ಶನಿವಾರ, ಡಿಸೆಂಬರ್ 7, 2019
22 °C
ಪಕ್ಷ ಸಂಘಟಿಸಲು ಕಾರ್ಯಕರ್ತರಿಗೆ ಕರೆ ಕೊಟ್ಟ ಕಟೀಲ್

‘ಹಂಗು ಬೇಡ, ಅಭಿಮಾನದ ಸರ್ಕಾರ ಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಪೋಸ್ಟರ್ ಅಂಟಿಸುತ್ತಿದ್ದ ಕಾರ್ಯಕರ್ತ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಲು, ಚಹಾ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಮಂತ್ರಿ ಆಗಲು ಬಿಜೆಪಿಯಲ್ಲಷ್ಟೇ ಸಾಧ್ಯ’ ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಹಾವೇರಿಯಲ್ಲಿ ಬುಧವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪಕ್ಷ ಸಂಘಟಿಸಲು ಪ್ರಾಮಾಣಿಕವಾಗಿ ಶ್ರಮಿಸುವ ಎಲ್ಲ ಕಾರ್ಯಕರ್ತರಿಗೂ ಪಕ್ಷದಲ್ಲಿ ಬೆಲೆ ಸಿಗುತ್ತದೆ. ಅದಕ್ಕೆ ನಾನೇ ನಿದರ್ಶನ. ಅಡ್ಡದಾರಿ ಹಿಡಿದು ಕಲ್ಲು ತೂರುವವರನ್ನು, ಪ್ರತಿಭಟನೆ ಮಾಡುವವರನ್ನು ನಾವು ಎಂದೂ ಮಂತ್ರಿ ಮಾಡಲ್ಲ’ ಎಂದರು.

ಯಡಿಯೂರಪ್ಪ ಕಾಮಧೇನು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಘಟಕದ ಅಧ್ಯಕ್ಷ ಸ್ಥಾನವನ್ನು ನನಗೆ ಬಿಟ್ಟುಕೊಟ್ಟರು. ವಿವಿಧ ಅಭಿವೃದ್ಧಿ ಯೋಜನೆಗಳ ಮೂಲಕ ಜನ ಕೇಳಿದ್ದನ್ನೆಲ್ಲ ಕೊಡುತ್ತ ಬಂದಿರುವ ಕಾಮಧೇನು ಅವರು’ ಎಂದು ಬಣ್ಣಿಸಿದರು.

‘ರಾಜ್ಯ ಘಟಕದ ಅಧ್ಯಕ್ಷ ಎಂಬುದು ಅಮಿತ್‌ ಶಾ ನನಗೆ ಕೊಟ್ಟ ಅಧಿಕಾರವಲ್ಲ. ಅದೊಂದು ಜವಾಬ್ದಾರಿ ಎಂದು ಭಾವಿಸಿದ್ದೇನೆ. ಆ ನಿಟ್ಟಿನಲ್ಲೇ ಪಕ್ಷ ಸಂಘಟಿಸುವ ಕೆಲಸ ಪ್ರಾರಂಭಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಎಲ್ಲ ಕಡೆ ತಾವರೆ ಅರಳಬೇಕು. ಯಾರ ಹಂಗೂ ಇಲ್ಲದೇ, ಅಭಿಮಾನದ ಸರ್ಕಾರ ರಚಿಸಬೇಕು’ ಎಂದು ಕರೆ ಕೊಟ್ಟರು. 

‘ಹಾವೇರಿ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ. ಅಷ್ಟೂ ಕ್ಷೇತ್ರಗಳಲ್ಲಿ ನಮ್ಮವರೇ ಆರಿಸಿಬರಬೇಕು. ನಮ್ಮ ಕಾರ್ಯಕರ್ತರು ಇನ್ನು ಯಾವುದಕ್ಕೂ ಹೆದರುವುದೂ ಬೇಡ. ನ್ಯಾಯಯುತವಾಗಿದ್ದರೆ ಸಾಕು. ನೀವೆಲ್ಲ ಕಣ್ಣೀರು ಹಾಕಲು ನಾವು ಬಿಡುವುದಿಲ್ಲ. ಸುಳ್ಳು ಕೇಸ್ ಹಾಕುವವರಿಗೆ ಯಾವ ರೀತಿ ಪಾಠ ಕಲಿಸಬೇಕು ಎಂಬುದೂ ನಮಗೆ ಗೊತ್ತಿದೆ’ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದರು.

‘ಭ್ರಷ್ಟರ ಕೂಟ ತೊಲಗಿತು’

‘ನಾವು ನಮ್ಮ ಕಾರ್ಯಪದ್ಧತಿ ಜತೆ ಎಂದೂ ರಾಜಿ ಮಾಡಿಕೊಂಡವರಲ್ಲ. ಆದರೆ, ಕಾಂಗ್ರೆಸ್ ಒಂದು ಭ್ರಷ್ಟರ ಕೂಟವಾಗಿಯೇ ಇತ್ತು. ಈಗ ಅದನ್ನು ಸಂಪೂರ್ಣ ಮರೆಗೆ ಸರಿಸಿದ್ದೇವೆ’ ಎಂದೂ ಕಟೀಲ್ ಹೇಳಿದರು.

‘ಭಾರತಾಂಬೆಯ ಮುಕುಟುವಾಗಿರುವ ಕಾಶ್ಮೀರಕ್ಕೆ ಕಾಂಗ್ರೆಸ್ ಸ್ವಾತಂತ್ರ್ಯ ಕೊಟ್ಟಿರಲಿಲ್ಲ. ‘ಕಾಶ್ಮೀರ ಉಳಿಸಿ...’ ಎಂದು 68 ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬಂದ ಹೋರಾಟಕ್ಕೆ ಕೊನೆಗೂ ಈಗ ಜಯ ಸಿಕ್ಕಿತು. ನೆಲ–ಜಲವನ್ನ ಕಾಪಾಡುತ್ತಲೇ ಯೋಗ, ಗಂಗೆಯ ಮಹತ್ವವನ್ನು ಹಾಗೂ ದೇಶದ ಸಂಸ್ಕೃತಿಯನ್ನು ಮೋದಿ ಜಗತ್ತಿಗೇ ಸಾರಿದರು. ಆ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದರು’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ಪಕ್ಷದ ಮುಖಂಡ ಯು.ಬಿ.ಬಣಕಾರ, ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಸಜ್ಜನ್ ಉಪಸ್ಥಿತರಿದ್ದರು.

ವಿಲನ್ ಹೋಗಿ, ಹೀರೋ ಬಂದ್ರು!

‘ಕಾಂಗ್ರೆಸ್‌ನ ಸಿದ್ದರಾಮಯ್ಯ ಮುಖ್ಯಮಂತ್ರಿ ಅಗಿದ್ದಾಗ ಸಮಾಜ ಒಡೆಯುವ ಕೆಲಸವನ್ನೇ ಮಾಡಿದರು. ಹಿಂದೂ ಕಾರ್ಯಕರ್ತರ ಹತ್ಯೆಗಳಿಗೆ ರಾಜಕೀಯ ಬಣ್ಣ ಹಚ್ಚಿ ವಿಲನ್ ಎನಿಸಿಕೊಂಡರು. ಆ ವಿಲನ್ ಹೋಗುತ್ತಿದ್ದಂತೆಯೇ ಮತ್ತೊಬ್ಬ ಪಾರ್ಟ್‌ಟೈಮ್ ಕಲಾವಿದ ಬಂದರು’ ಎಂದು ವ್ಯಂಗ್ಯವಾಗಿ ಹೇಳುವ ಮೂಲಕ ಕಟೀಲ್, ಎಚ್‌.ಡಿ.ಕುಮಾರಸ್ವಾಮಿ ಅವರನ್ನೂ ಕುಟುಕಿದರು.

‘ಆ ಪಾರ್ಟ್‌ಟೈಮ್ ಕಲಾವಿದ ಒಂದೂವರೆ ವರ್ಷ ತಾಜ್ ಹೋಟೆಲ್‌ನಿಂದ ಆಚೆ ಬರಲೇ ಇಲ್ಲ. ಹೋಟೆಲನ್ನೇ ವಿಧಾನಸೌಧ ಮಾಡಿಕೊಂಡು ಅಧಿಕಾರ ಕಳೆದರು. ಈಗ ಬಿ.ಎಸ್.ಯಡಿಯೂರಪ್ಪ ಹಲವು ಸವಾಲುಗಳಲ್ಲಿ ಈಜಿ ಹೀರೋನಂತೆ ಬಂದಿದ್ದಾರೆ. ಅವರು ಯಾವಾಗಲೂ ಹೀರೋ ಆಗಿಯೇ ಉಳಿಯುತ್ತಾರೆ’ ಎಂದರು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು