ಶುಕ್ರವಾರ, ಅಕ್ಟೋಬರ್ 18, 2019
23 °C
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕಟೀಲ್ ಪ್ರಶ್ನೆ

ಸೋನಿಯಾ ರಾಮಮಂದಿರ ಕಟ್ಟಿಯಾರಾ?

Published:
Updated:

ಹಾವೇರಿ: ‘ಸೋನಿಯಾ ಗಾಂಧಿ ರಾಮಮಂದಿರ ಕಟ್ಟಿಯಾರಾ? ಸಮಾನ ನಾಗರಿಕ ಸಂಹಿತೆಯನ್ನು ಅವರು ತಂದಾರಾ? 370ನೇ ವಿಧಿ ರದ್ದತಿಗೆ ರಾಹುಲ್‌ ಗಾಂಧಿ ಬೆಂಬಲ ಕೊಟ್ಟಾರಾ...?

ಹಾವೇರಿಯಲ್ಲಿ ಬುಧವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಮ್ಮ ಕಾರ್ಯಕರ್ತರನ್ನು ಕೇಳಿದ ಪ್ರಶ್ನೆಗಳಿವು. ‘ಇಂತಹ ಕೆಲಸಗಳನ್ನು ಅವರು ಮಾಡಲು ಸಾಧ್ಯವೇ ಇಲ್ಲ. ಆ ತಾಕತ್ತು ಇರುವುದು ನಮ್ಮವರಿಗೆ ಮಾತ್ರ’ ಎಂದು ತಾವೇ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.

‘ಕೇವಲ ಸರ್ಕಾರ ನಡೆಸುವುದಷ್ಟೇ ಆಗಿದ್ದರೆ ಸೋನಿಯಾ ಗಾಂಧಿ ಸಾಕಿತ್ತು. ಮನಮೋಹನ್ ಸಿಂಗ್ ಸಾಕಿತ್ತು. ಆದರೆ, ದೇಶದಲ್ಲಿ ಪರಿವರ್ತನೆ ಆಗಬೇಕಿತ್ತು. ಅಭಿವೃದ್ಧಿ ಪಥದತ್ತ ಸಾಗಬೇಕಿತ್ತು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರೇ ಬೇಕಿತ್ತು’ ಎಂದರು.

‘ಜಗತ್ತಿನಲ್ಲೇ ಆರ್ಥಿಕ ಕುಸಿತ ಉಂಟಾಗಿರುವ ಈ ಸಂದರ್ಭದಲ್ಲೂ, ಸುಸ್ಥಿರ ದೇಶಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ. ಕೆಲವರು ಪರಿಸ್ಥಿತಿಯನ್ನು ಮನಸೋಇಚ್ಛೆ ವಿಶ್ಲೇಷಣೆ ಮಾಡುತ್ತಿದ್ದಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಭ್ರಷ್ಟಾಚಾರದ ಕೂಟವಾಗಿದ್ದ ಕಾಂಗ್ರೆಸನ್ನು ಈಗಾಗಲೇ ಮರೆಗೆ ಸರಿಸಿ, ಮನೆ ಮನೆಯಲ್ಲೂ ತಾವರೆ ಅರಳಿಸಿದ್ದೇವೆ’ ಎಂದೂ ಹೇಳಿದರು. 

ನಮ್ಮಲ್ಲೂ ಗುಂಪುಗಳಿವೆ

‘ಹೌದು, ರಾಜ್ಯ ಬಿಜೆಪಿ ಪಾಳಯದಲ್ಲೂ ಎರಡು ಗುಂಪುಗಳಿವೆ. ಯಾರಿಗಾದರೂ ಈ ಬಗ್ಗೆ ಸಂದೇಹವಿದ್ದರೆ ನಾನೇ ಉತ್ತರ ಕೊಡುತ್ತೇನೆ. ಒಂದು ಹಿರಿಯರ ಗುಂಪು, ಮತ್ತೊಂದು ಕಿರಿಯರ ಗುಂಪು. ದೊಡ್ಡವರ ಮಾರ್ಗದರ್ಶನ ಪಡೆದು ಉತ್ಸಾಹದಿಂದ ಕೆಲಸ ಮಾಡಲು ನಾವೇ ಆ ಗುಂಪುಗಳನ್ನು ಮಾಡಿಕೊಂಡಿದ್ದೇವೆ. ಕಿಡಿಗೇಡಿಗಳು ಮನೆಯಲ್ಲಿ ಕೂತು ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿ ಬಿಜೆಪಿ ಬಗ್ಗೆ ಬೇಕಾದ್ದನ್ನೂ ಬರೆದುಕೊಳ್ಳಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.  

Post Comments (+)