿದ ವಹಿವಾಟು, ಚೆಕ್‌ ಲೀಫ್‌ ಅನ್ನು ಅನುಕ್ರಮವಾಗಿ ಬಳಸಿಲ್ಲ ಎಂಬುದು ಪತ್ತೆಯಾಗಿದೆ. ದೊಡ್ಡ ಮೊತ್ತಗಳು ನಗದು ರೂಪದಲ್ಲಿ ಜಮೆ ಮತ್ತು ವಾಪಸಾತಿ ವಹಿವಾಟು ಆಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ದಾಖಲೆಗಳ ಪ್ರಕಾರ ಒಟ್ಟು 6 ಖಾತೆಗಳು ಪರೀಕ್ಷೆ ಮತ್ತು ಮರುಮೌಲ್ಯಮಾಪನ ಹೆಸರಿನ ಅಡಿಯಲ್ಲಿ ಎಸ್‌ಬಿಐ ಬ್ಯಾಂಕಿನಲ್ಲಿ ತೆರೆಯಲಾಗಿರುತ್ತದೆ. 6 ಖಾತೆಗಳ ಪೈಕಿ 4 ಖಾತೆಗಳು ಬೆಳಗಾವಿವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಉಪಯೋಗಿಸಲಾಗುತ್ತಿದ್ದು, ಇನ್ನುಳಿದ 2 ಖಾತೆಗಳನ್ನು ಬೇರೆ ಉದ್ದೇಶಕ್ಕೆ ಬಳಸುತ್ತಿರುವುದು ಕಂಡು ಬಂದಿದೆ.

ಲೆಕ್ಕ ಪರಿಶೋಧನೆಗೆ ತೊಡಕು: ಗುರಪ್ಪ ಸುಂಕದವರ ಮತ್ತು ಅನಿಲಕುಮಾರ ಕಟಿಗಾರ ಅವರು ಸರಿಯಾದ ಮಾಹಿತಿ ಮತ್ತು ಸೂಚಿಸಿದ ದಾಖಲಾತಿಗಳನ್ನು ನೀಡದೇ ಇದ್ದುದರಿಂದ ಖಾತೆಗಳ ಲೆಕ್ಕ ಪರಿಶೋಧಿಸಲು ಅನಾನುಕೂಲವಾಗಿರುತ್ತದೆ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.

ಪರೀಕ್ಷಾ ಶುಲ್ಕ ಕಟ್ಟಲು ಹಣವಿಲ್ಲ!

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ 2022ರ ಮೇ ತಿಂಗಳಲ್ಲಿ ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಿಂದ ₹13.50 ಲಕ್ಷ ಪರೀಕ್ಷಾ ಶುಲ್ಕ ರವಾನಿಸಬೇಕಿತ್ತು. ಆದರೆ ಕಾಲೇಜಿನ ಪರೀಕ್ಷಾ ವಿಭಾಗದ ಖಾತೆಯಲ್ಲಿ ಕೇವಲ ₹4.57 ಲಕ್ಷ ಇರುವುದರಿಂದ ಬಾಕಿ ₹8.92 ಲಕ್ಷ ಹಣದ ಕೊರತೆ ಕಂಡುಬಂದಿದೆ. ವಿದ್ಯಾರ್ಥಿಗಳು ಕಟ್ಟಿದ ಪರೀಕ್ಷಾ ಶುಲ್ಕ ದುರುಪಯೋಗವಾಗಿರುವುದೇ ಹಣದ ಕೊರತೆಗೆ ಕಾರಣ ಎನ್ನಲಾಗುತ್ತಿದೆ.

‘ಪ್ರಜಾವಾಣಿ’ಯಲ್ಲಿ ‘ವಿದ್ಯಾಸಿರಿ ಸ್ಕಾಲರ್‌ಶಿಪ್‌ಗೆ ಕನ್ನ!’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾದ ನಂತರ ತಾಂತ್ರಿಕ ಶಿಕ್ಷಣ ಇಲಾಖೆಯ ಮೂವರು ಸದಸ್ಯರನ್ನೊಳಗೊಂಡ ತನಿಖಾ ತಂಡ ಕಾಲೇಜಿಗೆ ಭೇಟಿ ನೀಡಿ, ಕ್ರಮ ಕೈಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT