ಸೋಮವಾರ, ಸೆಪ್ಟೆಂಬರ್ 16, 2019
27 °C
ಹಾವೇರಿಗೂ ತಟ್ಟಿದ ದುಬಾರಿ ದಂಡದ ಬಿಸಿ, ನೋಟಿಸ್ ನೋಡಿ ಕಂಗಾಲಾದ ಚಾಲಕ

ಊಟಕ್ಕೆ ಕೊಟ್ಟಿದ್ದ ಹಣ ದಂಡಕ್ಕೆ ಹೋಯ್ತು!

Published:
Updated:
Prajavani

ಹಾವೇರಿ: ‘ಫೈನ್ ಜಾಸ್ತಿ ಆಗೇತಿ ಅಂತ ಗೊತ್ತಿರ್ಲಿಲ್ರಿ. ನನ್ ಹತ್ರ ಅಷ್ಟೊಂದ್ ದುಡ್ಡಿಲ್ಲ. ಸದ್ಯ 100 ರೂಪಾಯಿ ಐತಿ. ಇದನ್ನ ಇಟ್ಕೊಂಡಿರಿ. ಮಾಲೀಕರ ಹತ್ರ ಬಾಕಿ ಹಣ ಇಸ್ಕೊಂಡ್ ಬಂದ್ ಕೊಡ್ತೀನಿ...’

ರಾಣೆಬೆನ್ನೂರು ಸಂಚಾರ ಪೊಲೀಸರು ಮಂಗಳವಾರ ಬೆಳಿಗ್ಗೆ ಲಾರಿ ತಡೆದು, ₹ 500 ದಂಡ ವಿಧಿಸುತ್ತಿದ್ದಂತೆಯೇ ಅದರ ಚಾಲಕ ಬಿ.ಎಚ್.ಸಂತೋಷ್ ಗೋಳಾಡಿದ ಪರಿ ಇದು. ಅವರು ಸಮವಸ್ತ್ರ ಧರಿಸದೆ ಲಾರಿ ಚಾಲನೆ ಮಾಡಿಕೊಂಡು ಬಂದಿದ್ದಕ್ಕೆ ಪೊಲೀಸರು ₹ 500 ದಂಡ ಕಟ್ಟುವಂತೆ ನೋಟಿಸ್ ಕೊಟ್ಟಿದ್ದರು.

ಜಿಲ್ಲೆಗೂ ತಟ್ಟಿತು ಬಿಸಿ

ಸಂಚಾರ ನಿಯಮ ಉಲ್ಲಂಘಿಸುವ ಜಿಲ್ಲೆಯ ಸವಾರರಿಗೂ ನಿಧಾನವಾಗಿ ‘ಪರಿಷ್ಕೃತ ದಂಡ’ದ ಬಿಸಿ ತಟ್ಟುತ್ತಿದೆ. ಸೋಮವಾರ ಹಾಗೂ ಮಂಗಳವಾರ ರಾಣೆಬೆನ್ನೂರು ಸಂಚಾರ ಪೊಲೀಸರು ಐದು ಮಂದಿಗೆ ದುಬಾರಿ ಮೊತ್ತದ ನೋಟಿಸ್ ನೀಡಿದ್ದಾರೆ. ಆ ಮೂಲಕ ಇಡೀ ಜಿಲ್ಲೆಯ ಸವಾರರಿಗೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಸೆ.9ರ ರಾತ್ರಿ 7.30ರ ಸುಮಾರಿಗೆ ಸಮವಸ್ತ್ರವಿಲ್ಲದೆ ಆಟೊ ಓಡಿಸಿಕೊಂಡು ಬರುತ್ತಿದ್ದ ಚಾಲಕ ಗಣೇಶ ಅವರನ್ನು ಅಶೋಕ ವೃತ್ತದಲ್ಲಿ ತಡೆದ ಪೊಲೀಸರು, ಪರಿಷ್ಕೃತ ದರದ ಅನ್ವಯ ₹ 500 ದಂಡದ ರಸೀದಿ ಕೊಟ್ಟಿದ್ದಾರೆ. ಹೆಚ್ಚು ಮಾತನಾಡಿದರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮತ್ತಷ್ಟು ದಂಡ ಬೀಳಬಹುದೆಂದು ಅವರು ದಂಡಕಟ್ಟಿ ಸುಮ್ಮನೆ ಹೋಗಿದ್ದಾರೆ.

ಅದೇ ದಿನ ರಾತ್ರಿ 8.10ರ ಸುಮಾರಿಗೆ ಸ್ಥಳೀಯ ನಿವಾಸಿ ರವಿ ಚನ್ನಬಸಪ್ಪ ಎಂಬುವರು, ಸ್ಕೂಟರ್‌ನಲ್ಲಿ ಅದೇ ವೃತ್ತಕ್ಕೆ ಬಂದಿದ್ದಾರೆ. ಹೆಲ್ಮೆಟ್ ಧರಿಸಿರದಿದ್ದ ಕಾರಣ ಪೊಲೀಸರು ಅವರಿಗೆ ₹ 1 ಸಾವಿರ ದಂಡ ಬರೆದಿದ್ದಾರೆ.

