ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂ ವ್ಯಾಪಾರಿಗಳಿಗೆ ಮುಳ್ಳಾದ ಲಾಕ್‌ಡೌನ್‌

Last Updated 25 ಮೇ 2020, 12:28 IST
ಅಕ್ಷರ ಗಾತ್ರ

ಹಾವೇರಿ: ಈದ್‌ ಉಲ್‌ ಫಿತ್ರ್‌ ಅಂಗವಾಗಿ ಭರ್ಜರಿ ಹೂವಿನ ವ್ಯಾಪಾರ ನಡೆಯುತ್ತದೆ ಎಂದುಕೊಂಡಿದ್ದ ವ್ಯಾಪಾರಿಗಳ ನಿರೀಕ್ಷೆ ಈ ಬಾರಿ ಹುಸಿಯಾಯಿತು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿವಿಧ ತಾಲ್ಲೂಕುಗಳಿಂದ ನಿರೀಕ್ಷಿತ ಖರೀದಿದಾರರು ಬರಲಿಲ್ಲ. ಬೆರಳೆಣಿಕೆ ಖರೀದಿದಾರರು ಬಂದರೂ ಕಡಿಮೆ ದರಕ್ಕೆ ಹೂ ಖರೀದಿಸಿದ ಪರಿಣಾಮ, ನಮಗೆ ನಷ್ಟ ಉಂಟಾಯಿತು ಎಂದು ಹಾವೇರಿ ನಗರದ ಹೂವಿನ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.

‘ರಂಜಾನ್‌ ಹಬ್ಬದ ಸಂದರ್ಭ ಕಳೆದ ವರ್ಷ ಎರಡು ದಿನಗಳಲ್ಲಿ ಸುಮಾರು ₹50 ಸಾವಿರ ಕಮಿಷನ್‌ ಸಿಕ್ಕಿತ್ತು. ಈ ಬಾರಿ ಕೇವಲ ₹12 ಸಾವಿರ ಸಿಕ್ಕಿದೆ. ಕಳೆದ ವರ್ಷ 700ರಿಂದ 800 ಕೆ.ಜಿ. ಹೂ ಮಾರಾಟವಾಗಿತ್ತು. ಈ ಬಾರಿ ಸುಮಾರು 300 ಕೆ.ಜಿ. ಹೂ ಮಾತ್ರ ಬಿಕರಿಯಾಯಿತು’ ಎಂದು ಎ.ಎಂ.ಎಸ್‌. ಫ್ಲವರ್‌ ಮಾರ್ಕೆಟ್‌ನ ಹೂವಿನ ವ್ಯಾಪಾರಿ ಅತಾವುಲ್ಲಾ ಎಂ.ಶೇಖಸನದಿ ಅಳಲು ತೋಡಿಕೊಂಡರು.

ಕಳೆದ ವರ್ಷ ಗುಲಾಬಿ ಕೆ.ಜಿ.ಗೆ ₹180 ಇದ್ದದ್ದು, ಈ ಬಾರಿ ₹80ರ ದರದಲ್ಲಿ ಮಾರಾಟವಾಯಿತು. ಅದರಂತೆ, ಗಲಾಟಿ ಕೆ.ಜಿ.ಗೆ ₹100 ಇದ್ದದ್ದು, ಈ ಬಾರಿ ₹30, ಸೂಜಿಮಲ್ಲಿಗೆ ಕೆ.ಜಿ.ಗೆ ₹400 ಇದ್ದದ್ದು, ಈ ಬಾರಿ ₹250, ಸುಗಂಧರಾಜ ಕೆ.ಜಿ.ಗೆ ₹150 ಇದ್ದದ್ದು, ಈ ಬಾರಿ ₹60ರ ದರದಲ್ಲಿ ಮಾರಾಟವಾಯಿತು ಎಂದು ಅತಾವುಲ್ಲಾ ಮಾಹಿತಿ ನೀಡಿದರು.

ಜಿಲ್ಲೆಯ 7 ತಾಲ್ಲೂಕುಗಳಿಗೆ ಹಾವೇರಿ ಹೂವಿನ ಮಾರುಕಟ್ಟೆಯಿಂದಲೇ ಪುಷ್ಪಗಳು ರವಾನೆಯಾಗುತ್ತವೆ. ಗಣಜೂರು, ಕರಜಗಿ, ಗುತ್ತಲ, ಕದರಮಂಡಲಗಿ, ಕಲ್ಲಾಪುರ, ಗುಡಗೂರು ಮುಂತಾದ ಊರುಗಳಲ್ಲಿ ಅತಿ ಹೆಚ್ಚಾಗಿ ಹೂ ಬೆಳೆಯುತ್ತಾರೆ.

ಜನತಾ ಕರ್ಫ್ಯೂ, ಲಾಕ್‌ಡೌನ್‌ನಿಂದಾಗಿ ಈ ಬಾರಿ ಹೂವಿಗೆ ಉತ್ತಮ ದರ ಸಿಗದ ಕಾರಣ ರೈತರಿಗೂ ನಷ್ಟವುಂಟಾಗಿದೆ. ಜತೆಗೆ ನಮ್ಮನ್ನೂ ಹೂವು ಕೈ ಹಿಡಿಯಲಿಲ್ಲ ಎಂಬುದು ಹೂವಿನ ವ್ಯಾಪಾರಿಗಳ ಒಕ್ಕೊರಲ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT