ಹಾವೇರಿ: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿಯನ್ನು ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಗುರುವಾರ ಆಚರಿಸಲಾಯಿತು. ಉಂಡಿಗಳ ಸಮೇತ ಭೋಜನ ಸವಿದ ಜನ, ಜೋಕಾಲಿ ಜೀಕಿ ಖುಷಿಪಟ್ಟರು.
ನಗರದ ಪ್ರದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ರಂಗು ಹೆಚ್ಚಾಗಿತ್ತು. ನಗರಗಳಲ್ಲಿ ಮನೆಯೊಳಗೆ ನಾಗರ ಮೂರ್ತಿಗಳಿಗೆ ಹಾಲೆರೆದ ಜನ, ಸಿಹಿ ಪದಾರ್ಥ ಸವಿದು ಖುಷಿ ಪಟ್ಟರು. ನಗರದ ಕೆಲವೆಡೆ ಮಾತ್ರ ಜೋಕಾಲಿ ಸಂಭ್ರಮವಿತ್ತು.
ಗ್ರಾಮೀಣ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೇ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು ಹಾಗೂ ಮಹಿಳೆಯರು, ಹೊಸ ಬಟ್ಟೆ ತೊಟ್ಟು ಸಡಗರದಿಂದ ಹಬ್ಬವನ್ನು ಆಚರಿಸಿದರು. ಕುಟುಂಬ ಸಮೇತರಾಗಿ ಹುತ್ತವಿರುವ ಜಾಗ ಹಾಗೂ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಹುತ್ತವಿರುವ ಜಾಗದಲ್ಲಿ ನಾಗಪ್ಪನಿಗೆ ಹಾಲೆರೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಅಜ್ಜ–ಅಜ್ಜಿ, ತಂದೆ–ತಾಯಿ, ಪತಿ–ಪತ್ನಿ, ಅಣ್ಣ–ತಮ್ಮ, ಅಕ್ಕ–ತಂಗಿ, ಅಣ್ಣ–ತಂಗಿ, ಅಕ್ಕ–ತಮ್ಮ... ಹೀಗೆ ಮನೆಯವರೆಲ್ಲರ ಹೆಸರಿನಲ್ಲಿ ಜನರು ನಾಗಪ್ಪನಿಗೆ ಹಾಲೆರೆದರು. ದೇವರಿಗೆ ನೈವೇದ್ಯ ಹಿಡಿದು ನಮಿಸಿದರು.
ಹಬ್ಬಕ್ಕೆಂದು ವಿಶೇಷವಾದ ಉಂಡಿಗಳನ್ನು ಸಿದ್ಧಪಡಿಸಿದ್ದ ಮಹಿಳೆಯರು, ದೇವರಿಗೆ ನೈವೇದ್ಯ ಹಿಡಿದರು. ನಂತರ, ಕುಟುಂಬದ ಸದಸ್ಯರೆಲ್ಲರೂ ಉಂಡಿಗಳ ಸಮೇತ ಭೋಜನ ಸವಿದು ಹಬ್ಬದ ಆಚರಣೆಯನ್ನು ಸಂಭ್ರಮಿಸಿದರು.
ಜೋಕಾಲಿ ಸಡಗರ: ಹಾವೇರಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮರಗಳಿಗೆ ಹಗ್ಗದ ಜೋಕಾಲಿ ಕಟ್ಟಲಾಗಿತ್ತು. ಬಾಲಕಿಯರು ಹಾಗೂ ಮಹಿಳೆಯರು, ಜೋಕಾಲಿ ಏರಿ ಜೀಕಿ ಸಂಭ್ರಮಿಸಿದರು.
ಮನೆಗಳಲ್ಲಿಯೂ ಸಣ್ಣ ಪ್ರಮಾಣದಲ್ಲಿ ಜೋಕಾಲಿಗಳನ್ನು ಕಟ್ಟಲಾಗಿತ್ತು. ಮಕ್ಕಳು ಜೋಕಾಲಿ ಜೀಕಿ ನಗು ಬೀರಿದರು.
‘ಬುಧವಾರ ರೊಟ್ಟಿ ಪಂಚಮಿ ಮೂಲಕ ನಾಗರ ಪಂಚಮಿ ಆಚರಣೆಗಳೂ ಆರಂಭವಾಗಿದೆ. ಗುರುವಾರ ನಾಗಪ್ಪನಿಗೆ ಹಾಲೆರೆಯಲಾಗಿದೆ. ಶುಕ್ರವಾರ ಗಂಗಮ್ಮನ ಪೂಜೆ ಇದೆ. ನೀರಿನ ಮೂಲಗಳಿಗೆ ಹೋಗಿ ವಿಶೇಷ ಪೂಜೆ ಮಾಡಲಾಗುವುದು. ಭಾನುವಾರ ವರ್ಷ ತೊಡಕುವರೆಗೂ ಆಚರಣೆ ಇರಲಿದೆ’ ಎಂದು ಬೂದಗಟ್ಟಿ ಗ್ರಾಮದ ನಿವಾಸಿ ನಿಂಗಪ್ಪ ಹೊಸಮನಿ ಹೇಳಿದರು.
ಗ್ರಾಮೀಣ ಕ್ರೀಡೆಯಲ್ಲಿ ಪುರುಷರ: ನಾಗರ ಪಂಚಮಿ ಮಹಿಳೆಯರ ಹಬ್ಬವೆಂದೇ ಹೇಳಲಾಗುತ್ತದೆ. ಮಹಿಳೆಯರು, ಹಬ್ಬದ ಸಡಗರದಲ್ಲಿ ಮನೆಯಲ್ಲಿ ಪೂಜೆ ಮಾಡಿದರು. ಕುಟುಂಬಸ್ಥರು, ಅಕ್ಕ–ಪಕ್ಕದ ನಿವಾಸಿಗಳು ಹಾಗೂ ಸಂಬಂಧಿಕರ ಜೊತೆ ಸೇರಿ ಸಂಭ್ರಮಿಸಿದರು. ಪುರುಷರು, ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿದ್ದ ದೃಶ್ಯಗಳು ಹಲವೆಡೆ ಕಂಡುಬಂದವು.
ಬಸವ ಪಂಚಮಿ; ಮಕ್ಕಳಿಗೆ ಹಾಲು ವಿತರಣೆ ನಾಗರ ಪಂಚಮಿಯಂದು ಹಾಲು ವ್ಯರ್ಥ ಮಾಡದಂತೆ ಜನರಲ್ಲಿ ತಿಳಿವಳಿಕೆ ಮೂಡಿಸಲು ಗುರುವಾರ ಬಸವ ಪಂಚಮಿ ಆಚರಿಸಿದ ಬಸವ ಬಳಗದ ಸದಸ್ಯರು ನಾಗೇಂದ್ರನಮಟ್ಟಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಹಾಲು ವಿತರಿಸಿದರು. ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಚನ್ನಬಸವಣ್ಣ ರೊಡ್ಡನವರ ಶಿವಯೋಗಿ ಬೆನ್ನೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.