ಸೆ.10ರ ಕಾರ್ಯಾಚರಣೆ

ಮರುದಿನ ಬೆಳಿಗ್ಗೆ ಹೆಲ್ಮೆಟ್ ಇಲ್ಲದ ಬೈಕ್‌ನಲ್ಲಿ ಬರುತ್ತಿದ್ದ ಹನುಮಂತ ಅವರ ಮೇಲೂ ದಂಡಾಸ್ತ್ರ ಪ್ರಯೋಗವಾಗಿದೆ. ಪೊಲೀಸರು ₹ 1 ಸಾವಿರ ದಂಡದ ರಸೀದಿ ಬರೆದುಕೊಡುತ್ತಿದ್ದಂತೆಯೇ ಬೆಚ್ಚಿಬಿದ್ದ ಅವರು, ‘ಇನ್ನು ಮುಂದೆ ಹೆಲ್ಮೆಟ್ ಧರಿಸಿಕೊಂಡೇ ಓಡಾಡುತ್ತೇನೆ. ಇದೊಂದು ಬಾರಿ ಬಿಟ್ಟುಬಿಡಿ’ ಎಂದು ಗೋಗರೆದಿದ್ದಾರೆ. ಆದರೆ, ಯಾವುದೇ ರಾಜಿಗೆ ಒಳಗಾಗದ ಪೊಲೀಸರು ದಂಡ ಕಟ್ಟಿಸಿಕೊಂಡೇ ಕಳುಹಿಸಿದ್ದಾರೆ.

ಇನ್ನು ಮೊಬೈಲ್‌ನಲ್ಲಿ ಮಾತನಾಡುತ್ತ ಟಾಟಾ ಏಸ್ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ಮಂಜುನಾಥ್ ಸಿ.ಚನ್ನಗಿರಿ, ದಂಡದ ಪ್ರಮಾಣ ಹೆಚ್ಚಾಗಿರುವ ವಿಷಯ ಗೊತ್ತಿದ್ದಂರಿಂದ ಪೊಲೀಸರನ್ನು ನೋಡುತ್ತಿದ್ದಂತೆಯೇ ಕಕ್ಕಾಬಿಕ್ಕಿಯಾಗಿದ್ದಾರೆ. ಕೊನೆಗೆ ₹ 2 ಸಾವಿರ ದಂಡದ ನೋಟಿಸ್ ಪಡೆದು, ಕೋರ್ಟ್‌ನಲ್ಲಿ ಕಟ್ಟುವುದಾಗಿ ಹೇಳಿ ಹೊರಟು ಹೋಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಹಾವೇರಿ ಎಸ್ಪಿ ಕೆ.ಜಿ.ದೇವರಾಜು, ‘ದಂಡದ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಜಿಲ್ಲೆಯಾದ್ಯಂತ ಅರಿವು ಮೂಡಿಸಲಾಗುತ್ತಿದೆ. ಸಿಬ್ಬಂದಿಯ ತಂಡ ಕಾಲೇಜುಗಳು, ಮಾರುಕಟ್ಟೆಗಳು ಹಾಗೂ ಇನ್ನಿತರೆ ಜನಸಂದಣಿ ಪ್ರದೇಶಗಳಿಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ರಾಣೆಬೆನ್ನೂರು ಹಾಗೂ ಬಂಕಾಪುರದಲ್ಲಿ ಆಟೊಗಳಿಗೆ ಮೈಕ್ ಕಟ್ಟಿ ಕೂಗಿ ಹೇಳಲಾಗುತ್ತಿದೆ. ಈಗ ಸಂಚಾರ ನಿಯಮಗಳನ್ನು ಪಾಲಿಸುವುದೊಂದೇ ಸವಾರರಿಗೆ ಇರುವ ಪರಿಹಾರ’ ಎಂದರು.

₹ 400 ಕೊಡೋಕೆ ಹೋಗ್ತಿದ್ದೀನಿ

‘ಮಾಲೀಕರು ಮಧ್ಯಾಹ್ನದ ಊಟಕ್ಕೆ ₹ 100 ಕೊಟ್ಟಿದ್ದರು. ಬೆಳಿಗ್ಗೆ ಪೊಲೀಸ್ರು ವಾಹನ ತಡೆದು ₹ 500 ದಂಡ ವಿಧಿಸಿದಾಗ, ಜೇಬಲ್ಲಿದ್ದ ನೂರರ ಆ ಒಂದು ನೋಟನ್ನೇ ಕೊಟ್ಟು ಹೋಗಿದ್ದೆ. ಮಾಲೀಕರ ಹತ್ತಿರ ಬಾಕಿ ಹಣ ಪಡೆದುಕೊಂಡು, ಈಗ ಕೊಡಲು ಠಾಣೆ ಕಡೆಗೆ ತೆರಳುತ್ತಿದ್ದೇನೆ. ಈ ಪ್ರಮಾಣದಲ್ಲಿ ದಂಡ ಹೆಚ್ಚಳ ಮಾಡಿದರೆ ಬಡ ಚಾಲಕರು ಎಲ್ಲಿಗೆ ಹೋಗಬೇಕು’ ಎಂದು ಲಾರಿ ಚಾಲಕ ಸಂತೋಷ್ ಬೇಸರದಿಂದ ಪ್ರಶ್ನಿಸಿದರು.

Post Comments (+)