ಭಾನುವಾರ, ನವೆಂಬರ್ 17, 2019
24 °C
ಬೆಂಗಳೂರು ಕಾಲೇಜು ಉಪನ್ಯಾಸಕನ ಹಣ; ಹಾವೇರಿಯಲ್ಲಿ ಇತ್ಯರ್ಥವಾದ ಪ್ರಕರಣ

ಕೈತಪ್ಪುತ್ತಿದ್ದ ವಿಮೆ ಹಣ ಕೊನೆಗೂ ಕೈಸೇರಿತು!

Published:
Updated:
Prajavani

ಹಾವೇರಿ: ಅನಾರೋಗ್ಯದಿಂದ ಅಸುನೀಗಿದ ಬೆಂಗಳೂರಿನ ‘ಆರ್‌ಪಿಎ’ ಪಥಮ ದರ್ಜೆ ಕಾಲೇಜಿನ ಉಪನ್ಯಾಸಕರೊಬ್ಬರ ವಿಮಾ ಕಂತಿನ ಹಣವನ್ನು ಹಾವೇರಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಮೃತರ ಪತ್ನಿಯ ಕೈಸೇರುವಂತೆ ಮಾಡಿದೆ.

‘ವಿಮೆ ಹಣ ಕೊಡಲು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಅಧಿಕಾರಿಗಳು ಸತಾಯಿಸುತ್ತಿದ್ದಾರೆ’ ಎಂದು ಆರೋಪಿಸಿ ಮೃತರ ಪತ್ನಿ ಹಾವೇರಿಯ ಶಿವಾಜಿನಗರ ನಿವಾಸಿ ಅಕ್ಷತಾ ಕೆಳಗಿನಮನಿ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ಪರವಾಗಿ ವಕೀಲ ಎಸ್‌.ಎಂ.ಅಂಗಡಿ ವಕಾಲತ್ತು ವಹಿಸಿದ್ದರು.

ವಾದ–ಪ್ರತಿವಾದ ಆಲಿಸಿದ ಗ್ರಾಹಕ ವೇದಿಕೆ ಅಧ್ಯಕ್ಷರಾದ ಸುನಂದಾ ದುರಗೇಶ, ‘ಗಂಡನ ಮರಣದ ನಂತರ ವಿಮೆ ಹಣ ಪಡೆಯಲು ಅಕ್ಷತಾ ಜವಾಬ್ದಾರರಾಗಿದ್ದಾರೆ. ಹೀಗಾಗಿ, ವಿಮೆ ಹಣ ₹ 1 ಲಕ್ಷ, ಅದಕ್ಕೆ ಶೇ 6ರಷ್ಟು ಬಡ್ಡಿ, ಪರಿಹಾರ ₹ 10 ಸಾವಿರ ಹಾಗೂ ದಾವೆ ವೆಚ್ಚ ₹ 5 ಸಾವಿರ ಕೊಡಬೇಕು. ತಿಂಗಳೊಳಗೆ ಈ ಪರಿಹಾರ ಕೊಡದಿದ್ದರೆ ಶೇ 9ರ ಬಡ್ಡಿ ಪಾವತಿಸಬೇಕು’ ಎಂದು ಎಚ್ಚರಿಸಿ ಆದೇಶ ಹೊರಡಿಸಿದರು.    

ತುಂಬಾ ಹಿಂಸೆಯಾಗಿದೆ:

‘ನ್ಯಾಯಯುತವಾಗಿ ಕೊಡಬೇಕಾದ ಹಣವನ್ನೂ ಮರಳಿಸದೆ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಹೀಗಾಗಿ, ನಿಗಮದ ಬೆಂಗಳೂರು ಘಟಕದ ವ್ಯವಸ್ಥಾಪಕರು ಹಾಗೂ ಹಾವೇರಿ ಶಾಖಾ ವ್ಯವಸ್ಥಾಪಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನನ್ನನ್ನು ಚಿಂತೆಗೆ ಈಡಾಗುವಂತೆ ಮಾಡಿದ್ದಕ್ಕೆ ₹ 25 ಸಾವಿರ ಪರಿಹಾರ ಕೊಡಿಸಬೇಕು’‌ ಎಂದೂ ಅಕ್ಷತಾ ಮನವಿ ಮಾಡಿದ್ದರು.

‘ನನ್ನ ಪತಿ ಎಚ್‌.ಎಫ್‌.ವಿಜಯ್‌ಕುಮಾರ್. ಅವರು 2015ರ ಜನವರಿಯಿಂದ ಗ್ರೂಪ್ ಇನ್ಶುರೆನ್ಸ್ ವ್ಯಾಪ್ತಿಗೆ ಒಳಪಟ್ಟಿದ್ದರು. ಕಾಲೇಜಿನ ಪ್ರಾಚಾರ್ಯರು ಹಾಗೂ ಇತರೆ ಬೋಧಕರೂ ವಿಮೆ ಮಾಡಿಸಿದ್ದರು. ಎಲ್ಲರ ವೇತನದಲ್ಲೂ ಪ್ರತಿ ಮೂರು ತಿಂಗಳಿಗೊಮ್ಮೆ ವಿಮಾ ಕಂತು ಎಂದು ₹ 100 ಕಡಿತವಾಗುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳೂ ಇವೆ’ ಎಂದು ಅವರು ಹೇಳಿದರು.

‘2016 ಆ.31ರಂದು ಗಂಡ ಅನಾರೋಗ್ಯದಿಂದ ಅಸುನೀಗಿದರು. ಹೀಗಾಗಿ, ವಿಮೆ ಪಡೆಯಲು ಡೆತ್‌ ಕ್ಲೇಮ್ ಅರ್ಜಿ ಕಳುಹಿಸುವಂತೆ ಕೋರಿದೆ. ಈ ಸಂಬಂಧ ಹಲವು ಸಲ ಕರೆ ಮಾಡಿದರೂ ಅಧಿಕಾರಿಗಳು ಉದಾಸೀನದ ಮಾತುಗಳನ್ನಾಡಿದರು. 2018ರ ಜುಲೈ 25ರಂದು ವಕೀಲರ ಮೂಲಕ ನೋಟಿಸ್ ಸಹ ಕಳುಹಿಸಿದ್ದೆ. ಅದಕ್ಕೂ ಉತ್ತರ ಬಾರದ ಕಾರಣ ನ್ಯಾಯಾಲಯದಲ್ಲಿ ದಾವೆ ಹೂಡಿದೆ’ ಎಂದೂ ವಿವರಿಸಿದರು. 

ಸೇವೆ ಸ್ಥಗಿತವಾಗಿತ್ತಂತೆ:

‘ಗ್ರೂಪ್ ಇನ್ಶುರೆನ್ಸ್ ಸೇವೆ ಅಸ್ತಿತ್ವದಲ್ಲೇ ಇಲ್ಲ ಎಂದೂ ಎಲ್‌ಐಸಿ ಅಧಿಕಾರಿಗಳು ಅರ್ಜಿಗೆ ಹಿಂಬರಹ ಬರೆದುಕೊಟ್ಟರು. ಸೇವೆಯೇ ಇಲ್ಲವೆಂದ ಮೇಲೆ ಯಾವ ಆಧಾರದ ಮೇಲೆ ಗಂಡನ ವೇತನದಲ್ಲಿ ಹಣ ಕಡಿತ ಮಾಡಲಾಗುತ್ತಿತ್ತು. ಈ ಕುರಿತು ಪ್ರಾಚಾರ್ಯರೂ ಸ್ಪಷ್ಟನೆ ನೀಡಬೇಕು. ಪತಿ ನಮ್ಮ ಭವಿಷ್ಯದ ಒಳಿತಿಗಾಗಿ ಕೂಡಿಟ್ಟಿದ್ದ ಹಣವನ್ನು ವಾಪಸ್ ಕೊಡಿಸಬೇಕು’ ಎಂದೂ ಅಕ್ಷತಾ ದೂರಿನಲ್ಲಿ ಮನವಿ ಮಾಡಿದ್ದರು.

ಸ್ವೀಕೃತಿ ಪತ್ರವಿರಲಿಲ್ಲ: ‘ಗ್ರೂಪ್ ಇನ್ಶುರೆನ್ಸ್ ಸ್ಥಗಿತ ಮಾಡಿರುವ ಕುರಿತು ಪ್ರಾಚಾರ್ಯರಿಗೆ ಹಿಂದೆಯೇ ಪತ್ರ ಬರೆದಿದ್ದಾಗಿ ಎಲ್‌ಐಸಿ ಅಧಿಕಾರಿಗಳು ಹೇಳಿದರು. ಈ ಕುರಿತು ಪ್ರಾಚಾರ್ಯರನ್ನು ವಿಚಾರಿಸಿದರೆ, ‘ಅಂತಹ ಯಾವುದೇ ಪತ್ರ ಬಂದಿಲ್ಲ’ ಎಂದರು. ಪತ್ರ ತಲುಪಿಸಿದ್ದರು ಎಂಬುದಕ್ಕೆ ಸ್ವೀಕೃತಿ ಪತ್ರವೂ ಇರಲಿಲ್ಲ. ಅಧಿಕಾರಿಗಳ ಸೇವಾ ನ್ಯೂನತೆ ಸಾಬೀತಾದ ಕಾರಣ, ಸಂತ್ರಸ್ತೆಗೆ ವಿಮೆ ಹಣವನ್ನು ಕಂಪನಿಯೇ ನೀಡಬೇಕು’ ಎಂದು ಸುನಂದಾ ದುರುಗೇಶ ಹೇಳಿದರು.  

ಪ್ರತಿಕ್ರಿಯಿಸಿ (+)