ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಹೆಚ್ಚಳಕ್ಕೆ ದೃಢ ನಿರ್ಧಾರವಿರಲಿ: ಜಿಲ್ಲಾ ಪಂಚಾಯ್ತಿ ಸಿಇಒ ರಮೇಶ ದೇಸಾಯಿ

Last Updated 24 ಜನವರಿ 2020, 12:49 IST
ಅಕ್ಷರ ಗಾತ್ರ

ಹಾವೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳ ಫಲಿತಾಂಶ ಹೆಚ್ಚಿಸಲು ಶಾಲೆಯ ಮುಖ್ಯಶಿಕ್ಷಕರು ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ರಮೇಶ ದೇಸಾಯಿ ಸಲಹೆ ನೀಡಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಪ್ರೌಢಶಾಲೆ ಮುಖ್ಯಶಿಕ್ಷಕರ ಸಭೆ ಉದ್ಘಾಟಿಸಿ ಮಾತನಾಡಿದರು.

ಫಲಿತಾಂಶ ಹೆಚ್ಚಳಕ್ಕಾಗಿ ಮುಖ್ಯಶಿಕ್ಷಕರು ಹಾಗೂ ಮಕ್ಕಳ ಮೇಲೆ ನಿಗಾ ವಹಿಸಲಾಗುತ್ತಿದೆ. ನಕಲು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿಯೇ ಜಿಲ್ಲಾ ಮಟ್ಟದಲ್ಲಿ 20 ವಿಶೇಷ ತಂಡವನ್ನು ರಚನೆ ಮಾಡಲಾಗುವುದು ಎಂದರು.

ಮಕ್ಕಳು ವಿಜ್ಞಾನ, ಗಣಿತ, ಇಂಗ್ಲಿಷ್‌ ವಿಷಯಗಳನ್ನು ಕಠಿಣ ಎಂದು ಭಾವಿಸುತ್ತಾರೆ. ಈ ವಿಷಯಗಳನ್ನು ಸರಳವಾಗಿ ಹಾಗೂ ಮನದಟ್ಟಾಗುವಂತೆ ಹೇಳಿಕೊಡಬೇಕು. ಸಹ ಶಿಕ್ಷಕರು ಕೂಡ ಜವಾಬ್ದಾರಿ ಹೊರಬೇಕು ಎಂದರು.

ಕಡಿಮೆ ಅಂಕ ಪಡೆಯುವ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಯಾವ ವಿಷಯವನ್ನು ಹೇಗೆ ತಿಳಿದುಕೊಳ್ಳಬೇಕು. ಓದಿರುವುದನ್ನು ಯಾವ ರೀತಿ ಬರೆಯಬೇಕು. ಪಾಠಗಳನ್ನು ಕಥೆ ರೂಪದಲ್ಲಿ ಹೇಳಿಕೊಡುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಸಲಹೆ ನೀಡಿದರು.

ಪರೀಕ್ಷೆಯಲ್ಲಿ ನಕಲು ತಡೆಯಲು ಶಾಲೆಗಳಲ್ಲಿ ಹಾಳಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ದುರಸ್ತಿ ಮಾಡಿಸಲು ಮುಖ್ಯಶಿಕ್ಷಕರು ಮುಂದಾಗಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ ಮಾತನಾಡಿ, ಪರೀಕ್ಷೆಗಳಲ್ಲಿ ಮಕ್ಕಳಿಗೆ ಎಷ್ಟು ಅಂಕ ಪಡೆಯುವ ಸಾಮರ್ಥ್ಯವಿರುತ್ತದೆಯೋ, ಅಷ್ಟು ಅಂಕಗಳನ್ನು ಮಾತ್ರ ನೀಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಅಂಕ ನೀಡಿ ಅವರ ಭವಿಷ್ಯಕ್ಕೆ ಕುತ್ತು ತರಬಾರದು ಎಂದರು.

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಿಕ್ಷಕರಾಗಲಿ ಅಥವಾ ಮಕ್ಕಳಾಗಲಿ ಅಡ್ಡದಾರಿ ಹಿಡಿಯದೆರಾಜಮಾರ್ಗದಲ್ಲಿಯೇ ಸಾಗಿ ಉತ್ತಮ ಫಲಿತಾಂಶ ನೀಡಬೇಕು. ಸಮಯ ಕಡಿಮೆ ಇದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿವೃತ್ತ ನಿರ್ದೇಶಕ ಎಂ.ಡಿ.ಬಳ್ಳಾರಿ ಮಾತನಾಡಿ, ಎಸ್ಸೆಸ್ಸೆಲ್ಸಿ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಹಂತದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಅದರಲ್ಲಿ ಕಡಿಮೆ ಅಂಕ ಪಡೆದರೆ ಅದಕ್ಕೆ ಕಾರಣವೇನು, ಉತ್ತರ ಬರೆಯುವಲ್ಲಿ ವಿದ್ಯಾರ್ಥಿಗಳು ಮಾಡುತ್ತಿರುವ ತಪ್ಪನ್ನು ತೋರಿಸಿ ಸರಿಯಾದ ಮಾರ್ಗದರ್ಶನ ನೀಡಬೇಕು. ಶಿಕ್ಷಕರಿಗೆ ನೀಡಲಾದ ತರಬೇತಿಗಳನ್ನು ತರಗತಿಯಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಡಾ.ಎಚ್‌.ಎಫ್‌.ಕಟ್ಟಿಮನಿ ಪ್ರತಿಷ್ಠಾನದಿಂದ ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಸ್‌.ಎಸ್‌.ಅಡಿಗ,ಡಯಟ್‌ ಪ್ರಾಚಾರ್ಯ ಜಿ.ಎಂ.ಬಸವಲಿಂಗಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್‌.ಪಾಟೀಲ, ಸಿದ್ದಲಿಂಗಯ್ಯ, ಶ್ರೀನಿವಾಸ, ವಿಷಯ ಪರಿವೀಕ್ಷಕ ಆರ್‌.ಮಂಜಪ್ಪ, ಈರಪ್ಪ ಲಮಾಣಿ, ಡಾ.ಎಚ್‌.ಎಫ್‌.ಕಟ್ಟಿಮನಿ ಪ್ರತಿಷ್ಠಾನದ ಗೌರವ ಸಂಚಾಲಕ ಎಸ್‌.ಬಿ.ಕೊಡ್ಲಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT