ಶನಿವಾರ, ಆಗಸ್ಟ್ 24, 2019
21 °C

ತೇಲಿದವು ಬಣವೆಗಳು, ಮುಳುಗಿದವು ಕನಸುಗಳು!

Published:
Updated:
Prajavani

ಹಾವೇರಿ: ನೆರೆಯಲ್ಲಿ ತೇಲಿ ಹೋಗುತ್ತಿದ್ದ ಬಣವೆಗಳು, ಅವುಗಳಿಗೆ ಹಗ್ಗ ಕಟ್ಟಿ ಎಳೆಯುತ್ತಿದ್ದ ಗ್ರಾಮಸ್ಥರು, ಕಟ್ಟಡದ ಮಹಡಿ ಏರಿ ಅರ್ಧ ಮುಳುಗಿದ್ದ ತಮ್ಮ ಕನಸಿನ ಮನೆಗಳನ್ನೇ ನೋಡುತ್ತ ಕೂತಿದ್ದ ಮಹಿಳೆಯರು, ಪ್ರವಾಹದಲ್ಲಿ ಈಜುತ್ತ ಮನೆ ಸಾಮಗ್ರಿಗಳನ್ನು ಹುಡುಕುತ್ತಿದ್ದ ಯುವಕರು... 

ಇದು ನಗರದಿಂದ 11 ಕಿ.ಮೀ ದೂರದಲ್ಲಿರುವ ಕರ್ಜಗಿ ಗ್ರಾಮದಲ್ಲಿ ಶನಿವಾರ ಕಂಡು ಬಂದ ಚಿತ್ರಣ. ಸದಾ ಹಬ್ಬ, ಉತ್ಸವಗಳಿಂದ ಕಂಗೊಳಿಸುತ್ತಿದ್ದ ಈ ಊರಿನಲ್ಲಿ ನಾಲ್ಕು ದಿನಗಳಿಂದ ನೆಮ್ಮದಿಯೇ ಇಲ್ಲದಂತಾಗಿದೆ. ತಿಂಗಳ ಹಿಂದಷ್ಟೇ ಸಂಭ್ರಮದಿಂದ ಕಾರ ಹುಣ್ಣಿಮೆ ಆಚರಿಸಿ ಮಳೆಗಾಗಿ ಪ್ರಾರ್ಥಿಸಿದ್ದ ಗ್ರಾಮಸ್ಥರು, ಈಗ ಪ್ರವಾಹ ಪರಿಸ್ಥಿತಿಗೆ ಹೆದರಿ ಊರು ಬಿಟ್ಟಿದ್ದಾರೆ. ಮನೆಗೆ ನುಗ್ಗಿದ ನೀರು, ಜನ ಬೆವರು ಬಸಿದು ದುಡಿದು ಕೂಡಿಟ್ಟಿದ್ದ ಎಲ್ಲ ವಸ್ತುಗಳನ್ನೂ ಹೊತ್ತೊಯ್ದಿದೆ.

ಈ ಗ್ರಾಮದ ಸುಮಾರು 45 ಮನೆಗಳು ಮುಳುಗಿದ್ದು, 120 ಜನ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ‘ನಮ್ಮ ಸೂರುಗಳಷ್ಟೇ ಮುಳುಗಿಲ್ಲ. ಜೀವನವೇ ಮುಳುಗಿ ಹೋಗಿದೆ. ಇನ್ನು ನಾಲ್ಕೈದು ದಿನ ಇಲ್ಲಿ ಊಟ ಹಾಕುತ್ತಾರೆ. ಆಮೇಲೆ ನಮ್ಮ ಗತಿ ಏನು’ ಎಂಬ ಆತಂಕದ ಪ್ರಶ್ನೆ ಅವರದ್ದು. ಈ ಕುಟುಂಬಗಳ ಗಂಡಸರು ಜಾನುವಾರುಗಳಿಗೆ ಮೇವು ಹುಡುಕಿಕೊಂಡು ಬೇರೆ ಬೇರೆ ಊರುಗಳತ್ತ ತೆರಳಿದ್ದಾರೆ. 

‘ವರದಾ ನದಿ ತುಂಬಿ ಆಗಸ್ಟ್ 7ರ ರಾತ್ರಿ ಮೊಣಕಾಲುದ್ದ ನೀರು ಬಂತು. ತಕ್ಷಣ ಅಧಿಕಾರಿಗಳು ನಮ್ಮನ್ನು ಶಾಲಾ ಕೊಠಡಿಗಳಿಗೆ ಕರೆದೊಯ್ದರು. ಇತ್ತೀಚೆಗೆ ಮರಣ ಹೊಂದಿದ ನನ್ನ ತಾಯಿಯ ಫೋಟೊ ಸೇರಿದಂತೆ ಎಲ್ಲ ಸಾಮಾನುಗಳು ಮನೆಯಲ್ಲೇ ಉಳಿದವು. ಮರುದಿನ ಬೆಳಿಗ್ಗೆ ನೋಡಿದರೆ ನನ್ನ ಮನೆಯ ಹಂಚು ಮಾತ್ರ ಕಾಣಿಸುತ್ತಿತ್ತು. ಅಮ್ಮ ಟೈಲರಿಂಗ್ ಕೆಲಸ ಮಾಡಿ ಒಂದೊಂದು ರೂಪಾಯಿಯನ್ನೂ ಉಳಿಸಿ ಕಟ್ಟಿಸಿದ್ದ ಮನೆ ಅದು’ ಎನ್ನುತ್ತಾ ಬಿಕ್ಕಿ ಬಿಕ್ಕಿ ಅತ್ತರು ಗ್ರಾಮದ ಫಕ್ಕೀರಮ್ಮ.

‘1961ರಲ್ಲಿ, 1982ರಲ್ಲಿ ಹಾಗೂ 1992ರಲ್ಲಿ ವರದಾ ನೀರು ಗ್ರಾಮಕ್ಕೆ ನುಗ್ಗಿತ್ತು. ಆದರೆ, ಈ ಪ್ರಮಾಣದಲ್ಲಿ ಹಾನಿ ಆಗಿರಲಿಲ್ಲ. ಆ ದಿನ ಸಂಜೆ 7 ಗಂಟೆಗೆ ನಾನು ಹಾಲು ಕರೆಯಲು ಕೊಟ್ಟಿಗೆ ಹೋಗಿದ್ದೆ. ಒಂದೇ ಸಲ ನೀರು ನುಗ್ಗಿ ಬಂತು. ಜನರ ಕೂಗಾಟ ಕೇಳಿ ತಕ್ಷಣ ಆಕಳು–ಕರುವಿನ ಹಗ್ಗ ಬಿಚ್ಚಿ ಓಡಲಾರಂಭಿಸಿದೆ. ನನ್ನ ಹಿಂದೆಯೇ ಅವೂ ಓಡಿ ಬಂದವು’ ಎಂದು ಅಂದಿನ ಪರಿಸ್ಥಿತಿಯನ್ನು ವಿವರಿಸಿದರು ಮಾಯಪ್ಪ ಕಳಸೂರು.

‘ಮನುಷ್ಯರು ಸಾಲ–ಗೀಲ ಮಾಡಿ ಬದುಕ್ಬೋದು. ಮೇವು ಇಲ್ಲದೆ ದನ–ಕರುಗಳು ಏನ್ ಮಾಡ್ತಾವ. ಎಲ್ಲಾದ್ರೂ ಮೇಯ್ದು ಬರಲಿ ಅಂತ ಬೀದಿಗೆ ಬಿಟ್ರೆ, ಅವು ಊರೆಲ್ಲ ಮೇಯ್ದು ನೀಯತ್ತಿನಿಂದ ಮತ್ತೆ ಮನೆ ಕಡೆಗೇ ಹೋಗ್ತಾವೆ. ಅದಕ್ಕೆ ಆಟೋದಾಗ ನೆಂಟರ ಮನೆಗೆ ಕಳ್ಸಿದೀವಿ. ವರ್ಷವಿಡೀ ಮೈ ಮುರಿದು ದುಡಿದು ಅಷ್ಟೋ ಇಷ್ಟೋ ಕೂಡಿಟ್ಟುಕೊಂಡಿರುತ್ತೇವೆ, ಈ ಮಳೆ ಎಲ್ಲವನ್ನೂ ಹೊತ್ತುಕೊಂಡು ಹೋಯ್ತು’ ಎಂದು ಬೇಸರ ವ್ಯಕ್ತಪಡಿಸಿದರು ಬೆನಕಪ್ಪ ನಲ್ವಾಡಿ.

Post Comments (+)