ಬುಧವಾರ, ಮೇ 27, 2020
27 °C
ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ

ಜನತಾ ಕರ್ಫ್ಯೂ: ಹಾವೇರಿ ಜಿಲ್ಲೆಯ ಎಲ್ಲೆಡೆ ಸಂಪೂರ್ಣ ಸ್ತಬ್ಧ

ಪ‍್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನತಾ ಕರ್ಫ್ಯೂ ಕರೆಗೆ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ.

ಯಾಲಕ್ಕಿ ಕಂಪಿನ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕು, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಹೀಗಾಗಿ ಇಡೀ ಜಿಲ್ಲೆ ಹೊದ್ದು ಮಲಗಿದಂತೆ ಭಾಸವಾಗುತ್ತಿದೆ.

ಭಾನುವಾರ ಮುಂಜಾನೆ ಪತ್ರಿಕೆ ವಿತರಕರು, ಹಾಲು ಹಾಕುವವರು ಬಿಟ್ಟರೆ ರಸ್ತೆ, ಜನವಸತಿ ಪ್ರದೇಶಗಳಲ್ಲಿ ಯಾರೊಬ್ಬರೂ ಕಾಣಲಿಲ್ಲ. ಬಹಳಷ್ಟು ಮನೆಯವರು ಬಾಗಿಲನ್ನೇ ತೆರೆದಿರಲಿಲ್ಲ. ದೈನಂದಿನ ವಾಕಿಂಗ್ (ವಾಯು ವಿಹಾರ) ಕೂಡ ಸ್ಥಗಿತಗೊಂಡಿತ್ತು. ಹಾಲಿನ ಅಂಗಡಿಗಳು ತೆರೆದಿದ್ದರೂ ಖರೀದಿಸುವವರ ಸಂಖ್ಯೆ ಕಡಿಮೆಯಾಗಿತ್ತು.

ರಸ್ತೆಗಳು ನಿರ್ಜನವಾಗಿದ್ದು, ವಾಹನಗಳ ಓಡಾಟವೂ ಕಡಿಮೆ ಇತ್ತು. ಅಂಗಡಿ–ಮುಂಗಟ್ಟು ಮುಚ್ಚಿದ್ದು, ಬಸ್ ನಿಲ್ದಾಣ ಬಸ್‌ಗಳು ಹಾಗೂ ಜನರ ಸುಳಿವು ಇಲ್ಲದೇ ಬಿಕೋ ಎನ್ನುತ್ತಿದ್ದವು. ರೈಲು ನಿಲ್ದಾಣವೂ ಕಳೆಗುಂದಿದೆ.  ಬಸವೇಶ್ವರನಗರದ ವಾರದ ಸಂತೆಯೂ ರದ್ದುಗೊಂಡಿದ್ದು, ಅದರ ಕುರುಹೇ ಇಲ್ಲದಂತಾಗಿತ್ತು. ಲಾಲ್‌ಬಹದ್ಧೂರ ಶಾಸ್ತ್ರಿ ಮಾರುಕಟ್ಟೆಯೂ ಸಂಪೂರ್ಣ ಬಂದ್‌ ಆಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾ ಪಂಚಾಯ್ತಿ ಆಡಳಿತ ಶನಿವಾರವೇ ಆಯಾ ಗ್ರಾಮ ಪಂಚಾಯ್ತಿಯಿಂದ ಡಂಗುರ ಹೊಡೆಸಿ ಮುಂಜಾನೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜನತಾ ಕರ್ಫ್ಯೂ ಇದ್ದು, ಯಾರೂ ಹೊರಗೆ ಬಾರದಂತೆ ಮನವಿ ಮಾಡಿದ್ದ ಪರಿಣಾಮ ಹಳ್ಳಿಗಳ ರಸ್ತೆಯೂ ಬಿಕೋ ಎನ್ನುತ್ತಿತ್ತು. ಮನೆಯಲ್ಲಿಯೇ ಟಿವಿ ನೋಡುತ್ತಾ, ಪೇಪರ್‌ಗಳನ್ನು ಓದುತ್ತಾ ಜನ ಕಾಲ ಕಳೆದರು.

ಆಗೊಂದು ಈಗೊಂದು ಎಂಬಂತೆ ಬೈಕ್–ಸ್ಕೂಟರ್‌ಗಳ ಓಡಾಟ ನಡೆಸಿದ್ದನ್ನು ಹೊರತು ಪಡಿಸಿ, ಟಂಟಂ, ಆಟೊ, ಖಾಸಗಿ ವಾಹನಗಳು ರಸ್ತೆಗೆ ಇಳಿಯಲಿಲ್ಲ. ರೈಲು ಬಂದ್ ಆಗುವ ಮಾಹಿತಿ ಇಲ್ಲದೇ ನಿಲ್ದಾಣಕ್ಕೆ ಬಂದ ಹಲವರು ವಾಪಸ್ ಮರಳಿದರು. ಬೇರೆ ಊರುಗಳಿಂದ ಬಂದವರು ನಿಲ್ದಾಣದಲ್ಲಿಯೇ ದಿನ ಕಳೆದರು.

ನಿರ್ಜನವಾದ ರಾಷ್ಟ್ರೀಯ ಹೆದ್ದಾರಿ

ಜಿಲ್ಲೆಯಲ್ಲಿ ಸಾರಿಗೆ ಬಸ್, ರೈಲು, ಆಟೊ, ಟ್ಯಾಕ್ಸಿ, ಸರಕು ಸಾಗಾಣಿಕೆ ವಾಹನಗಳು ಮಾಲೀಕರು ಸ್ವಯಂ ಪ್ರೇರಿತರಾಗಿ ಕರ್ಫ್ಯೂಗೆ ಬೆಂಬಲಿಸಿದ್ದರು. ಅಲ್ಲದೆ, ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ವಾಹನಗಳ ಓಡಾಟವೂ ಕಡಿಮೆಯಾಗಿತ್ತು.

ಹೋಟೆಲ್‌ಗಳು ಬಂದ್‌

ನಗರದಲ್ಲಿನ ಹೋಟೆಲ್‍ಗಳು ಸಂಪೂರ್ಣ ಬಂದ್ ಆಗಿದ್ದವು. ಪಾರ್ಸಲ್‌ ನೀಡಲು ಅವಕಾಶವಿದ್ದರೂ ವೈರಸ್‌ನ ಸೋಂಕು ತಡೆಗಟ್ಟಲು ಸ್ವಯಂ ಪ್ರೇರಿತವಾಗಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೆ, ಕೆಲವು ಸ್ವಯಂ ಸೇವಕರು ನಿರ್ಗತಿಕರಿಗೆ, ಪ್ರಯಾಣಿಕರಿಗೆ ಆಹಾರವನ್ನು ವಿತರಿಸಿ ಮಾನವೀಯತೆ ಮೆರೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು