ಹಾವೇರಿ: ತಾಲ್ಲೂಕಿನ ಹೊಸರಿತ್ತಿಯ ಮಳಿಗೆಯೊಂದರ ಎದುರು ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದು, ಈ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಗಾಯತ್ರಿ ಮೊಬೈಲ್ ಮಳಿಗೆ ಎದುರು ಇತ್ತೀಚೆಗೆ ಈ ಅವಘಡ ಸಂಭವಿಸಿದೆ. ಮೊಬೈಲ್ ಬ್ಯಾಟರಿ ಹಿಡಿದುಕೊಂಡಿದ್ದ ಇಬ್ಬರು ಯುವಕರು ಅದೃಷ್ಟವಶಾತ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಕೈಗಳಿಗೆ ಸಣ್ಣ–ಪುಟ್ಟ ಗಾಯಗಳಾಗಿವೆ.
ಯುವಕರಿಬ್ಬರು ಹಾಳಾಗಿದ್ದ ತಮ್ಮ ಮೊಬೈಲ್ ಬ್ಯಾಟರಿ ಬದಲಾಯಿಸಿಕೊಳ್ಳಲು ಮಳಿಗೆಗೆ ಹೋಗಿದ್ದರು. ಹೊಸ ಬ್ಯಾಟರಿ ಹಾಕಿಸಿಕೊಂಡು ಮೊಬೈಲ್ ವಾಪಸು ಪಡೆದಿದ್ದರು. ಇದರ ಜೊತೆಗೆ, ಹಳೇ ಬ್ಯಾಟರಿಯನ್ನು ಒತ್ತಾಯದಿಂದ ವಾಪಸು ಪಡೆದುಕೊಂಡಿದ್ದರು. ಈ ದೃಶ್ಯ ವಿಡಿಯೊದಲ್ಲಿದೆ.
ಹಳೇ ಬ್ಯಾಟರಿಯ ಕವಚವನ್ನು ಬಾಯಿಯಿಂದ ಕಿತ್ತು ತೆರೆದಿದ್ದ ಯುವಕ, ಅದರಲ್ಲಿದ್ದ ರಾಸಾಯನಿಕ ಪರೀಕ್ಷಿಸಿದ್ದರು. ನಂತರ, ಹಾಳೆ ರೂಪದಲ್ಲಿದ್ದ ಕವಚವನ್ನು ಬಿಚ್ಚಿ ಇನ್ನೊಬ್ಬ ಯುವಕನಿಗೆ ತೋರಿಸಲು ಮುಂದಾಗಿದ್ದರು. ಇಬ್ಬರೂ ಯುವಕರು ಪರಸ್ಪರ ಹಾಳೆ ಹಿಡಿದುಕೊಳ್ಳುತ್ತಿದ್ದಂತೆ, ಬ್ಯಾಟರಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತ್ತು. ಗಾಬರಿಗೊಂಡ ಇಬ್ಬರೂ ಯುವಕರು ದಿಕ್ಕಾಪಾಲಾಗಿ ಓಡಿದ್ದರು.
ಸಹಾಯಕ್ಕೆ ಬಂದಿದ್ದ ಪಕ್ಕದ ಅಂಗಡಿಯವರು, ಮಳಿಗೆ ಎದುರು ಉರಿಯುತ್ತಿದ್ದ ಬೆಂಕಿ ನಂದಿಸಿದ್ದರು. ಮೊಬೈಲ್ ಬ್ಯಾಟರಿ ಸ್ಫೋಟಕ್ಕೆ ಕಾರಣವೇನು? ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಗಾಯಗೊಂಡ ಯುವಕರ ಹೆಸರು ಗೊತ್ತಾಗಿಲ್ಲ.
ಅವಘಡದ ಬಗ್ಗೆ ’ಪ್ರಜಾವಾಣಿ‘ ಜೊತೆ ಮಾತನಾಡಿದ ಗಾಯತ್ರಿ ಮಳಿಗೆಯ ಪ್ರದೀಪ್, ‘ಯುವಕರು ಮೊಬೈಲ್ ಬ್ಯಾಟರಿ ಬದಲಾಯಿಸಿಕೊಳ್ಳಲು ಮಳಿಗೆಗೆ ಬಂದಿದ್ದರು. ಹೊಸ ಬ್ಯಾಟರಿ ಹಾಕಿ ಮೊಬೈಲ್ ವಾಪಸು ಕೊಟ್ಟಿದ್ದೆ. ಹಳೇ ಬ್ಯಾಟರಿ ಸಹ ವಾಪಸು ಕೇಳಿದ್ದರು. ಹಳೇ ಬ್ಯಾಟರಿ ಹೆಚ್ಚು ಅಪಾಯಕಾರಿಯೆಂದು ಬುದ್ದಿವಾದ ಹೇಳಿದ್ದೆ’ ಎಂದರು.
‘ಒತ್ತಾಯದಿಂದ ಬ್ಯಾಟರಿ ಪಡೆದಿದ್ದ ಯುವಕರು, ಅದನ್ನು ಪೂರ್ಣ ಪ್ರಮಾಣದಲ್ಲಿ ಬಿಚ್ಚಿ ಒಳಗಡೆ ಏನಿಗೆ? ಎಂಬುದನ್ನು ನೋಡಲು ಮುಂದಾಗಿದ್ದರು. ಬಾಯಿಯಲ್ಲೂ ಬ್ಯಾಟರಿ ಇಟ್ಟುಕೊಂಡಿದ್ದರು. ಚರಂಡಿಗೆ ಎಸೆಯುವಂತೆ ಪುನಃ ಹೇಳಿದ್ದೆ. ಇದಾದ ಕೆಲ ಕ್ಷಣಗಳಲ್ಲಿ ಬ್ಯಾಟರಿ ಸ್ಫೋಟಗೊಂಡಿತು. ಅದೃಷ್ಟವಶಾತ್ ಹೆಚ್ಚು ಹಾನಿಯಾಗಿಲ್ಲ. ಅವಘಡದ ನಂತರ ಯುವಕರು ಸ್ಥಳದಿಂದ ಹೊರಟು ಹೋದರು. ಅವರಿಬ್ಬರು ಯಾರು ಎಂಬುದು ಗೊತ್ತಾಗಿಲ್ಲ’ ಎಂದು ಪ್ರದೀಪ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.