ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಸ್ವ–ಸುರಕ್ಷಾ ಕವಚ, ಮಾಸ್ಕ್‌ಗಳ ತೀವ್ರ ಕೊರತೆ

ಕೊರೊನಾ ವೈರಸ್‌ ಸೋಂಕಿತರ ತಪಾಸಣೆಗೆ ವೈದ್ಯಕೀಯ ಸಿಬ್ಬಂದಿ ಪರದಾಟ
Last Updated 29 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕು ಶಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸುವ ಮತ್ತು ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೆ ‘ಸ್ವ–ಸುರಕ್ಷಾ ಕವಚ’ (ಪರ್ಸನಲ್ ಪ್ರೊಟೆಕ್ಟಿವ್‌ ಎಕ್ವಿಪ್‌ಮೆಂಟ್‌–ಪಿಪಿಇ) ಮತ್ತು ಎನ್‌–95 ಮಾಸ್ಕ್‌ಗಳ ಕೊರತೆ ತೀವ್ರವಾಗಿ ಕಾಡುತ್ತಿದೆ.

ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು, ಶುಶ್ರೂಷಕರು, ವಾರ್ಡ್‌ ಬಾಯ್‌ಗಳು ಸೇರಿದಂತೆ ಸುಮಾರು 500 ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಕೊರೊನಾ ಸೋಂಕು ತಡೆಗೆ ‘ಕೋವಿಡ್‌ ಕಾರ್ನರ್‌’ ಮತ್ತು ‌‘ಐಸೋಲೇಷನ್‌ ವಾರ್ಡ್‌’ಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಅತ್ಯಗತ್ಯವಾಗಿ ಮಾಸ್ಕ್‌ ಮತ್ತು ಸ್ವ–ಸುರಕ್ಷಾ ಕವಚಗಳು ಬೇಕೇ ಬೇಕು. ಆದರೆ, ಅಗತ್ಯಕ್ಕೆ ತಕ್ಕಷ್ಟು ಇಲ್ಲದಿರುವುದು ಮತ್ತು ತಕ್ಷಣ ಪೂರೈಕೆಯಾಗದಿರುವುದು ಸಿಬ್ಬಂದಿಯ ಆತಂಕವನ್ನು ಹೆಚ್ಚಿಸಿದೆ.

ಇರುವುದು ನಾಲ್ಕೇ ಪಿಪಿಇ!

ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ 4 ಪಿಪಿಇಗಳು ಮಾತ್ರ ಇದ್ದು, ಇನ್ನೂ 3 ಸಾವಿರ ಪಿಪಿಇಗಳು ಬೇಕಾಗಿವೆ.ಎನ್‌–95 ಮಾಸ್ಕ್‌ಗಳು 123 ದಾಸ್ತಾನು ಇದ್ದು, ಕನಿಷ್ಠ 5 ಸಾವಿರ ಮಾಸ್ಕ್‌ಗಳು ಬೇಕಾಗಿವೆ. ತ್ರಿ ಲೇಯರ್‌ ಮಾಸ್ಕ್‌ಗಳು ತಿಂಗಳಿಗೆ 12 ಸಾವಿರ ಬೇಕಾಗುತ್ತವೆ. ಪ್ರತಿ ದಿನ ವೈದ್ಯರಿಗೆ ಎನ್‌–95 ಮಾಸ್ಕ್‌ಗಳು 75 ಹಾಗೂ 200 ತ್ರಿ ಲೇಯರ್‌ ಮಾಸ್ಕ್‌ಗಳು ಬೇಕಾಗುತ್ತವೆ ಹಾಗೂ ಪಿಪಿಇಗಳು ನಿತ್ಯ 50 ಬೇಕಾಗುತ್ತವೆ.ಒಮ್ಮೆ ಬಳಸಿದ ಮೇಲೆ ಮಾಸ್ಕ್‌ ಮತ್ತು ಪಿಪಿಇಗಳನ್ನು ಬಳಸುವಂತಿಲ್ಲ. ಹೀಗಾಗಿ ಕೊರೊನಾ ಸೋಂಕು ಶಂಕಿತ ವ್ಯಕ್ತಿಗಳ ತಪಾಸಣೆಗೆ ಈ ಸಾಮಗ್ರಿಗಳು ಅತ್ಯವಶ್ಯವಾಗಿವೆ.

ವೆಂಟಿಲೇಟರ್‌ ಕೊರತೆ!

ಜಿಲ್ಲೆಯಲ್ಲಿ 15 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಆದರೆ, ಜಿಲ್ಲೆಯಲ್ಲಿ ಜಿಲ್ಪಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆ ಸೇರಿದಂತೆ 7 ವೆಂಟಿಲೇಟರ್‌ಗಳು ಮಾತ್ರ ಲಭ್ಯವಿವೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೆ ವೆಂಟಿಲೇಟರ್‌ಗಳ ಕೊರತೆಯಿಂದ ರೋಗಿಗಳ ಜೀವಕ್ಕೆ ಅಪಾಯ ತಂದೊಡ್ಡುವ ಭೀತಿ ಜನರನ್ನು ಕಾಡುತ್ತಿದೆ.

ವೈದ್ಯಕೀಯ ಸಿಬ್ಬಂದಿಗೆ ತಿಂಗಳಿಗೆ 5 ಸಾವಿರ ಸ್ಯಾನಿಟೈಸರ್‌ ಬಾಟಲಿಗಳು ಬೇಕು. ಅವುಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಕೊರತೆ ಕಾಡುತ್ತಿದೆ. ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಕೈಗಳ ಶುಚಿತ್ವವನ್ನು ಕಾಪಾಡಿಕೊಳ್ಳಲು ವೈದ್ಯಕೀಯ ಸಿಬ್ಬಂದಿಗೆ ಸ್ಯಾನಿಟೈಸರ್‌ ಅವಶ್ಯವಾಗಿವೆ.

1,800 ಮಂದಿ ತಪಾಸಣೆ:‘ಕೋವಿಡ್‌ ಕಾರ್ನರ್‌’ನಲ್ಲಿ ಈಗಾಗಲೇ ಕೋವಿಡ್‌ ಸೋಂಕು ಶಂಕಿತ 1,800 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಅವರಲ್ಲಿ ಆರು ಮಂದಿಯನ್ನು ಐಸೋಲೇಷನ್‌ ವಾರ್ಡ್‌ನಲ್ಲಿ ದಾಖಲಿಸಿಕೊಂಡು, ಅವರ ಗಂಟಲು ದ್ರವವನ್ನು ಶಿವಮೊಗ್ಗದ ವೈರಾಲಜಿ ಸಂಸ್ಥೆಗೆ ಕಳುಹಿಸಿ, ವರದಿ ಪಡೆಯಲಾಗಿದೆ. ಎಲ್ಲರ ವರದಿಯೂ ‘ನೆಗೆಟಿವ್’ ಎಂದು ಬಂದಿದೆ. ಜಿಲ್ಲೆಯಲ್ಲಿ ಸದ್ಯ 173 ಮಂದಿಯನ್ನು ಗೃಹಬಂಧನದಲ್ಲಿ (ಹೋಮ್‌ ಕ್ವಾರಂಟೈನ್‌) ಇಡಲಾಗಿದ್ದು, ಇವರ ಮೇಲೆ ವಿಶೇಷ ನಿಗಾ ಇಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT